ವಿಧಾನಸಭಾ ಚುನಾವಣೆ: ಅಧಿಕೃತ ಪ್ರಚಾರಾಂದೋಲನಕ್ಕೆ ತೊಡೆತಟ್ಟಿ ನಿಂತ ಸಿದ್ದು-ಡಿಕೆಶಿ: ಬಿಜೆಪಿಗೆ ನಡುಕ!

By Kannadaprabha News  |  First Published Jan 11, 2023, 2:06 AM IST

 ವಿಧಾನಸಭಾ ಚುನಾವಣೆಗೆ ಅಧಿಕೃತ ಪ್ರಚಾರಾಂದೋಲನಕ್ಕೆ ಬುಧವಾರದಿಂದ ಅಧಿಕೃತ ಚಾಲನೆ ನೀಡಲಿರುವ ಕಾಂಗ್ರೆಸ್‌ ಪಕ್ಷವು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ತಂಗಿದ್ದ ಬೆಳಗಾವಿಯ ಗಾಂಧಿಭಾವಿಯಲ್ಲಿ ಡಿ.11ರಿಂದ ‘ಪ್ರಜಾಧ್ವನಿ’ ರಥಯಾತ್ರೆಗೆ ಚಾಲನೆ ನೀಡಲಿದೆ.


ಬೆಂಗಳೂರು (ಜ.11) : ವಿಧಾನಸಭಾ ಚುನಾವಣೆಗೆ ಅಧಿಕೃತ ಪ್ರಚಾರಾಂದೋಲನಕ್ಕೆ ಬುಧವಾರದಿಂದ ಅಧಿಕೃತ ಚಾಲನೆ ನೀಡಲಿರುವ ಕಾಂಗ್ರೆಸ್‌ ಪಕ್ಷವು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ತಂಗಿದ್ದ ಬೆಳಗಾವಿಯ ಗಾಂಧಿಭಾವಿಯಲ್ಲಿ ಡಿ.11ರಿಂದ ‘ಪ್ರಜಾಧ್ವನಿ’ ರಥಯಾತ್ರೆಗೆ ಚಾಲನೆ ನೀಡಲಿದೆ. ಬರೋಬ್ಬರಿ 20 ಜಿಲ್ಲೆಯಲ್ಲಿ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 10 ದಿನಗಳ ಕಾಲ ಜಂಟಿಯಾಗಿ ಸರ್ಕಾರದ ವಿರುದ್ಧ ‘ವಾಕ್ಸಮರ’ ನಡೆಸಲು ಸಜ್ಜಾಗಿದ್ದಾರೆ.

ಜ.11ರಿಂದ 28ರವರೆಗೂ (ಮಧ್ಯೆ ಕೆಲವು ದಿನಗಳ ವಿರಾಮ ಇರಲಿದೆ) 20 ಜಿಲ್ಲೆಯಲ್ಲಿ ಈ ಉಭಯ ನಾಯಕರು ಒಟ್ಟಿಗೇ ಬಸ್‌ ಯಾತ್ರೆಯಲ್ಲಿ ಸಾಗಲಿದ್ದಾರೆ. ಜತೆಗೆ ‘ಬಿಜೆಪಿ ಪಾಪದ ಪತ್ರ’ ಹಾಗೂ ‘ಬಿಜೆಪಿ ಪಾಪದ ಪುರಾಣ’ ಎಂದು ಅಭಿಯಾನ ಆರಂಭಿಸಿದ್ದು, ಜನರ ಹೃದಯ ಗೆಲ್ಲಲು ಮುಂದಾಗಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಂಡಿದ್ದು, ಯಾತ್ರೆ ಸಾಗುವ ದಾರಿಯುದ್ದಕ್ಕೂ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ. ಅಲ್ಲದೆ, ಈಗಿನ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ವಿವರಿಸಿ ತರಾಟೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.

Latest Videos

undefined

Assembly eleciton: ಬಿಜೆಪಿ ಭ್ರಷ್ಟ ಸರ್ಕಾರ: ರಾಜ್ಯವನ್ನುಳಿಸಲು ಕಾಂಗ್ರೆಸ್ ಗೆಲ್ಲಿಸಿ; ಸಿದ್ದರಾಮಯ್ಯ ಕರೆ

ಸರ್ಕಾರದ ವಿರುದ್ಧ ವಿಡಿಯೋ, ಚಾರ್ಜ್‌ಶೀಟ್ ಬಿಡುಗಡೆ

ಬಸ್‌ ಯಾತ್ರೆಯ ವಿವರ ನೀಡಲು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ‘ಬಿಜೆಪಿ ಪಾಪದ ಪುರಾಣ’ ಎಂಬ ವಿಡಿಯೋ ಬಿಡುಗಡೆಗೊಳಿಸಿದರು. ಅದರಲ್ಲಿ ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂಬ ಬಗ್ಗೆ ವಿವರಿಸಲಾಗಿದೆ. ಅದೇ ವೇಳೆ, ‘ಬಿಜೆಪಿ ಪಾಪದ ಪತ್ರ’ ಎಂಬ ಚಾಜ್‌ರ್‍ಶೀಟ್‌ ಬಿಡುಗಡೆ ಮಾಡಿದರು. ಅದರಲ್ಲಿ ಬಿಜೆಪಿ ಸರ್ಕಾರ ನಡೆಸಿದೆ ಎನ್ನಲಾದ ಭ್ರಷ್ಟಾಚಾರಗಳ ವಿವರವಿದೆ.

ಬೊಮ್ಮಾಯಿ ದುರ್ಬಲ ಸಿಎಂ:

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಯಾತ್ರೆಯ ವಿವರ ನೀಡಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್‌, 2018ರಲ್ಲಿ ಬಿಜೆಪಿಯವರಿಗೆ ಜನ ಆಶೀರ್ವಾದ ಮಾಡಲಿಲ್ಲ. ಅನೈತಿಕ ಮಾರ್ಗದಿಂದ ಕೋಟ್ಯಂತರ ರು. ಪಾಪದ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರು. ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯಕ್ಕೆ ದೊಡ್ಡ ಕಳಂಕ ತಂದಿದ್ದು, ಕೇಂದ್ರ ಹೇಳಿದಂತೆ ವರ್ತಿಸುವ ದುರ್ಬಲ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದ ಇತಿಹಾಸದಲ್ಲಿ ಎಂದೂ ಗುತ್ತಿಗೆದಾರರು ಶೇ.40ರಷ್ಟುಲಂಚದ ಆರೋಪ ಮಾಡಿ ಪ್ರಧಾನ ಮಂತ್ರಿ, ರಾಷ್ಟ್ರಪತಿಗೆ ಪತ್ರ ಬರೆದಿರಲಿಲ್ಲ. ನೇಮಕಾತಿ, ಪೋಸ್ಟಿಂಗ್‌, ವರ್ಗಾವಣೆ, ಬಡ್ತಿ ನೀಡಲೂ ಹೋಟೆಲ್‌ ಮೆನುವಿನಂತೆ ಲಂಚದ ಪಟ್ಟಿಮಾಡಿದ್ದಾರೆ. ದ್ವೇಷದ ರಾಜಕಾರಣದಿಂದ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಭಯದಲ್ಲಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.

ಅಲಿಬಾಬಾ ಮತ್ತು 40 ಕಳ್ಳರು:

‘ಈ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರಂತೆ ಆಗಿದೆ. ಆದ್ದರಿಂದ ಸರ್ಕಾರದ ವಿರುದ್ಧ ಆರೋಪ ಪಟ್ಟಿಮಾಡಿ ಜನರ ಮುಂದೆ ಇಡುತ್ತಿದ್ದೇವೆ. ಆಪರೇಷನ್‌ ಕಮಲದಲ್ಲಿ ಹೂಡಿಕೆ ಮಾಡಿ ಶೇ.40 ರಷ್ಟುಕಮೀಷನ್‌ನಲ್ಲಿ ರಿಕವರಿ ಮಾಡುತ್ತಿರುವುದು ಬಿಜೆಪಿಯ ಸಾಧನೆಯಾಗಿದೆ. ‘ಬಿಜೆಪಿ ಪಾಪದ ಪತ್ರ’ ಹಾಗೂ ‘ಬಿಜೆಪಿ ಪಾಪದ ಪುರಾಣ’ವನ್ನು ಜನರ ಮುಂದಿಡಲು ಯಾತ್ರೆ ಕೈಗೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಹೊಸ ವರ್ಷದಲ್ಲಿ ಬದಲಾವಣೆಗಾಗಿ ಕಾಂಗ್ರೆಸ್‌ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಕಳೆದ ಮೂರೂವರೆ ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯ, ನಾವು ಜನರ ಬದುಕಿಗಾಗಿ ಏನು ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಲು ಯಾತ್ರೆ ಆರಂಭಿಸಿದ್ದೇವೆ. ರಾಜ್ಯದ ಬದಲಾವಣೆ ಹಾಗೂ ವಿಜಯಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ. ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಬಂದಿದೆ. ಈ ಕಳಂಕವನ್ನು ನಾವು ದೂರ ಮಾಡಬೇಕು’ ಎಂದು ಕರೆ ನೀಡಿದರು.

‘ಬಿಜೆಪಿಯು 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಎರಡು ತಿಂಗಳಿನಿಂದ ಈ ಬಗ್ಗೆ ಪ್ರಶ್ನೆ ಕೇಳುತ್ತಿದ್ದರೂ ಉತ್ತರಿಸುತ್ತಿಲ್ಲ. ರಾಜ್ಯದಲ್ಲಿ 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪನಿಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಪಿಎಸ್‌ಐ, ಜೆಇಇ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ನಡೆದಿದೆ. ಐಪಿಎಸ್‌, ಐಎಎಸ್‌ ಅಧಿಕಾರಿಗಳು ಜೈಲು ಸೇರುವ ಇತಿಹಾಸ ಸೃಷ್ಟಿಸಲಾಗಿದೆ’ ಎಂದು ಟೀಕಿಸಿದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹಮದ್‌, ಸಂವಹನ ಮತ್ತು ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಜಮೀರ್‌ ಅಹಮದ್‌ ಮತ್ತಿತರರು ಹಾಜರಿದ್ದರು.

ಪ್ರಜಾಧ್ವನಿ ವೆಬ್‌ಸೈಟ್‌, ಸಹಾಯವಾಣಿ

‘ರಾಜ್ಯದ ಜನತೆ ಕರುನಾಡಿಗಾಗಿ ನಮ್ಮ ಜೊತೆ ಕೈಜೋಡಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಬದಲಾವಣೆ ತರೋಣ. ನಿಮ್ಮ ಹಕ್ಕಿಗಾಗಿ ನಾವು ಹೋರಾಟ ನಡೆಸುತ್ತೇವೆ. ಇದಕ್ಕಾಗಿ p್ಟa್ಜadhಡಿa್ಞಜಿ.್ಚಟಞ ವೆಬ್‌ಸೈಟ್‌ ಆರಂಭಿಸಿದ್ದು, ಸಹಾಯವಾಣಿ ಸಂಖ್ಯೆ 9537 224 224 ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ನಿಮ್ಮ ಅಭಿಪ್ರಾಯವನ್ನು ತಿಳಿಸಿ’ ಎಂದು ಸಿದ್ದು, ಡಿಕೆಶಿ ಮನವಿ ಮಾಡಿದರು.

ಬಸ್‌ ಪರಿಶೀಲಿಸಿದ ಡಿಕೆಶಿ

ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ‘ಪ್ರಜಾಧ್ವನಿ’ ಯಾತ್ರೆಗೆ ಸಜ್ಜಾಗಿದ್ದ ಬಸ್‌ ಪರಿಶೀಲಿಸಿದರು. ಬಸ್‌ಗೆ ಅಂಟಿಸಿದ್ದ ಸ್ಟಿಕರ್‌ ಅನ್ನು ಮುಟ್ಟಿನೋಡಿದ ಬಳಿಕ ಬಸ್‌ನ ಒಳಗೆ ತೆರಳಿ ವ್ಯವಸ್ಥೆಗಳನ್ನು ವೀಕ್ಷಿಸಿದರು.

ಬಿಜೆಪಿ ಪಾಪದ ಪುರಾಣ ವಿಡಿಯೋ’ ಬಿಡುಗಡೆ

ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ನಾಯಕರು, ‘ಬಿಜೆಪಿ ಪಾಪದ ಪುರಾಣ’ ಎಂಬ ವಿಡಿಯೋ ಬಿಡುಗಡೆಗೊಳಿಸಿದರು. ಸರ್ಕಾರಿ ಶಾಲೆಗಳು ಬಿರುಕು ಬಿಟ್ಟಿವೆ. ಚರ್ಮಗಂಟು ರೋಗದಿಂದ ಜಾನುವಾರುಗಳು ಸಾಯುತ್ತಿವೆ. ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಇಲ್ಲ ಎಂಬುದು ಸೇರಿ ಹಲವು ಆರೋಪಗಳನ್ನು ಮಾಡಿದ್ದು, ಸಂವಿಧಾನ ಉಳಿಸಲು ಕಾಂಗ್ರೆಸ್‌ ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.

‘ಬಿಜೆಪಿ ಪಾಪದ ಪತ್ರ’ ಚಾಜ್‌ರ್‍ಶೀಟಲ್ಲಿ ಆರೋಪದ ಮಳೆ

‘ಬಿಜೆಪಿ ಪಾಪದ ಪತ್ರ’ ಚಾಜ್‌ರ್‍ಶೀಟ್‌ನಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆರೋಪಗಳ ಸುರಿಮಳೆಗೈದಿದೆ. ವ್ಯಾಪಕ ಭ್ರಷ್ಟಾಚಾರದಿಂದ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಾಣೆಯಾದ ಮಹಿಳೆಯರ ಪ್ರಕರಣಗಳ ಸಂಖ್ಯೆ ಶೇ.48 ರಷ್ಟುಹೆಚ್ಚಳವಾಗಿದೆ. ಹಾಲು, ಮೊಸರು. ಅಡುಗೆ ಅನಿಲ ಸಿಲಿಂಡರ್‌ ಬೆಲೆ ಗಗನಕ್ಕೇರಿದ್ದು ಗೃಹಿಣಿಯರು ತತ್ತರಿಸಿ ಹೋಗಿದ್ದಾರೆ. ಒಕ್ಕಲಿಗರು ಮತ್ತು ಬಿಲ್ಲವರ ಅಭಿವೃದ್ಧಿಗೆ ಮೀಸಲಿಟ್ಟಹಣದಲ್ಲಿ ನಯಾ ಪೈಸೆಯನ್ನೂ ನೀಡಿಲ್ಲ ಎಂಬುದು ಸೇರಿ ಹಲವು ಆರೋಪ ಮಾಡಲಾಗಿದೆ.

click me!