ಸ್ವಂತ ಹಣದಲ್ಲಿ ರಾಮ ಮಂದಿರ ಕಟ್ಟಿ ತೋರಿಸುವಂತೆ ಬಿಜೆಪಿ ಮುಖಂಡರೊಬ್ಬರು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಬಾಗಲಕೋಟೆ, (ಫೆ.20): ರಾಮ ಮಂದಿರ ನಿರ್ಮಾಣ ಜಾಗ ವಿವಾದಿತ, ನಾನು ದೇಣಿಗೆ ಕೊಡಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಜಿಲ್ಲೆಯ ಬಾದಾಮಿ ಕ್ಷೇತ್ರದ ಬಿಜೆಪಿ ಪುರಸಭಾ ಸದಸ್ಯ ನೇರವಾಗಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ನಿಮ್ಮ ಕ್ಷೇತ್ರದ ಬನಶಂಕರಿ ರಸ್ತೆ ಬದಿಯೇ ನನ್ನದು ಹೊಲವಿದೆ. ಆ ಹೊಲದಲ್ಲಿ ಒಂದು ಎಕರೆ ಜಮೀನನ್ನ ನಾನು ದೇಣಿಗೆ ಕೊಡಲು ಸಿದ್ಧನಿದ್ದೇನೆ. ನೀವು ಅಲ್ಲಿ ರಾಮ ಮಂದಿರ ಕಟ್ಟಿ ತೋರಿಸಿ ಎಂದು ಪುರಸಭಾ ಸದಸ್ಯ ಬಸವರಾಜ್ ಗೊರಕೊಪ್ಪನವರ್, ಸಿದ್ದರಾಮಯ್ಯನವರಿಗೆ ಸವಾಲ್ ಹಾಕಿದ್ದಾರೆ.
ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ ಸಿದ್ದು
ಟ್ವೀಟ್ ಮೂಲಕ ಸವಾಲ್ ಹಾಕಿರುವ ಬಸವರಾಜ್, 1 ಎಕರೆ ಜಮೀನು ಜಾಗ ಉಚಿತ ದೇಣಿಗೆ ಕೊಡಲು ನಾನು ಸಿದ್ಧ. ಸಿದ್ದರಾಮಯ್ಯನವರೇ ಇಲ್ಲಿ ರಾಮ ಮಂದಿರ ಕಟ್ಟಿಸಿ ತೋರಿಸಿ ಎಂದಿದ್ದಾರೆ. ಬಾದಾಮಿ ಬಳಿಯ ಬನಶಂಕರಿ ರಸ್ತೆಯ ಪಕ್ಕದಲ್ಲಿ ತಮ್ಮ 9 ಎಕರೆ ಜಮೀನು ಇದ್ದು, ಅದರಲ್ಲಿ 1 ಎಕರೆ ಜಮೀನನ್ನು ಮಿನಿ ರಾಮ ಮಂದಿರಕ್ಕಾಗಿ ದೇಣಿಗೆ ಕೊಡಲು ವಾಗ್ದಾನ ನೀಡಿ, ತಾಯಿ ಬನಶಂಕರಿ ದೇವಿ ಮೇಲೆ ಆಣೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಬಳಿಕವೂ ರಾಮ ಜನ್ಮ ಭೂಮಿ ವಿವಾದಿತ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ನನಗೆ ನೋವಾಗಿದೆ. ಹೀಗಾಗಿ ಉಚಿತವಾಗಿ ನಾನು ಕೊಟ್ಟ ಜಮೀನಿನಲ್ಲಿ ಸಿದ್ದರಾಮಯ್ಯ ಸ್ವಂತ ಹಣದಲ್ಲಿ ಶ್ರೀರಾಮ ಮಂದಿರ ಕಟ್ಟಿಸಲಿ. ಆ 1 ಎಕರೆ ಜಮೀನು ಹಕ್ಕು ಬಿಟ್ಟು ಕೊಡುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.