
ವಸಂತಕುಮಾರ ಕತಗಾಲ
ಕಾರವಾರ (ಡಿ.2) : ಮಾಜಿ ಸಚಿವ, ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ. 9 ಬಾರಿ ಚುನಾವಣೆಗೆ ಸ್ಪರ್ಧಿಸಿ 8 ಬಾರಿ ಗೆಲುವು ಸಾಧಿಸಿರುವ ಆರ್.ವಿ. ದೇಶಪಾಂಡೆ ಈ ಕ್ಷೇತ್ರದಲ್ಲಿ ಪ್ರಬಲರಾಗಿದ್ದಾರೆ. ಹಾಲಿ ಶಾಸಕರು ಕೂಡ. ಒಮ್ಮೆ ಮಾತ್ರ ಇವರಿಗೆ ಆಗ ಜೆಡಿಎಸ್‌ನಲ್ಲಿದ್ದ ಸುನೀಲ ಹೆಗಡೆ ಸೋಲಿನ ರುಚಿ ಉಣಿಸುವಲ್ಲಿ ಸಫಲರಾಗಿದ್ದರು. ಆನಂತರ ಮತ್ತೆ ದೇಶಪಾಂಡೆ ಜಯಗಳಿಸಿದರು. ಈಗ ದೇಶಪಾಂಡೆ, ಸುನೀಲ ಹೆಗಡೆ ಕಣಕ್ಕಿಳಿಯುವುದು ಪಕ್ಕಾ ಎನ್ನುತ್ತಿದ್ದಂತೆ ಘೋಟ್ನೇಕರ್ ನಡೆ ತೀವ್ರ ಕುತೂಹಲ ಹುಟ್ಟಿಸಿದೆ.
ಈ ಬಾರಿ ಹಳಿಯಾಳ ಕ್ಷೇತ್ರದ ಟಿಕೆಟ್ ಫೈಟ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚೇನೂ ಇಲ್ಲ. ಈ ಹಿಂದೆ ದೇಶಪಾಂಡೆ ಅವರ ಗರಡಿಯಲ್ಲೇ ಪಳಗಿ, ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ವಿ.ಡಿ. ಹೆಗಡೆ ಹಾಗೂ ಅವರ ಪುತ್ರ ಸುನೀಲ ಹೆಗಡೆ, ದೇಶಪಾಂಡೆ ಅವರಿಂದ ದೂರವಾಗಿ ದೇಶಪಾಂಡೆ ಅವರ ವಿರುದ್ಧವೇ ಚುನಾವಣಾ ಕಣಕ್ಕಿಳಿದು ದೇಶಪಾಂಡೆ ಅವರನ್ನು ಮಣಿಸಿದರು.
Ticket Fight: ಖರ್ಗೆ ತವರು ಕಲಬುರಗಿಯಲ್ಲಿ ಈ ಬಾರಿ ಕೈ- ಕಮಲ ಜಂಗಿ ಕುಸ್ತಿ
ಈಗ ಅಂಥದ್ದೇ ಸನ್ನಿವೇಶ ಮರುಕಳಿಸಿದೆ. ದೇಶಪಾಂಡೆ ಅವರೊಂದಿಗೆ ಬೆಳೆದುಬಂದ ಅವರ ರಾಜಕೀಯ ಪಡಸಾಲೆಯಲ್ಲೇ ರಾಜಕೀಯದ ಪಟ್ಟುಗಳನ್ನು ಕಲಿತ ಎಸ್.ಎಲ…. ಘೋಟ್ನೇಕರ್, ದೇಶಪಾಂಡೆ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿಯೇ ಪಟ್ಟುಹಿಡಿದಿದ್ದರು. ಈಗ ಜೆಡಿಎಸ್ ಅಥವಾ ಬಿಜೆಪಿಗೆ ಹೋಗುತ್ತಾರೆ ಎಂಬ ಊಹಾಪೋಹ ಗಟ್ಟಿಯಾಗುತ್ತಿದೆ. ಮರಾಠರ ಬೆಂಬಲವನ್ನು ನಿರೀಕ್ಷಿಸಿರುವ ಘೋಟ್ನೇಕರ್ ಕಾಂಗ್ರೆಸ್‌ಗೆ ಕೈಕೊಡಲಿರುವ ಸಾಧ್ಯತೆ ಇದೆ.
ಮುಸುಕಿನ ಗುದ್ದಾಟ:
ಕಾಂಗ್ರೆಸ್ ಪಕ್ಷದಲ್ಲಿದ್ದೂ ದೇಶಪಾಂಡೆ ಅವರ ವಿರುದ್ಧ ಮುಸುಕಿನ ಗುದ್ದಾಟ, ಕೆಲವೊಮ್ಮೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಘೋಟ್ನೇಕರ್ ಪಕ್ಷದ ಟಿಕೆಟ್ ಲಭ್ಯವಾಗದು ಎನ್ನುವುದು ಗಟ್ಟಿಯಾಗುತ್ತಿದ್ದಂತೆ ಪಕ್ಷ ತೊರೆಯುವ ಲಕ್ಷಣಗಳು ಕಾಣಿಸುತ್ತಿವೆ.
Assembly Election: ಕಾಂಗ್ರೆಸ್‌ನಲ್ಲಿ ಬಿರುಕು; ಜೋರಾದ ಟಿಕೆಟ್ ಫೈಟ್!
ಈ ಬಾರಿಯೂ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ ಹಾಗೂ ಬಿಜೆಪಿಯ ಸುನೀಲ ಹೆಗಡೆ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಎಸ್.ಎಲ…. ಘೋಟ್ನೇಕರ್ ನಡೆಯ ಬಗ್ಗೆ ಜನತೆ ಕಾತರದಿಂದ ಇದ್ದಾರೆ. ಅವರೇನಾದರೂ ಬೇರೆ ಪಕ್ಷದಿಂದ ಕಣಕ್ಕಿಳಿದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಹಳಿಯಾಳ ಕ್ಷೇತ್ರದಲ್ಲಿ ನಡೆಯಲಿರುವ ಹೋರಾಟ ಜಿಲ್ಲೆಯಾದ್ಯಂತ ಕುತೂಹಲವನ್ನು ಮೂಡಿಸಿದೆ. ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ಈ ಮೂರೂ ತಾಲೂಕುಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಮರಾಠರು ನಿರ್ಣಾಯಕರಾಗಿದ್ದಾರೆ. ಆದರೆ ಮರಾಠೇತರ ಸಮುದಾಯದ ಅಭ್ಯರ್ಥಿಗಳೇ ಇಲ್ಲಿ ಗೆಲುವು ಸಾಧಿಸುತ್ತಿರುವುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.