ಇದೇ ಮೊದಲ ಬಾರಿಗೆ ಗುಜರಾತ್ ಚುನಾವಣೆಯ ಕಣಕ್ಕೆ ಇಳಿದಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಐದು ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾಗಿದೆ. ಆದರೆ, ಈ ಐದೂ ಸೀಟ್‌ಗಳಲ್ಲಿ ಗೆಲ್ಲುವ ಯಾವ ನಿರೀಕ್ಷೆ ಕೂಡ ಆಪ್‌ಗೆ ಇದ್ದಿರಲಿಲ್ಲ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ಕೇಜ್ರಿವಾಲ್, ಮೂರು ಜನರ ಹೆಸರನ್ನು ಪೇಪರ್‌ನಲ್ಲಿ ಬರೆದು ಯಾರ ಫಲಿತಾಂಶ ಏನೇ ಆಗಲಿ ಈ ಮೂರು ಜನ ಗೆಲ್ಲೋದಂತೂ ಪಕ್ಕಾ ಎಂದಿದ್ದರು. ಆಪ್ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ, ಆಪ್ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಹಾಗೂ ಆಲ್ಪೇಶ್ ಕಥಾರಿಯಾ ಗೆದ್ದೇ ಗೆಲ್ಲುತ್ತಾರೆ ಎಂದಿದ್ದರು.
ಅಹಮದಾಬಾದ್ (ಡಿ.8): ಗುಜರಾತಿನಲ್ಲಿ ಬಿಜೆಪಿ ಮತ್ತೊಮ್ಮೆ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತಿದ್ದು, ಕಾಂಗ್ರೆಸ್ ತನ್ನ ಹೀನಾಯ ಸೋಲಿನ ಅಂಚಿನಲ್ಲಿದೆ. ಅದೇ ಸಮಯದಲ್ಲಿ, ಗುಜರಾತ್‌ನಲ್ಲಿ ಮೊದಲ ಬಾರಿಗೆ, ಆಮ್ ಆದ್ಮಿ ಪಕ್ಷವು ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇವುಗಳ ಪೈಕಿ ಐವರು ಗೆಲುವಿನ ಹಾದಿಯಲ್ಲಿದ್ದಾರೆ. ಆದರೆ, ದೆಹಲಿ ಸಿಎಂ ಹಾಗೂ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಾತ್ರ ಈ ಐವರು ಗೆಲುವು ಸಾಧಿಸುವ ನಿರೀಕ್ಷೆಯನ್ನೇ ಮಾಡಿರಲಿಲ್ಲ. ಚುನಾವಣೆಗೂ ಮುನ್ನ ಪ್ರಚಾರದ ವೇಳೆ ಆಪ್ ನಾಯಕ ಸಾರ್ವಜನಿಕವಾಗಿಯೇ ಒಂದು ಕಾಗದದಲ್ಲಿ ಮೂವರು ಆಪ್ ಅಭ್ಯರ್ಥಿಗಳ ಹೆಸರನ್ನು ಬರೆದಿದ್ದರು. ಅದರಲ್ಲಿ ಎಎಪಿಯ ಸಿಎಂ ಮುಖ ಇಸುದನ್ ಗಧ್ವಿ ಮತ್ತು ರಾಜ್ಯಾಧ್ಯಕ್ಷರಾದ ಗೋಪಾಲ್ ಇಟಾಲಿಯಾ ಮತ್ತು ಅಲ್ಪೇಶ್ ಕಥಿರಿಯಾ ಅವರ ಹೆಸರಿದ್ದವು. ಗುಜರಾತ್‌ನಲ್ಲಿ ನಮ್ಮ ಪಕ್ಷದ ಯಾರು ಸೋಲ್ತಾರೋ ಗೊತ್ತಿಲ್ಲ. ಆದರೆ, ಈ ಮೂವರು ಮಾತ್ರ ಗೆದ್ದೇ ಗೆಲ್ತಾರೆ ಎಂದು ಪೇಪರ್ ಮೇಲೆ ಬರೆದುಕೊಡ್ತೀನಿ ಎಂದಿದ್ದರು. ಆದರೆ, ಈ ಮೂವರೂ ಕೂಡ ಬಿಜೆಪಿ ಅಭ್ಯರ್ಥಿಯ ಮುಂದೆ ಸೋಲು ಕಂಡಿದ್ದಾರೆ.
ಆಮ್ ಆದ್ಮಿ ಪಕ್ಷದ (Aam Admi Party) ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಪತ್ರಿಕಾಗೋಷ್ಠಿಯಲ್ಲಿ ಇಸುದನ್ ಗಧ್ವಿ, ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಅಲ್ಪೇಶ್ ಕಥಿರಿಯಾ ಖಂಡಿತವಾಗಿ ಗೆಲುವು ಸಾಧಿಸುತ್ತಾರೆ ಎಂದು ಬರೆದುಕೊಟ್ಟಿದ್ದರು. ಈ ಮೂವರ ಹೆಸರನ್ನೂ ಪೇಪರ್‌ನ ಮೇಲೆ ಬರೆದು ಜನರಿಗೆ ತೋರಿಸಿದ್ದರು. ಆದರೆ, ಇವರೆಲ್ಲರೂ ಚುನಾವಣೆಯಲ್ಲಿ ಸೋಲು ಎದುರಿಸಿದ್ದಾರೆ.
ಖಂಭಾಲಿಯಾ ಕ್ಷೇತ್ರ: ಇಸುದನ್ ಗಧ್ವಿಗೆ ಸೋಲು
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಇಸುದನ್ ಗಧ್ವಿ ಅವರು ದೇವಭೂಮಿ ದ್ವಾರಕಾದ ಖಂಭಾಲಿಯಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರ ಗೆಲುವನ್ನು ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದರು. ಆದರೆ, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಲುಭಾಯ್ ಬೇರಾ 77305, ಆಮ್ ಆದ್ಮಿ ಪಕ್ಷದ ಇಸುದನ್ ಗಧ್ವಿ 58467 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ವಿಕ್ರಮ್ ಮೇಡಂ 44526 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 18838 ಮತಗಳಿಂದ ಇಸುದನ್‌ರನ್ನು ಸೋಲಿಸಿದ್ದಾರೆ.
Gujarat Election Results 2022 Live: ಗುಜರಾತಲ್ಲಿ ಮೋದಿ ನಡೆಸಿದ್ದು 36 ರೋಡ್ ಶೋ, ರಾಹುಲ್ ಗಾಂಧಿ 2!
ಕಟರ್ಗಾಮ್ ಕ್ಷೇತ್ರ: ಗೋಪಾಲ್ ಇಟಾಲಿಯಾಗೆ ಸೋಲು
ಆಮ್ ಆದ್ಮಿ ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಗುಜರಾತಿನ ಕಟರ್ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರ ಅವರ ಗೆಲುವು ಅರವಿಂದ್ ಕೇಜ್ರಿವಾಲ್ ಅವರೂ ಆಗಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿಯ ವಿನು ಮೊರಾಡಿಯಾ 110515 ಮತಗಳನ್ನು ಪಡೆದರೆ, ಗೋಪಾಲ್ ಇಟಾಲಿಯಾ 49,856 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ ಬಿಜೆಪಿ 60,659 ಮತಗಳಿಂದ ಗೆದ್ದಿದೆ.
Gujarat Election Result 2022: ಕಾಂಗ್ರೆಸ್ ಹೀನಾಯ ಸೋಲಿಗೆ ಪಂಚ ಕಾರಣಗಳು
ವರಚ ರೋಡ್ ಕ್ಷೇತ್ರ: ಅಲ್ಪೇಶ್ ಕಥಿರಿಯಾಗೆ ಸೋಲು
ಪಟೇಲ್ ಮೀಸಲಾತಿ ಆಂದೋಲನದ ಪ್ರಮುಖ ಮುಖವಾದ ಅಲ್ಪೇಶ್ ಕಥಿರಿಯಾ ಅವರು ಪಾಟಿದಾರ್ ಭದ್ರಕೋಟೆ ಎಂದು ಪರಿಗಣಿಸಲಾದ ವರಚಾ ರೋಡ್ ಕ್ಷೇತರದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡಿದ್ದರು. ಸ್ವತಃ ಅರವಿಂದ್ ಕೇಜ್ರಿವಾಲ್ , ಅಲ್ಪೇಶ್ ಕತಿರಿಯಾ ದೊಡ್ಡ ಅಂತರದಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದರು, ಆದರೆ ಫಲಿತಾಂಶವು ತಲೆಕೆಳಗಾಗಿದೆ. ಬಿಜೆಪಿ ಅಭ್ಯರ್ಥಿ ಕಿಶೋರ್ ಕನಾನಿ ಅಲ್ಪೇಶ್ ಕತಿರಿಯಾ ಅವರನ್ನು 16834 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 67,206, ಅಲ್ಪೇಶ್ ಕಥಿರಿಯಾ 50,332 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಪ್ರಫುಲ್ಲ ತೊಗಾಡಿಯಾ 2940 ಮತಗಳನ್ನು ಪಡೆದರು.