ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಬಿಜೆಪಿ ಹಾಲಿ ಸಂಸದ ಪಿ.ಸಿ ಗದ್ದಿಗೌಡರ ಕುಟುಂಬದ ಆಸ್ತಿ ಹಾಗೂ ಸಾಲ ಹೆಚ್ಚಳವಾಗಿದೆ. ಅವರು ಸಲ್ಲಿಸಿರುವ ಉಮೇದುವಾರಿಕೆ ಪತ್ರದಲ್ಲಿ ತಮ್ಮ ಆಸ್ತಿಗಳು ಕುರಿತು ಮಾಹಿತಿ ನೀಡಿದ್ದಾರೆ.
ಬಾಗಲಕೋಟೆ(ಏ.19): ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಸಂಸದ ಪಿ.ಸಿ ಗದ್ದಿಗೌಡರು ಗುರುವಾರ ಬೃಹತ್ ಮೆರವಣಿಗೆ ಮೂಲಕ ಸಂಚರಿಸಿ, ನಂತರ ನಾಮಪತ್ರ ಸಲ್ಲಿಸಿದರು.
ಉಮೇದುವಾರಿಕೆ ಸಲ್ಲಿಕೆ ನಂತರ ಬಿವಿವಿ ಸಂಘದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ ಜಗದೀಶ ಶೆಟ್ಟರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ಜಗದೀಶ ಗುಡಗುಂಟಿ, ಸಿದ್ದು ಸವದಿ, ಮಾಜಿ ಸಚಿವ ಸಿ.ಸಿ.ಪಾಟೀಲ, ವಿ.ಪ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಸೇರಿದಂತೆ ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷದ ವಿವಿಧ ನಾಯಕರು ತರೆದ ವಾಹನದಲ್ಲಿ ಮೆರವಣಿಗೆ ಸಾಗಿದರು.
undefined
ನಾನು ಸಿಎಂ ಆದ್ರೆ ಪಾಕಿಸ್ತಾನ ಪರ ಕೂಗೋರನ್ನ ಎನ್‌ಕೌಂಟರ್ ಮಾಡೋಕೆ ಪೊಲೀಸರಿಗೆ ಫುಲ್ ಪರ್ಮಿಷನ್ ಕೊಡ್ತೇನೆ: ಯತ್ನಾಳ್
ಮುಖಂಡರು ವಿಜಯದ ಸಂಕೇತ ತೋರುತ್ತಿದ್ದಂತೆ ಕೇಕೆ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು, ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪಕ್ಷದ ಪರವಾಗಿ ಘೋಷಣೆ ಕೂಗುತ್ತ ಸಾಗಿದರು. ಮಧ್ಯಾಹ್ನದ ಉರಿ ಬಿಸಿಲು ಲೆಕ್ಕಿಸದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪಶು ಆಸ್ಪತ್ರೆ, ಟೆಂಗಿನಮಠ, ಬಸವೇಶ್ವರ ಬ್ಯಾಂಕ್, ಅಡತ ಬಜಾರ, ಪೊಲೀಸ್ ಚೌಕ್, ಎಂ.ಜಿ.ರೋಡ್ ಮೂಲಕ ಹಾಯ್ದು ಬಸವೇಶ್ವರ ವೃತ್ತದಲ್ಲಿ ಮುಕ್ತಾಯಗೊಂಡಿತು. ಝಾಂಝ್ ಪತಾಕ ನಾದಕ್ಕೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಅಬ್ ಕಿ ಬಾರ್ ಚಾರ್ ಸೌ ಪಾರ್, ಮೋದಿ..ಜೈ ..ಜೈ, ಜೈ ಜೈ ಗದ್ದಿಗೌಡರ ಘೋಷಣೆಗಳು ಮೊಳಗಿದವು.
ಗದ್ದಿಗೌಡರ ಆಸ್ತಿ, ಸಾಲ ಹೆಚ್ಚಳ
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಬಿಜೆಪಿ ಹಾಲಿ ಸಂಸದ ಪಿ.ಸಿ ಗದ್ದಿಗೌಡರ ಕುಟುಂಬದ ಆಸ್ತಿ ಹಾಗೂ ಸಾಲ ಹೆಚ್ಚಳವಾಗಿದೆ. ಗುರುವಾರ ಅವರು ಸಲ್ಲಿಸಿರುವ ಉಮೇದುವಾರಿಕೆ ಪತ್ರದಲ್ಲಿ ತಮ್ಮ ಆಸ್ತಿಗಳು ಕುರಿತು ಮಾಹಿತಿ ನೀಡಿದ್ದಾರೆ. 2019ರಲ್ಲಿ ಕುಟುಂಬದ ಆಸ್ತಿ ₹4.39 ಕೋಟಿ ಇತ್ತು. ಈಗ ₹7.57 ಕೋಟಿಗೆ ಹೆಚ್ಚಾಗಿದೆ. ಸಾಲವು ₹79 ಲಕ್ಷದಿಂದ ₹2.44 ಕೋಟಿಗೆ ಹೆಚ್ಚಾಗಿದೆ. ಗದ್ದಿಗೌಡರು ₹82.62 ಲಕ್ಷ ಚರಾಸ್ತಿ, ₹4.05 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಸಾವಿತ್ರಿ ಅವರ ಹೆಸರಿನಲ್ಲಿ ₹17.12 ಲಕ್ಷ ಚರಾಸ್ತಿ ಇದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಪುತ್ರ ಚಂದನಗೌಡ ಅವರ ಹೆಸರಿನಲ್ಲಿ ₹40.80 ಲಕ್ಷ ಚರಾಸ್ತಿ, ₹2.13 ಕೋಟಿ ಸ್ಥಿರಾಸ್ತಿ, ₹1.12 ಕೋಟಿ ಸಾಲವಿದೆ ಎಂದು ಘೋಷಿಸಿದ್ದಾರೆ.