
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನದ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲು ನಿರ್ಧರಿಸಲಾಗಿದೆ.
ಬಳಿಕ ಸಂಜೆ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಸಾರ್ವಜನಿಕವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಅಭಿನಂದಿಸುವ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಬಹುತೇಕ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ರಾಜ್ಯದ ಮಧ್ಯ ಭಾಗವಾದ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಬಗ್ಗೆ ಅಲ್ಲಿನ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತಿತರ ನಾಯಕರು ಒಲವು ತೋರಿದ್ದಾರೆ ಎನ್ನಲಾಗಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನದ 50 ವರ್ಷಗಳನ್ನು ಪೂರೈಸುತ್ತಿದ್ದಾರೆ. ಹೀಗಾಗಿ, ಬುಧವಾರ ರಾಜ್ಯ ಕಾರ್ಯಕಾರಿಣಿಯಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮವೂ ನೆರವೇರಲಿದೆ. ಅವರ ರಾಜಕೀಯ ಜೀವನದ ಹಿನ್ನೋಟವನ್ನು ನೆನಪಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
1976ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಯಡಿಯೂರಪ್ಪ ಅವರು ಶಿಕಾರಿಪುರ ಪುರಸಭೆ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಸುದೀರ್ಘ ರಾಜಕಾರಣದ ಹಾದಿ ಸವೆಸಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರದ ಗದ್ದುಗೆ ಏರುವವರೆಗೆ ಶ್ರಮಿಸಿದ ಯಡಿಯೂರಪ್ಪ ಅವರು ಸದ್ಯ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರೂ ಪಕ್ಷದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.