
ಮೈಸೂರು (ಜು.03): ರಾಜ್ಯದಲ್ಲಿ ಈಗ ಸಮೃದ್ಧಿಯಾದ ಮಳೆಯಾಗಿದೆ. ಇದುವರೆಗೂ ಒಟ್ಟು 20 ಜನ ಮೃತಪಟ್ಟಿದ್ದಾರೆ. ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದೆ. ಸದ್ಯಕ್ಕೆ ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ. ಮುಂದೆ ಮಳೆ ಹೆಚ್ಚಾಗಿ ನಷ್ಟ ಹೆಚ್ಚಾದರೆ ಪರಿಹಾರ ಕೇಳುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಜಾಗಗಳ ರಕ್ಷಿಸುವ ಸರ್ವೆ ಶುರುವಾಗಿದೆ. ಒಟ್ಟು 14 ಲಕ್ಷ ಸರ್ಕಾರಿ ಜಾಗಗಳಿವೆ. ಇವುಗಳಲ್ಲಿ ಒತ್ತುವರಿ ಎಷ್ಟು ಆಗಿದೆ ಎಂಬ ಸರ್ವೆ ಶುರು ಮಾಡಿದ್ದೇವೆ. ಜುಲೈ ಅಂತ್ಯಕ್ಕೆ ಸರ್ವೆ ಮುಗಿಯಲಿದೆ. ನಂತರ ಒತ್ತುವರಿ ತೆರವು ಆರಂಭಿಸುತ್ತೇವೆ. ಸಾರ್ವಜನಿಕವಾಗಿ ಒತ್ತುವರಿ ಜಾಗದ ವಿಚಾರ ತಿಳಿಸಿ ತೆರವು ಮಾಡ್ತಿವಿ ಎಂದು ಹೇಳಿದರು.
ಡಿಸಿಎಂ ಬೇಕಾದವರು ವರಿಷ್ಠರನ್ನು ಕೇಳಲಿ: ಉಪಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಪರೋಕ್ಷವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು. ಯಾರಿಗಾದರೂ ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನು ವರಿಷ್ಠರ ಬಳಿ ಕೇಳಬೇಕು. ಮಾಧ್ಯಮದವರ ಮುಂದೆ ಆಸೆ ಹೇಳಿಕೊಂಡರೆ ಏನು ಪ್ರಯೋಜನ ಹೇಳಿ? ಎಂದು ಕಂದಾಯ ಸಚಿವ ಕೃಷ್ಣೇಬೈರೇಗೌಡ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚಿಸಬೇಕು.
ಮಾಧ್ಯಮದ ಬಳಿ ಜನರ ಸಮಸ್ಯೆ ಕುರಿತು ಚರ್ಚಿಸಿದರೆ ಅದರಿಂದ ಸರ್ಕಾರ, ಜನ ಇಬ್ಬರಿಗೂ ಒಳಿತು. ಆ ವಿಚಾರ ಬಿಟ್ಟು ವೈಯಕ್ತಿಕ ವಿಚಾರ ಚರ್ಚಿಸಿದರೆ ಸರ್ಕಾರಕ್ಕೇ ನಷ್ಟ ಎಂದು ಹೇಳಿದರು. ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂಬ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಸ್ವಾಮೀಜಿಗಳು ಯಾವ ವಿಚಾರ ಎಲ್ಲಿ ಮಾತಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರ್ಕಾರಿ ಸಮಾರಂಭಕ್ಕೆ ಬಂದು ರಾಜಕೀಯ ವಿಚಾರ ಮಾತಾಡಿದರೆ ಹೇಗೆ? ಎಂದು ತಿರುಗೇಟು ನೀಡಿದರು.
ಹಿಂದೂ ಧರ್ಮದ ಚಿಂತನೆಗಳ ಮೇಲೆ ರಾಹುಲ್ ಗಾಂಧಿ ಬೆಳೆದಿಲ್ಲ: ಚಕ್ರವರ್ತಿ ಸೂಲಿಬೆಲೆ
ಉಪಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಸ್ಥಾನದ ಆಕಾಂಕ್ಷೆ ಇರುವವರು ಸರಿಯಾದ ವ್ಯಕ್ತಿಗಳ ಬಳಿ ಹೋಗಿ ವಿಚಾರ ಹೇಳಲಿ. ನಮ್ಮ ನಾಯಕರು ಎಚ್ಚರಿಕೆ ಕೊಟ್ಟ ಮೇಲೂ ಕೆಲವರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು. ಆದರೆ ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.