ತೀರ್ಥಹಳ್ಳಿ (ಆ.2) : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಹಾಗೂ ದುರಾಡಳಿತವನ್ನು ಖಂಡಿಸಿ ಕೆಪಿಸಿಸಿ ಸೂಚನೆಯಂತೆ ಆಗಸ್ಟ್ 8 ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಲೂಕಿನ ಆಗುಂಬೆ(Agumbe) ಆಗುಂಬೆ ಹೋಬಳಿಯ ಜನರು ಮಳೆ ಹಾನಿ, ಕಾಡುಕೋಣ, ಕಾಡಾನೆ, ಮಂಗಗಳು ಸೇರಿದಂತೆ ಕಾಡು ಪ್ರಾಣಿಗಳ ಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಮಂಡಗದ್ದೆ ಹೋಬಳಿಯ ಸಿಂಗನಬಿದಿರೆ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಮೂಗುಡ್ತಿಯಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಹಾನಿ ಸಂಭವಿಸಿದ್ದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಮಳೆಹಾನಿಯಿಂದಾದ ನಷ್ಟದ ಬಗ್ಗೆಯೂ ಈ ವರೆಗೆ ಎಲ್ಲರಿಗೂ ಪರಿಹಾರ ದೊರೆತಿಲ್ಲಾ. ಕೆಲವರಿಗೆ ನೀಡಿರುವ ಪರಿಹಾರ ಅತ್ಯಂತ ಕನಿಷ್ಠವಾಗಿದೆ ಎಂದು ಆರೋಪಿಸಿದರು.
ಪರಿಷ್ಕೃತ ಪಠ್ಯ ವಿರುದ್ಧ ಕಾಂಗ್ರೆಸ್ ಕುಪ್ಪಳಿ- ತೀರ್ಥಹಳ್ಳಿ ಪಾದಯಾತ್ರೆ: ಕಿಮ್ಮನೆ ರತ್ನಾಕರ್
ಕೋಮು ದಳ್ಳುರಿಯಿಂದ ಇಡೀ ರಾಜ್ಯ ಹತ್ತಿ ಉರಿಯುತ್ತಿದ್ದರೂ ಇದನ್ನು ನಿಯಂತ್ರಿಸಬೇಕಾದ ಗೃಹ ಸಚಿವರು ತೀರ್ಥಹಳ್ಳಿಯಲ್ಲೇ ಇದ್ದು ದೂರವಾಣಿ ಮೂಲಕವೂ ವಿವರವನ್ನು ಪಡೆಯಬಹುದಾದ ಕೆಡಿಪಿ ಸಭೆ ನಡೆಸಿರುವುದು ಸಚಿವರ ಬೇಜವಾಬ್ದಾರಿ ವರ್ತನೆಯಾಗಿದೆ. ಕೊಲೆಯಾದ ಪ್ರವೀಣ್ ನೆಟ್ಟಾರು ಹಾಗೂ ಫಾಜಿಲ್ ಮನೆಗಳಿಗೂ ಭೇಟಿ ನೀಡಿಲ್ಲ. ಇವರ ಪಕ್ಷದವರದೇ ಪ್ರತಿಭಟನೆಗೆ ಹೆದರಿ ಊರಿಗೆ ಬಂದು ಕೂತಿದ್ದಾರೆ ಎಂದು ಟೀಕಿಸಿದರು.
ಪ್ರಚೋದನಾಕಾರಿ ಮತ್ತು ಎಡವಟ್ಟು ಹೇಳಿಕೆ ನೀಡುತ್ತಿರುವ ಗೃಹ ಸಚಿವರು 2015ರಲ್ಲಿ ಶಿವಮೊಗ್ಗದಲ್ಲಿ ನಡೆದ ಎರಡು ಕೊಲೆ ಘಟನೆಗೆ ಸಂಬಂಧಿಸಿ ನಾವು ‘ಬಿ’ ರಿಪೋರ್ಚ್ ಹಾಕಿದ್ದೇವೆ ಎಂದು ನೀಡಿರುವ ಹೇಳಿಕೆ ಬಾಲಿಷವಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ಬಗ್ಗೆ ಸದನದಲ್ಲೂ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಪಿಎಸ್‌ಐ ಹಗರಣ ಕೂಡ ಅವರ ಇಲಾಖೆಯಲ್ಲಿ ನಡೆದಿದ್ದು, 30 ಮಂದಿ ಜೈಲಿಗೆ ಹೋಗಿದ್ದಾರೆ. ನೈತಿಕತೆ ಇದ್ದಿದ್ದರೆ ರಾಜಿನಾಮೆ ನೀಡಬೇಕಿತ್ತು ಎಂದೂ ಹೇಳಿದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಜನರಿಗೆ ಮಾರಕವಾಗಿರುವ ಈ ಕಾಯ್ದೆ ಬರುವುದು ಖಚಿತವಾಗಿದೆ. ಇವರದೇ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆ ವಿರುದ್ಧ ಹೋರಾಟ ನಡೆಸುವುದು ಕೇಂದ್ರ ಸರ್ಕಾರದ ವಿರುದ್ಧವೋ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೋ? ಅಧಿಸೂಚನೆ ವಿರುದ್ಧ ಹೋರಾಟ ಮಾಡುತ್ತೇವೆಂದು ಸಚಿವರು ಹೇಳುತ್ತಿರುವುದು ಜನರನ್ನು ಹಾದಿ ತಪ್ಪಿಸುವ ತಂತ್ರಗಾರಿಕೆ. ಜನವಿರೋಧಿಯಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತದಲ್ಲಿ ಜನರು ಉಸಿರಾಡುವ ಗಾಳಿಯನ್ನು ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳಿಗೂ ಜಿಎಸ್‌ಟಿ ಹಾಕಲಾಗುತ್ತಿದೆ ಎಂದು ಟೀಕಿಸಿದರು.
ಪಠ್ಯ ವಾಪಸ್ ಪಡೆಯದಿದ್ದರೆ ಕುಪ್ಪಳ್ಳಿಯಿಂದ ಪಾದಯಾತ್ರೆ: ಕಿಮ್ಮನೆ ಎಚ್ಚರಿಕೆ
ಆರ್.ಎಂ. ಮಂಜುನಾಥಗೌಡ ಅವರು ನಡೆಸಿದ ಪಾದಯಾತ್ರೆಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಆ ಪಾದಯಾತ್ರೆ ಅವರ ಖಾಸಗಿ ಕಾರ್ಯಕ್ರಮವಾಗಿದೆ. ಪಕ್ಷದ ಆದೇಶವಾಗಿದ್ದರೆ ನಮ್ಮ ಘಟಕದ ಅದ್ಯಕ್ಷರಿಗೆ ಆ ಬಗ್ಗೆ ಸೂಚನೆ ಬರಬೇಕಿತ್ತು. ನಾನು ಕಾಂಗ್ರೆಸ್ ಆಹ್ವಾನದ ಮೇಲೆ ಪಕ್ಷಕ್ಕೆ ಸೇರಿದವನು. ಕೆಲಸ ಮಾಡಿ ಸೀನಿಯರ್ ಆಗಿದೀನಿ. ಮಂಜುನಾಥಗೌಡ ನನಗೆ ಬೆಂಬಲ ನೀಡುವುದಾಗಿ ಆಶ್ವಾಸನೆ ನೀಡಿ, ಕಡೇ ಗಳಿಗೆಯಲ್ಲಿ ಪಕ್ಷ ಬಿಟ್ಟು ನನ್ನ ವಿರುದ್ಧವೇ ಸ್ಪರ್ಧೆ ಮಾಡಿದರು. ಎಲ್ಲ ಪಕ್ಷಗಳಿಗೂ ಹೋಗಿ ಬಂದು ನಂತರ ನಾನೇ ಸೀನಿಯರ್ ಅನ್ನೋದು ಮತ್ತು ಮೊನ್ನೆ ಬಂದು ತ್ಯಾಗ ಮಾಡಿದೀನಿ ಅಂದ್ರೆ ಹೇಗೆ ಎಂದೂ ಪ್ರಶ್ನಿಸಿದರು.
ತೀರ್ಥಹಳ್ಳಿ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಪಪಂ ಅದ್ಯಕ್ಷೆ ಶಬನಂ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ವಿಶ್ವನಾಥ ಶೆಟ್ಟಿಡಿ.ಎಸ್., ತಾಪಂ ಮಾಜಿ ಸದಸ್ಯ ಬಾಳೇಹಳ್ಳಿ ಪ್ರಭಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಜಯಕರ ಶೆಟ್ಟಿ, ರಾಮಚಂದ್ರ, ಪಡುವಳ್ಳಿ ಹರ್ಷೇಂದ್ರ, ವಿಲಿಯಂ ಮಾರ್ಟಿಸ್ ಇದ್ದರು.