2018ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸಚಿವ ಶ್ರೀರಾಮುಲು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚನ ಮೂಡಿಸಿದೆ.
ಚಿತ್ರದುರ್ಗ, (ಫೆ.20): ಬಾದಾಮಿ ಕ್ಷೇತ್ರದಲ್ಲಿ ಮತದಾರರು ನನ್ನನ್ನು ಸೋಲಿಸಿಲ್ಲ. ಬದಲಿಗೆ ಬಿಜೆಪಿ ನಾಯಕರೇ ಸೋಲಿಸಿದರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು (ಶನಿವಾರ) ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಬಿಜೆಪಿ ನಾಯಕರೇ ಸೋಲಿಸಿದರು. ಕ್ಷೇತ್ರದ ಮತದಾರರು ಸೋಲಿಸಿಲ್ಲ. ವಾಲ್ಮೀಕಿ ನಾಯಕ ಸಮಾಜದ ಸಣ್ಣ ಕುಲದ ಶ್ರೀರಾಮುಲು ಗೆದ್ದರೆ ನಮಗೆ ಮುಳ್ಳಾಗುತ್ತಾನೆ ಎಂದು ಬಿಜೆಪಿ ನಾಯಕರು ನನ್ನನ್ನು ಸೋಲಿಸಿದರು ಎಂದು ಗಂಭೀರ ಆರೋಪ ಮಾಡಿದರು.
ನಿಲುವು ಬಹಿರಂಗ ಪಡಿಸಿದ ನುಸ್ರತ್, ಬಿಡುಗಡೆಯಾಗುತ್ತಿದೆ ಕಪಿಲ್ ಬಯೋಪಿಕ್; ಫೆ.20ರ ಟಾಪ್ 10 ಸುದ್ದಿ!
ಪ್ರಧಾನಿ ಮೋದಿ, ಅಮಿತ್ ಶಾ ಅವರಂಥವರು ಮಾತ್ರ ಎರಡು ಕಡೆ ಸ್ಪರ್ಧಿಸುತ್ತಾರೆ. ನಮ್ಮ ಪಕ್ಷದ ವರಿಷ್ಠರು ನನಗೂ ಎರಡು ಕಡೆ ಸ್ಪರ್ಧೆಗೆ ಅವಕಾಶ ನೀಡಿದ್ದರು ಎಂದರು.
ಕಳೆದ 2018ರ ಸಾರ್ವತ್ರಿಕೆ ವಿಧಾನಸಭಾ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಜೊತೆ ಸಿದ್ದರಾಮಯ್ಯನವರ ವಿರುದ್ಧ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು.
ಆದ್ರೆ, ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ರೆ, ಬಾದಾಮಿಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪರಾಭವಗೊಂಡಿದ್ದರು. ಆದ್ರೆ, ಇದೀಗ ಹಳೇ ಶ್ರೀರಾಮುಲು ಹಳೇ ವಿಷಯ ಎತ್ತಿ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ.