ಸೋಮಣ್ಣ, ಪುತ್ರಗೆ ಸ್ಥಾನ: ಅಮಿತ್‌ ಶಾ ಭರವಸೆ

By Kannadaprabha NewsFirst Published Mar 16, 2023, 7:53 AM IST
Highlights

ಚಾಮರಾಜನಗರ ರಾಜಕೀಯದಲ್ಲಿ ಸೋಮಣ್ಣಗೆ ಮುಕ್ತ ಸ್ವಾತಂತ್ರ್ಯ, ಪುತ್ರ ಅರುಣ್‌ ಸೋಮಣ್ಣಗೂ ಸಂಘಟನೆಯಲ್ಲಿ ಬಡ್ತಿ, ದಿಲ್ಲಿಯಲ್ಲಿ ಶಾ ಭೇಟಿಯಾಗಿ ನೋವು ತೋಡಿಕೊಂಡ ಸಚಿವ ಸೋಮಣ್ಣ, ನಾನು ಎಲ್ಲವನ್ನೂ ಸರಿಮಾಡ್ತೇನೆಂದು ತಿಳಿಸಿದ ಅಮಿತ್‌ ಶಾ. 

ನವದೆಹಲಿ(ಮಾ.16):  ಕೆಲ ಬಿಜೆಪಿ ಮುಖಂಡರ ನಡೆಯಿಂದ ಬೇಸತ್ತು ತೀವ್ರ ಮುನಿಸಿಕೊಂಡಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಬುಧವಾರ ದೆಹಲಿಗೆ ಭೇಟಿ ನೀಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಕೆಲಕಾಲ ನೋವು ತೋಡಿಕೊಂಡಿದ್ದಾರೆ. ಈ ವೇಳೆ ಚಾಮರಾಜನಗರ ಜಿಲ್ಲಾ ರಾಜಕೀಯದಲ್ಲಿ ಸೋಮಣ್ಣ ಅವರಿಗೆ ಮುಕ್ತ ಅಧಿಕಾರ ನೀಡುವ ಹಾಗೂ ಪುತ್ರ ಅರುಣ್‌ ಸೋಮಣ್ಣಗೆ ಪಕ್ಷ ಸಂಘಟನೆಯಲ್ಲಿ ಬಡ್ತಿ ನೀಡುವ ಭರವಸೆ ಶಾ ಅವರಿಂದ ಸಿಕ್ಕಿದೆ ಎಂದು ಹೇಳಲಾಗಿದೆ.

ದೆಹಲಿಯ ಕೃಷ್ಣಮೆನನ್‌ ರಸ್ತೆಯಲ್ಲಿರುವ ಮನೆಯಲ್ಲಿ ಅಮಿತ್‌ ಶಾ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಜೊತೆ ಭೇಟಿಯಾದ ಸೋಮಣ್ಣ ಅವರು ಸುಮಾರು 10 ನಿಮಿಷ ಕಾಲ ಮಾತುಕತೆ ನಡೆಸಿದರು. ಈ ವೇಳೆ ರಾಜ್ಯ ರಾಜಕೀಯದ ಜತೆಗೆ ಪಕ್ಷದಲ್ಲಿ ತಮಗಾಗುತ್ತಿರುವ ನೋವಿನ ಕುರಿತು ಸೋಮಣ್ಣ ಅವಲತ್ತುಕೊಂಡಿದ್ದಾರೆ ಎನ್ನಲಾಗಿದೆ. ಸೋಮಣ್ಣ ಅವರ ಸಮಸ್ಯೆಯನ್ನು ಆಲಿಸಿದ ಶಾ ಅವರು, ನಾನು ಎಲ್ಲವನ್ನೂ ಸರಿಪಡಿಸುವೆ. ನೀವು ನಿಮ್ಮ ಕಾರ್ಯ ಮುಂದುವರಿಸಿಕೊಂಡು ಹೋಗಿ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ. ಶಾ ಮನೆಯಿಂದ ಸೋಮಣ್ಣ ಅವರು ಖುಷಿಖುಷಿಯಾಗಿಯೇ ಹೊರಬಂದಿದ್ದು, ತಾವು ಹೋದ ಕೆಲಸ ಆಗಿದೆ ಎಂದು ನಂತರ ಹೇಳಿಕೊಂಡಿದ್ದಾರೆ.

Latest Videos

ವಿಜಯೇಂದ್ರಗೆ ಟಿಕೆಟ್‌ ಬಗ್ಗೆ ಚುನಾವಣಾ ಸಮಿತಿ ನಿರ್ಧಾರ: ಬಿಎಸ್‌ವೈ

ಬಿಎಸ್‌ವೈ ಬಗ್ಗೆ ಸಿಟ್ಟಿಲ್ಲ: 

ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಸೋಮಣ್ಣ, ಯಡಿಯೂರಪ್ಪ ಅವರ ಕುರಿತು ಯಾವುದೇ ಸಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ, ಅವರು ಕರೆದರೆ ಹೋಗುತ್ತೇನೆ. ಆದರೆ ಅವರು ಇವತ್ತಿನ ವರೆಗೆ ಕರೆದಿಲ್ಲ. ಯಡಿಯೂರಪ್ಪನವರನ್ನು ದ್ವೇಷಿಸಿ ನನಗೆ ಏನು ಲಾಭ? ಅವರ ಬಗ್ಗೆ ವಿನಾಕಾರಣ ಮಾತನಾಡುವುದು ಅಪ್ರಸ್ತುತ ಎಂದರು.

ಈ ಮಧ್ಯೆ ವಿಜಯೇಂದ್ರ ಕುರಿತ ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿಯೇ ಪ್ರತಿಕ್ರಿಯಿಸಿದ ಸೋಮಣ್ಣ, ಅವರ ವಯಸ್ಸೆಷ್ಟು, ನನ್ನ ವಯಸ್ಸೆಷ್ಟು? ನನಗೆ ಅವರಿಗೆ ಯಾಕೆ ಹೋಲಿಕೆ ಮಾಡುತ್ತೀರಿ? ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅವರು ನಮ್ಮ ಮಾಜಿ ಮುಖ್ಯಮಂತ್ರಿ ಅವರ ಪುತ್ರ. ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಆ ಬಗ್ಗೆ ನನ್ನನ್ನು ಕೇಳಬೇಡಿ ಎಂದರು.

ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ

ಅಮಿತ್‌ ಶಾ ಭೇಟಿಗೂ ಮುನ್ನ ಸೋಮಣ್ಣ ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.

45 ವರ್ಷದಿಂದ ಜನಸೇವೆ ಮಾಡಿದ್ದೇನೆ. ನನಗೆ ವ್ಯಾಮೋಹ ಇಲ್ಲ. ನನ್ನಿಂದ ಬಿಜೆಪಿಗೆ ಅಪಚಾರ ಆಗಲ್ಲ. ಸಿದ್ದಗಂಗಾ ಮಠಕ್ಕೂ ನನಗೂ ಯಾವುದೇ ಮನಸ್ತಾಪ ಇಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೆ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ. ನನಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಜೀವನವೇ ಅದರ ಜತೆ ಬೆರೆತು ಹೋಗಿದೆ ಎಂದು ಇದೇ ವೇಳೆ ತಿಳಿಸಿದರು.

click me!