
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು (ಮೇ 4) ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನವನಗರದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಮತ ಎಣಿಕೆ ಪ್ರಾರಂಭಕ್ಕೂ ಮುನ್ನವೇ ಅಧಿಕಾರಿಗಳು ಭದ್ರತಾ ಕ್ರಮಗಳ ನಡುವೆಯೇ ಸ್ಟ್ರಾಂಗ್ ರೂಮ್‌ಗಳನ್ನು ತೆರೆಯುವ ಕಾರ್ಯವನ್ನು ಕೈಗೊಂಡರು. ಇವಿಎಮ್‌ಗಳು ಹಾಗೂ ಅಂಚೆ ಮತಪತ್ರಗಳನ್ನು ಸಂಗ್ರಹಿಸಲಾಗಿದ್ದ ಒಟ್ಟು ಎರಡು ಸ್ಟ್ರಾಂಗ್ ರೂಮ್‌ಗಳನ್ನು ಜನರಲ್ ಅಬ್ಸರ್ವರ್ ಪಾರುಲ್, ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ್ ತೇಲಿ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ್ ಕುರೇರ ಮತ್ತು ಚುನಾವಣಾಧಿಕಾರಿ ಸಂತೋಷ ಜಗಲಾಸರ್ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಅಭ್ಯರ್ಥಿಗಳ ಏಜೆಂಟ್‌ಗಳೂ ಈ ವೇಳೆ ಹಾಜರಿದ್ದರು. ಸ್ಟ್ರಾಂಗ್ ರೂಮ್‌ಗಳನ್ನು ತೆರೆಯುವ ವೇಳೆ ಸಾಲು ಸಾಲಾಗಿ ಇಡಲಾಗಿದ್ದ ಇವಿಎಮ್ ಯಂತ್ರಗಳು ಹಾಗೂ ಅಂಚೆ ಮತಪತ್ರಗಳ ವ್ಯವಸ್ಥೆ ಪರಿಶೀಲಿಸಲಾಯಿತು.
ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಡುವೆ ನೇರ ಪೈಪೋಟಿ ಕಂಡುಬಂದಿದ್ದು, ಫಲಿತಾಂಶ ಯಾವತ್ತಿಗೆ ತಿರುಗುತ್ತದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರು ಇದ್ದು, ಇವರಲ್ಲಿ 1,78,273 ಮಂದಿ ಮತ ಚಲಾಯಿಸಿದ್ದಾರೆ. ಇದರಿಂದ ಒಟ್ಟು ಶೇ. 68.62ರಷ್ಟು ಮತದಾನ ದಾಖಲಾಗಿದೆ.
ಪುರುಷ ಮತದಾರರು: 1,26,999 ಮತದಾನ ಮಾಡಿದವರು: 88,241 (ಶೇ. 69.48) ಮಹಿಳಾ ಮತದಾರರು: 1,32,775 ಮತದಾನ ಮಾಡಿದವರು: 90,024 (ಶೇ. 67.80) ಇತರೆ ಮತದಾರರು: 08 ನಗರ ಪ್ರದೇಶದಲ್ಲಿ ಶೇ. 61.25ರಷ್ಟು ಮತದಾನವಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ. 74.61ರಷ್ಟು ಮತದಾನವಾಗಿರುವುದು ಗಮನಾರ್ಹವಾಗಿದೆ.
ಒಟ್ಟು 322 ಮತಗಟ್ಟೆಗಳ ಮತಗಳನ್ನು ಎಣಿಸಲಾಗುತ್ತಿದ್ದು, 14 ಟೇಬಲ್‌ಗಳ ಮೂಲಕ 23 ಸುತ್ತುಗಳಲ್ಲಿ ಇವಿಎಮ್ ಮತ ಎಣಿಕೆ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗೆ ಒಂದು ಟೇಬಲ್ ಹಾಗೂ ಇಟಿಪಿಬಿಎಸ್ (ಸೇವಾ ಮತದಾರರ) ಸ್ಕ್ಯಾನಿಂಗ್‌ಗಾಗಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇವಿಎಮ್ ಮತ ಎಣಿಕೆ: ರೂಂ ನಂ. 4 (ನೆಲಮಹಡಿ) ಅಂಚೆ ಮತ ಎಣಿಕೆ: ರೂಂ ನಂ. 9 ಇಟಿಪಿಬಿಎಸ್ ಸ್ಕ್ಯಾನಿಂಗ್: ರೂಂ ನಂ. 9
ಪ್ರತಿ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್ ನೇಮಕ ಮಾಡಲಾಗಿದೆ. ಒಟ್ಟಾರೆ 63 ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಅಂಚೆ ಮತಗಳು 270 ಇದ್ದು, ಇಟಿಪಿಬಿಎಸ್ (ಸೇವಾ ಮತದಾರರು) 120 ಮತಗಳು ದಾಖಲಾಗಿವೆ. ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಮನೆಯಲ್ಲೇ ಮತ ಚಲಾಯಿಸಿದ ಪಿಡಬ್ಲ್ಯೂಡಿ ಮತಗಳು 273 ಇವೆ.
ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟು 900ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರಲ್ಲಿ:
1 ಎಸ್‌ಪಿ, 1 ಎಎಸ್ಪಿ 2 ಡಿವೈಎಸ್‌ಪಿ 17 ಸಿಪಿಐ, 60 ಪಿಎಸ್‌ಐ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ
ಇದಲ್ಲದೆ 3 ಕೆಎಸ್ಆರ್‌ಪಿ ತುಕುಡಿಗಳು, 15 ಡಿಎಆರ್ ಹಾಗೂ 32 ಸಿಎಪಿಎಫ್ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮತ ಎಣಿಕೆ ಹಿನ್ನೆಲೆ, ಮೇ 4ರ ಬೆಳಿಗ್ಗೆ 6 ಗಂಟೆಯಿಂದ ಮೇ 5ರ ಬೆಳಿಗ್ಗೆ 6 ಗಂಟೆಯವರೆಗೆ ಬಿಎನ್‌ಎಸ್ 163ರಡಿ ನಿಷೇಧಾಜ್ಞೆ ಜಾರಿಯಲ್ಲಿದೆ. ಜೊತೆಗೆ ಮೇ 4ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ನಿಷೇಧಾಜ್ಞೆ ಬಾಗಲಕೋಟೆ ಕ್ಷೇತ್ರ ಹಾಗೂ ಅದರ 10 ಕಿಮೀ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ.
ಬೆಳಿಗ್ಗೆ 7 ಗಂಟೆಗೆ ಅಭ್ಯರ್ಥಿಗಳು, ಅವರ ಏಜೆಂಟ್‌ಗಳು ಹಾಗೂ ಚುನಾವಣಾ ಅಧಿಕಾರಿಗಳು ಹಾಜರಿದ್ದು, ಬಳಿಕ ಸ್ಟ್ರಾಂಗ್ ರೂಮ್ ತೆರೆಯುವ ಮೂಲಕ ಮತ ಎಣಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ಕಠಿಣ ಭದ್ರತೆಯ ನಡುವೆ ನಡೆಯುತ್ತಿರುವ ಈ ಮತ ಎಣಿಕೆ ಫಲಿತಾಂಶವು ಬಾಗಲಕೋಟೆ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದು, ಎಲ್ಲರ ದೃಷ್ಟಿ ಇದೀಗ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.