
ಬಳ್ಳಾರಿ(ಫೆ.01): ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ ಜತೆಗಿನ ಲಡಾಯಿ ಕುರಿತು ವರಿಷ್ಠರ ಜತೆ ಚರ್ಚಿಸಲು ಮಾಜಿ ಸಚಿವ ಬಿ. ಶ್ರೀರಾಮುಲು ಫೆ.5ರ ಬಳಿಕ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬೇಡಿಕೆ ಇಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ವೈಎಸ್ಸಾರ್ ಕಾಂಗ್ರೆಸ್‌ನ ವಿಜಯಸಾಯಿ ರೆಡ್ಡಿ ಇತ್ತೀಚೆಗೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡುಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ರೆಡ್ಡಿ ಜೊತೆಗೆ ತಿಕ್ಕಾಟ ಬೆನ್ನಲ್ಲೇ ಚಿಗುರಿತು ದೋಸ್ತಿ: ರಾಮುಲು, ಜಾರಕಿಹೊಳಿ ಈಗ ಭಾಯಿ- ಭಾಯಿ!
ಸತತ ಎರಡು ಚುನಾವಣೆಗಳಲ್ಲಿ ಸೋಲುಂಡ ಶ್ರೀರಾಮುಲು ಅವರು ಸದ್ಯ ರಾಜಕೀಯ ಅಜ್ಞಾತವಾಸ ಅನುಭವಿಸುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ವರ್ಚಸ್ವಿ ನಾಯಕ ಎನಿಸಿರುವ ಶ್ರೀರಾಮುಲು, ರಾಜ್ಯಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಿದರೆ ಪಕ್ಷಸಂಘಟನೆಗೆ ಅನುಕೂಲವಾಗಲಿದೆ. ಪಕ್ಷದ ಬೆಳವಣಿಗೆ ಹಿನ್ನೆಲೆಯಲ್ಲಿ ಶ್ರೀರಾಮುಲುಗೆ ಪಕ್ಷದ ಹೈಕಮಾಂಡ್ ರಾಜ್ಯಸಭಾ ಸ್ಥಾನ ನೀಡುವ ಸಾಧ್ಯತೆಯಿದೆ. ಈ ಕುರಿತು ದೆಹಲಿಗೆ ತೆರಳಿದ ವೇಳೆ ಚರ್ಚೆ ನಡೆಯಲಿದೆ ಎಂದು ಶ್ರೀರಾಮುಲು ಅವರ ಆಪ್ತ ಮೂಲಗಳು ತಿಳಿಸಿವೆ.
ಶಾಸಕ ಜನಾರ್ದನ ರೆಡ್ಡಿ ಜೊತೆಗಿನ ಅಸಮಾಧಾನ ಸ್ಫೋಟದ ಬಳಿಕ ಶ್ರೀರಾಮುಲು ಅವರನ್ನು ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಹ್ವಾನಿಸಿದ್ದು, ಇಷ್ಟರಲ್ಲಿಯೇ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.