
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೋರಾಗಿ ಮುಂದುವರಿಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪ್ರತಿಯೊಂದು ಸುತ್ತಿನಲ್ಲೂ ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಆರಂಭಿಕ ಸುತ್ತಿನಿಂದಲೇ ಮುನ್ನಡೆ ಸಾಧಿಸಿರುವ ಮೇಟಿ, ಐದನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಭಾರೀ ಮತಗಳ ಅಂತರವನ್ನು ನಿರ್ಮಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು, ಉಮೇಶ್ ಮೇಟಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸುತ್ತಿದ್ದಾರೆ. ಕೈಯಲ್ಲಿ ಪಕ್ಷದ ಬಾವುಟಗಳು, ನಾಯಕರ ಫೋಟೋಗಳನ್ನು ಹಿಡಿದು ಉತ್ಸಾಹಭರಿತವಾಗಿ ಜಯಘೋಷಗಳನ್ನು ಕೂಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಮತ ಎಣಿಕೆ ಕೇಂದ್ರದತ್ತ ಕಾರ್ಯಕರ್ತರು ದೌಡಾಯಿಸುತ್ತಿರುವುದು ಸಹ ಗಮನ ಸೆಳೆಯುತ್ತಿದೆ.
ಇನ್ನೊಂದೆಡೆ, ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಬಳಿ ಕಾಣಿಸದೇ ಇರುವುದರಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಮುನ್ನಡೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮೌನವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಾಲ್ಕನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ನಾಲ್ಕನೇ ಸುತ್ತಿನಲ್ಲೇ ದ್ವಿಗುಣಕ್ಕೂ ಹೆಚ್ಚು ಅಂತರದ ಮುನ್ನಡೆ ಕಾಯ್ದುಕೊಂಡಿರುವುದು ಕಾಂಗ್ರೆಸ್ ಶಿಬಿರದಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ.
ಉಮೇಶ್ ಮೇಟಿ (ಕಾಂಗ್ರೆಸ್): 27,314 ಮತಗಳು
ವೀರಣ್ಣ ಚರಂತಿಮಠ (ಬಿಜೆಪಿ): 13,923 ಮತಗಳು
ಮತಗಳ ಅಂತರ: 13,391
ಒಟ್ಟು 14 ಟೇಬಲ್‌ಗಳ ಮೂಲಕ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಪ್ರತಿ ಸುತ್ತಿನಲ್ಲೂ ಫಲಿತಾಂಶಗಳು ಸ್ಪಷ್ಟವಾಗಿ ಹೊರಬರುತ್ತಿವೆ. ಮುಂದಿನ ಸುತ್ತುಗಳಲ್ಲಿಯೂ ಇದೇ ಟ್ರೆಂಡ್ ಮುಂದುವರಿಯುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ವೈ. ಮೇಟಿ ಅವರ ನಿಧನದಿಂದ ಸ್ಥಾನ ಖಾಲಿಯಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಹಾಗೂ ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದರು.
ಇದಕ್ಕೂ ಮೊದಲು ಮೇಟಿ ಕುಟುಂಬದೊಳಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಮಲ್ಲಿಕಾರ್ಜುನ ಮೇಟಿ ಮತ್ತು ಉಮೇಶ್ ಮೇಟಿ ನಡುವೆ ತೀವ್ರ ಪೈಪೋಟಿ ಉಂಟಾಗಿ, ಪಕ್ಷದೊಳಗಿನ ಭಿನ್ನಮತಕ್ಕೂ ಕಾರಣವಾಗಿತ್ತು. ಆದರೆ ಇದೀಗ ಮತ ಎಣಿಕೆಯಲ್ಲಿ ಉಮೇಶ್ ಮೇಟಿ ಮುನ್ನಡೆ ಸಾಧಿಸುತ್ತಿರುವುದು ಕಾಂಗ್ರೆಸ್‌ಗೆ ದೊಡ್ಡ ಆತ್ಮವಿಶ್ವಾಸ ನೀಡಿದೆ.
ಒಟ್ಟಿನಲ್ಲಿ ಮತ ಎಣಿಕೆಯ ಆರಂಭಿಕ ಸುತ್ತುಗಳಿಂದಲೇ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮುನ್ನಡೆ ಕಾಯ್ದುಕೊಂಡಿದ್ದು, ಫಲಿತಾಂಶ ಕಾಂಗ್ರೆಸ್ ಪರ ತಿರುಗುವ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ಸುತ್ತುಗಳಲ್ಲಿ ಈ ಮುನ್ನಡೆ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.