Assembly election: ಕೋಲಾರ ಬಳಿಕ ಚಾಮರಾಜಪೇಟೆಯಲ್ಲಿ ಸಿದ್ದು ಮಿಂಚಿನ ಸಂಚಾರ

By Kannadaprabha NewsFirst Published Jan 11, 2023, 12:40 AM IST
Highlights

ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇಲ್ಲಿಂದಲ್ಲೇ ಸ್ಪರ್ಧಿಸಿ ಎಂದು ಸ್ಥಳೀಯರಿಂದ ಒತ್ತಾಯ ಕೇಳಿಬಂದಿರುವ ಮತ್ತೊಂದು ಕ್ಷೇತ್ರವಾದ ಚಾಮರಾಜಪೇಟೆಗೆ ಮಂಗಳವಾರ ಭೇಟಿ ನೀಡಿ ಮಿಂಚಿನ ಸಂಚಾರ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು (ಜ.11) : ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇಲ್ಲಿಂದಲ್ಲೇ ಸ್ಪರ್ಧಿಸಿ ಎಂದು ಸ್ಥಳೀಯರಿಂದ ಒತ್ತಾಯ ಕೇಳಿಬಂದಿರುವ ಮತ್ತೊಂದು ಕ್ಷೇತ್ರವಾದ ಚಾಮರಾಜಪೇಟೆಗೆ ಮಂಗಳವಾರ ಭೇಟಿ ನೀಡಿ ಮಿಂಚಿನ ಸಂಚಾರ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ.

ಮುಂದಿನ ಚುನಾವಣೆ(Assembly election)ಯಲ್ಲಿ ಕೋಲಾರ(Kolar), ವರುಣ, ಬಾದಾಮಿ ಕ್ಷೇತ್ರಗಳಂತೆ ಚಾಮರಾಜಪೇಟೆ(Chamarajapete) ಕ್ಷೇತ್ರದಿಂದಲೂ ಸಿದ್ದರಾಮಯ್ಯ(Siddaramaiah) ಅವರು ಸ್ಪರ್ಧಿಸಬೇಕು ಎಂದು ಒತ್ತಡವಿತ್ತು. ಕೋಲಾರದಿಂದ ಸ್ಪರ್ಧೆಯ ಘೋಷಣೆ ಮಾಡಿದ ಮರು ದಿನವೇ ಈ ಕ್ಷೇತ್ರದಲ್ಲಿ ಸಂಚಾರ ನಡೆಸಿ, ಅನ್ಯ ಪಕ್ಷದ ಹಲವರ ಸೇರ್ಪಡೆ ಕಾರ್ಯಕ್ರಮದಲ್ಲೂ ಸಿದ್ದರಾಮಯ್ಯ ಪಾಲ್ಗೊಂಡಿದ್ದು ಹಲವರ ಹುಬ್ಬೇರುವಂತೆ ಮಾಡಿದೆ.

ಸಿದ್ದರಾಮಯ್ಯ ನಾಯಿಮರಿ ಹೇಳಿಕೆಗೆ ಜ್ಞಾನಿಯಂತೆ ಉತ್ತರಿಸಿದ ಸಿಎಂ ಬೊಮ್ಮಾಯಿ: ಸಿದ್ದುಗೆ ನಾಚಿಕೆ..!

ತಮ್ಮ ಆಪ್ತ, ಶಾಸಕ ಜಮೀರ್‌ ಅಹಮದ್‌(MLA Zameer Ahmed) ಜತೆ ಮಂಗಳವಾರ ಚಾಮರಾಜಪೇಟೆ ಕ್ಷೇತ್ರದ ವಿವಿಧೆಡೆ ಸಂಚರಿಸಿ ಪಕ್ಷದ ಕೆಲ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಬಳಿಕ ಕ್ಷೇತ್ರದಲ್ಲಿ ಆಯೋಜಿಸಿದ್ದ ಅನ್ಯ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ, ಜೆಡಿಎಸ್‌ನ ಬಿಬಿಎಂಪಿಯ ವಿವಿಧ ಮಾಜಿ ಕಾರ್ಪೊರೇಟರ್‌ಗಳು, ಮುಖಂಡರನ್ನು ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟಬಹುಮತದೊಂದಿಗೆ ನೂರಕ್ಕೆ ನೂರರಷ್ಟುಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

ಬಿಜೆಪಿ(BJP) ಒಂದು ಕೋಮುವಾದಿ ಪಕ್ಷ, ಅವರ ಪಾರ್ಟಿಯಲ್ಲಿ ದಲಿತರು, ಹಿಂದುಳಿದವರಿಗೆ, ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಬಹಿರಂಗವಾಗಿಯೇ ಅಲ್ಪಸಂಖ್ಯಾತರು, ದಲಿತರ ವಿರೋಧ ಮಾಡುತ್ತಾರೆ. ಅಲ್ಲದೆ, ಈ ಸರ್ಕಾರದ ಭಷ್ಟಾಚಾರದಿಂದ ಜನ ರೋಸಿಹೋಗಿದ್ದಾರೆ. ಇಂತಹ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಅಧಿಕಾರದಿಂದ ಕಿತ್ತೊಗೆಯಲು ಕಾಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರರಷ್ಟುಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಎಲ್ಲ ಧರ್ಮ, ಜಾತಿ, ಜನಾಂಗದವರೂ ಒಂದೇ ಎಂಬ ಸಂವಿಧಾನದ ಆಶಯಕ್ಕೆ ಬದ್ಧವಾಗಿರುವ ಕಾಂಗ್ರೆಸ್‌. ಸಮ ಸಮಾಜ ನಿರ್ಮಾಣ ಬಯಸುತ್ತದೆ. ಪ್ರತಿಯೊಬ್ಬ ಪ್ರಜೆ ಹಾಗೂ ಪ್ರತಿ ಸಮಾಜ ಕೂಡ ಸಮಾನಾಗಿರಬೇಕು ಎಂಬುದೇ ನಮ್ಮ ಸಿದ್ಧಾಂತ ಎಂದರು.

ಜಮೀರ್‌ ಜಾತ್ಯತೀತ ನಾಯಕ:

ಶಾಸಕ ಜಮೀರ್‌ ಅಹಮದ್‌ ಜಾತ್ಯತೀತ ನಾಯಕ. ಅವರು ಮುಸ್ಲಿಮರನ್ನು ಹೇಗೆ ಪ್ರೀತಿಸುತ್ತಾರೋ ಹಾಗೆಯೇ ಹಿಂದೂಗಳನ್ನೂ ಪ್ರೀತಿಸುತ್ತಾರೆ. ಇದು ಪ್ರತಿಯೊಬ್ಬರಲ್ಲೂ ಬರಬೇಕು. ಜಮೀರ್‌ಗೆ ಮುಂದೆ ಒಳ್ಳೆಯ ರಾಜಕೀಯ ಭವಿಷ್ಯವಿದೆ. ಕ್ಷೇತ್ರದ ಜನರು ಅವರ ಕೈ ಬಲಪಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ಯಾವ ಪಕ್ಷಕ್ಕೆ ನಷ್ಟ?

ತರಾತುರಿಯಲ್ಲಿ ಕಾರ್ಯಕ್ರಮ:

ಚಾಮರಾಜಪೇಟೆ, ಪಾದರಾಯನಪುರ, ಜೆಜೆ ನಗರ ಸೇರಿದಂತೆ ಕ್ಷೇತ್ರದ ವಿವಿಧೆಡೆ ಸಂಚರಿಸಿದ ಸಿದ್ದರಾಮಯ್ಯ ಅವರಿಗೆ ಪಟಾಕಿ ಸಿಡಿಸಿ, ಹಾರ ಹಾಕಿ ಕಾರ್ಯಕರ್ತರು ಸ್ವಾಗತ ನೀಡಿದರು. ಈ ವೇಳೆ ಜಮೀರ್‌ ಆಪ್ತ ಅಲ್ತಾಫ್‌ ಖಾನ್‌ ಅವರ ನಿವಾಸ, ಮಾಜಿ ಸಚಿವ ಪೆರಿಕಲ್‌ ಮಲ್ಲಪ್ಪ ಅವರ ಪುತ್ರ ಶ್ರೀನಿವಾಸ್‌ ಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಕೆಲ ಕಾಲ ಮಾತುಕತೆ ನಡೆಸಿದರು. ಬುಧವಾರ ಬೆಳಗಾವಿಯಿಂದ ಆರಂಭವಾಗಲಿರುವ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಹಿನ್ನೆಲೆಯಲ್ಲಿ ಸಂಜೆ 5ಕ್ಕೆ ಬೆಳಗಾವಿಗೆ ಪ್ರಯಾಣ ಬೆಳೆಸಬೇಕಿದ್ದ ಸಿದ್ದರಾಮಯ್ಯ ಅವರು, ತರಾತುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ, ಜೆಡಿಎಸ್‌ನ ವಿವಿಧ ಮಾಜಿ ಕಾರ್ಪೊರೇಟರ್‌ಗಳು, ಮುಖಂಡರು, ಕಾರ್ಯಕರ್ತರಿಗೆ ಕಾಂಗ್ರೆಸ್‌ ಶಾಲು, ಧ್ವಜ ನೀಡಿ ಬರಮಾಡಿಕೊಂಡು ತೆರಳಿದರು.

click me!