Rajya Sabha Elections: ಕಾಂಗ್ರೆಸ್‌ನಿಂದ ಮತ್ತೆ ರಾಜ್ಯಸಭೆಗೆ ಜೈರಾಮ್‌ ರಮೇಶ್‌

By Girish GoudarFirst Published May 18, 2022, 12:18 PM IST
Highlights

*  ಲಭ್ಯವಿರುವ ಏಕೈಕ ಸ್ಥಾನಕ್ಕೆ ಹಾಲಿ ಸಂಸದನ ಹೆಸರು ಫೈನಲ್‌?
*  ಹೈಕಮಾಂಡ್‌ನಿಂದ ಆಯ್ಕೆ, ನಾಮಪತ್ರಕ್ಕೆ ಸೂಚನೆ
*  ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿರುವುದು ಒಂದೇ ಸ್ಥಾನ
 

ಬೆಂಗಳೂರು(ಮೇ.18):  ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಲು ಹಲವು ನಾಯಕರು ಪ್ರಯತ್ನ ನಡೆಸಿರುವಾಗಲೇ ಹೈಕಮಾಂಡ್‌ ಜೈರಾಮ್‌ ರಮೇಶ್‌ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದ್ದು, ನಾಮಪತ್ರ ಸಲ್ಲಿಸಲು ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿರುವುದು ಒಂದೇ ಸ್ಥಾನ. ಮತ್ತೊಂದು ಅವಧಿಗೆ ತಾವೇ ರಾಜ್ಯಸಭೆಗೆ ತೆರಳುವ ಆಕಾಂಕ್ಷೆಯನ್ನು ಜೈರಾಮ್‌ ರಮೇಶ್‌ ಹೊಂದಿದ್ದು, ಅದಕ್ಕೆ ಹೈಕಮಾಂಡ್‌ ಕೂಡ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ. ರಾಜ್ಯದ ಬಹುತೇಕ ನಾಯಕರಿಗೆ ಜೈರಾಮ್‌ ರಮೇಶ್‌ ಅವರು ಮತ್ತೊಂದು ಅವಧಿಗೆ ರಾಜ್ಯದಿಂದ ರಾಜ್ಯಸಭೆಗೆ ತೆರಳುವುದು ಇಷ್ಟವಿಲ್ಲ. ಆದರೆ, ಹೈಕಮಾಂಡ್‌ ನಿರ್ಧಾರವಾಗಿರುವುದರಿಂದ ಚಕಾರವೆತ್ತುವ ಧೈರ್ಯವೂ ಇಲ್ಲ.
ಈ ನಡುವೆ, ಹಲವು ನಾಯಕರು ರಾಜ್ಯಸಭೆಗೆ ಪ್ರಯತ್ನ ನಡೆಸಲು ಮುಂದಾಗಿದ್ದು, ಜೈರಾಮ್‌ ರಮೇಶ್‌ ಹೆಸರು ಅಂತಿಮಗೊಂಡಿದೆ ಎಂಬ ಮಾಹಿತಿ ಪಡೆದು ಭ್ರಮನಿರಸನಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯದಿಂದಲೇ ಶುರುನಾ "ಪ್ರಿಯಾಂಕಾ" ರಾಜಕೀಯದಾಟ? ಸಿದ್ದು ಸಿಎಂ ವ್ಯೂಹ.. ಡಿಕೆ "ಗಾಂಧಿ"ವ್ಯೂಹ..!

ಪರಿಷತ್ತು - ಇನ್ನೂ ಸ್ಪಷ್ಟವಿಲ್ಲ:

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಎರಡು ಸ್ಥಾನ ಗೆಲ್ಲುವ ಅವಕಾಶವಿದೆ. ಈ ಎರಡು ಸ್ಥಾನಗಳನ್ನು ಯಾವ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಪಕ್ಷಕ್ಕೆ ಇನ್ನೂ ಸ್ಪಷ್ಟವಿಲ್ಲ. ಮೂಲಗಳ ಪ್ರಕಾರ ಅಲ್ಪಸಂಖ್ಯಾತ (ಕ್ರಿಶ್ಚಿಯನ್‌), ಪರಿಶಿಷ್ಟಜಾತಿ ಅಥವಾ ಲಿಂಗಾಯತ ಈ ಮೂರು ಸಮುದಾಯಗಳ ಪೈಕಿ ಎರಡಕ್ಕೆ ಅವಕಾಶ ನೀಡುವ ಉಮೇದಿ ರಾಜ್ಯ ನಾಯಕರಿಗೆ ಇದೆ. ಆದರೆ, ಅದು ಇನ್ನು ತೀರ್ಮಾನವಾಗಬೇಕಿದೆ.

ಉತ್ತರ ಭಾರತದ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನಗರಕ್ಕೆ ಹಿಂತಿರುಗಿದ ನಂತರ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿ ಸಮುದಾಯ ಯಾವುದು ಎಂಬುದನ್ನು ಅಂತಿಮಗೊಳಿಸಬಹುದು. ಈ ನಡುವೆ, ಈ ಎರಡು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ 20ಕ್ಕೂ ಹೆಚ್ಚು ನಾಯಕರು ಆಕಾಂಕ್ಷಿಗಳಾಗಿದ್ದಾರೆ.

ಅಜ್ಜಿ-ಅಮ್ಮನಂತೆ ಪ್ರಿಯಾಂಕಾಗೂ ರಾಜ್ಯದಿಂದಲೇ ರಾಜಕೀಯ ಭವಿಷ್ಯಕ್ಕೆ ತಿರುವು ಸಿಗುತ್ತಾ?

ಮುಖ್ಯವಾಗಿ ಲಿಂಗಾಯತ ಸಮುದಾಯದಿಂದ ಎಸ್‌.ಆರ್‌.ಪಾಟೀಲ್‌ ಹಾಗೂ ಅಲ್ಲಂ ವೀರಭದ್ರಪ್ಪ ಅವರ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎಸ್‌.ಆರ್‌.ಪಾಟೀಲ್‌ ಅವರ ಪರ ನಿಂತಿದ್ದರೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಲ್ಲಂ ಪರ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಉಳಿದಂತೆ ಅಲ್ಪಸಂಖ್ಯಾತ (ಕ್ರಿಶ್ಚಿಯನ್‌) ಐವಾನ್‌ ಡಿಜೋಜಾ, ರಾಬರ್ಚ್‌, ನಿವೇದಿತ್‌ ಆಳ್ವ, ಪರಿಶಿಷ್ಟಜಾತಿಯಿಂದ ತಿಪ್ಪಣ್ಣ ಕಮಕನೂರು, ಪುಷ್ಪಾ ಅಮರನಾಥ್‌ ಗಂಭೀರವಾಗಿ ಪ್ರಯತ್ನಿಸುತ್ತಿದ್ದಾರೆ. ಇವರಲ್ಲದೆ, ಬಿ.ಎಲ್‌.ಶಂಕರ್‌, ವಿ.ಎಸ್‌.ಉಗ್ರಪ್ಪ, ಎಂ.ಸಿ.ವೇಣುಗೋಪಾಲ್‌, ಎಂ.ಆರ್‌.ಸೀತಾರಾಂ, ವೀಣಾ ಅಚ್ಚಯ್ಯ, ರತ್ನಪ್ರಭ, ಪ್ರಭಾಕರ್‌ ಗೌರ್‌, ಬಿ.ಎಂ.ನಾಗರಾಜ್‌ ಸೇರಿದಂತೆ 20ಕ್ಕೂ ಹೆಚ್ಚು ನಾಯಕರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
 

click me!