
ಶಿವಮೊಗ್ಗ (ಡಿ.05): ತೀವ್ರ ಬೆಳೆ ನಷ್ಟದಿಂದ ಬಳಲುತ್ತಿರುವ ಕರ್ನಾಟಕದ ಅಡಿಕೆ ಬೆಳೆಗಾರರಿಗೆ, ಅದರಲ್ಲೂ ವಿಶೇಷವಾಗಿ, ಮಲೆನಾಡು ಪ್ರದೇಶದ ಅಡಿಕೆ ಬೆಳೆಗಾರರ ನೆರವಿಗಾಗಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು. ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಕಲಾಪದಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ವಿಶೇಷವಾಗಿ ಕರ್ನಾಟಕದ, ಅದರಲ್ಲೂ ಮಲೆನಾಡು ಪ್ರದೇಶದ ಅಡಿಕೆ ಬೆಳೆಗಾರರು, ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗ ಹರಡುವಿಕೆಯಿಂದ ಭಾರಿ ಇಳುವರಿ ನಷ್ಟವನ್ನು ಎದುರಿಸುತ್ತಿದ್ದಾರೆ.
ಈ ರೋಗಗಳು ಇಡೀ ತೋಟವನ್ನೇ ನಾಶಮಾಡುತ್ತಿವೆ. ಈ ವರ್ಷದ ಮೇ ತಿಂಗಳಿನಿಂದ ನಿರಂತರ ಮಳೆಯಿಂದಾಗಿ ಹೆಚ್ಚಿರುವ ಈ ರೋಗದ ಪರಿಣಾಮದಿಂದಾಗಿ, ಅಡಕೆ ಬೆಳೆ ಬಹುತೇಕ ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಡಕೆ ಉತ್ಪಾದನೆ ತೀವ್ರವಾಗಿ ಕುಸಿದಿದ್ದು, ತಮ್ಮ ಕ್ಷೇತ್ರದ ರೈತರ ಆರ್ಥಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನಂತಹ ತಕ್ಷಣದ ಪರಿಹಾರ ನೀಡುವ ಸಾಧ್ಯತೆಯ ಬಗ್ಗೆ ಪರಿಶೀಲಿಸಬೇಕು ಮತ್ತು ಆವಶ್ಯಕ ರೋಗ ನಿಯಂತ್ರಣ ಕ್ರಮಗಳನ್ನು ಕೂಡಲೇ ಜಾರಿಗೆ ತರಲು ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಗಂಭೀರ ನ್ಯೂನತೆಗಳ ಬಗ್ಗೆಯೂ ಸರ್ಕಾರದ ಗಮನ ಸೆಳೆದ ಅವರು, 2024-25ರ ಖಾರಿಫ್ ಬೆಲೆ ನಷ್ಟಕ್ಕೆ ಜಿಲ್ಲೆಯ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ 100+ ಮಳೆ ಮಾಪಕಗಳಲ್ಲಿ ಸುಮಾರು ಶೇ. 50 ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯ ಸರ್ಕಾರ ಘೋಷಿಸಿದ ಬ್ಯಾಕಪ್ ಹವಾಮಾನ ಕೇಂದ್ರಗಳನ್ನು ತಡವಾಗಿ ಗುರುತು ಮಾಡಲಾಗಿದೆ ಮತ್ತು ಸಂಪೂರ್ಣ, ವಿಭಿನ್ನ ಮಳೆ ಮಾದರಿ ಹೊಂದಿರುವ ಪ್ರದೇಶಗಳಲ್ಲಿ, 20-45 ಕಿ.ಮೀ ದೂರದಲ್ಲಿ ಗುರುತು ಮಾಡಲಾಗಿದ್ದು, ಇದರಿಂದ ವಿಮೆಯ ಲೆಕ್ಕಾಚಾರದಲ್ಲಿ ತಾಂತ್ರಿಕ ದೋಷಗಳು ಉಂಟಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಕೃಷಿ ಸಚಿವಾಲಯ ತುರ್ತಾಗಿ ಮಧ್ಯಪ್ರವೇಶಿಸಿ, ಹತ್ತಿರದ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಖರವಾದ ಹವಾಮಾನ ಕೇಂದ್ರಗಳ ಡೇಟಾವನ್ನು ಆಧರಿಸಿ, ಡಬ್ಲ್ಯೂಸಿಐಎಸ್ ಪರಿಹಾರವನ್ನು ಮರು ಲೆಕ್ಕಾಚಾರ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿದರು. ದೈನಂದಿನ ಎಸ್‌ಎಂಎಸ್ ಮಳೆ ಮುನ್ನೆಚ್ಚರಿಕೆ ಸೇವೆಯನ್ನು ಕೂಡ ಮರುಸ್ಥಾಪಿಸಬೇಕು.ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ಅಡಿಕೆ ಬೆಳೆಗಾರರಿಗೆ ನೆರವಾಗಲು, ತುರ್ತು ವಿಶೇಷ ಸಹಾಯ ಪ್ಯಾಕೇಜ್ ನೀಡುವ ಕುರಿತು ಪರಿಗಣಿಸಬೇಕು ಎಂದು ಸರ್ಕಾರವನ್ನು ರಾಘವೇಂದ್ರ ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಈ ಅತ್ಯುತ್ತಮ ರೈತ ಕೇಂದ್ರಿತ ಯೋಜನೆಯನ್ನು, ಅತ್ಯಂತ ಸಮರ್ಪಕವಾಗಿ ನಮ್ಮ ರೈತರಿಗೆ ನ್ಯಾಯಯುತವಾಗಿ ಅರ್ಹವಾದ ರಕ್ಷಣೆ ಮತ್ತು ನೆರವು ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.