ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ

Published : Dec 05, 2025, 09:21 PM IST
KS Eshwarappa

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು ಹೋಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಗಬ್ಬೆದ್ದು ಹೋಗಿವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹೊಲಸು ರಾಜಕೀಯ ನಾನು ಹಿಂದೆಂದು ನೋಡಿಲ್ಲ.

ಕೊಪ್ಪಳ (ಡಿ.05): ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು ಹೋಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಗಬ್ಬೆದ್ದು ಹೋಗಿವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹೊಲಸು ರಾಜಕೀಯ ನಾನು ಹಿಂದೆಂದು ನೋಡಿಲ್ಲ. ಇದಕ್ಕೆ ಬಿಜೆಪಿ ಹೊರತಾಗಿಲ್ಲ, ಬಿಜೆಪಿಯೂ ರಾಜ್ಯದಲ್ಲಿರುವ ಪಕ್ಷವಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಆ ಪಕ್ಷದ ಹೆಸರನ್ನು ಪ್ರತ್ಯೇಕವಾಗಿ ಹೇಳಬೇಕಾ ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಿತ್ತಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಭಿನ್ನಾಭಿಪ್ರಾಯ ಇಲ್ಲ ಎಂದು ಇಬ್ಬರು ಹೇಳಿದ ಮೇಲೆಯೂ ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಪರ ಮತ್ತು ಸಿದ್ದರಾಮಯ್ಯ ಪರ ಕೂಗುವ ಮೂಲಕ ಅಶಿಸ್ತು ಪ್ರದರ್ಶನ ಮಾಡಿದರೂ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದರೆ ಏನು ಹೇಳಬೇಕು. ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಮರೆಯಾಗಿ ಹೋಗಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದು ಹೋಗಿದ್ದರೂ ಅದನ್ನು ದುರಸ್ತಿ ಮಾಡುತ್ತಿಲ್ಲ. ಒಂದು ಆಶ್ರಯ ಮನೆ ನೀಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರಿಬ್ಬರು ಭಂಡರು. ಇಷ್ಟಾದರೂ ಏನು ಆಗಿಯೇ ಇಲ್ಲ ಎನ್ನುವಂತೆ ಮಾತನಾಡುತ್ತಾರೆ. ಇದಕ್ಕಿಂತ ಭಂಡತನ ಏನಿದೆ ಹೇಳಿ ಎಂದರು.

ಬಿಜೆಪಿ ಬಗ್ಗೆಯೂ ನಾನು ಹೇಳುತ್ತೇನೆ.ಅದರಲ್ಲಿ ನನಗೇನು ಅಂಜಿಕೆ ಇಲ್ಲ. ನಾನು ಈಗ ಮೈತೊಳೆದ ದೇವರು. ಈಗ ನಾನು ಯಾರ ಕುರಿತು ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ. ರಾಜ್ಯದಲ್ಲಿ ಇಷ್ಟೆಲ್ಲ ಆದರೂ ಬಿಜೆಪಿ ಪಕ್ಷ ಅದನ್ನು ಸರಿಯಾಗಿ ಪ್ರಶ್ನೆ ಮಾಡುತ್ತಿಲ್ಲ. ಹಾಗಂತ ನಾನು ಬಿಜೆಪಿ ಸಿದ್ಧಾಂತ ಟೀಕೆ ಮಾಡುವುದಿಲ್ಲ. ಈಗಲೂ ನನ್ನ ಕಣಕಣದಲ್ಲಿಯೂ ಬಿಜೆಪಿ ಇದೆ. ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಸಿದ್ಧಾಂತಕ್ಕೆ ಆದ ದೋಷದಿಂದ ನಾನು ಹೊರಗಿದ್ದೇನೆ, ಅದೆಲ್ಲವನ್ನು ಸರಿ ಮಾಡಿದರೇ ನಾನು ಬಿಜೆಪಿಗೆ ಬರುತ್ತೇನೆ ಎಂದರು.

ಸಿಎಂ ಯಾರಾದರೂ ಆಗಲಿ ನನ್ನ ತಕರಾರು ಇಲ್ಲ. ಆದರೆ, ರಾಜ್ಯದ ಅಭಿವೃದ್ಧಿ ಮಾಡಲಿ. ಭರವಸೆ ನೀಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಂಬರ್ 1. ಅವರು ಅದನ್ನು ಜಾರಿ ಮಾಡುವುದಿಲ್ಲ.ಗ್ಯಾರಂಟಿ ಕೊಟ್ಟಿದ್ದಾರೆ. ಅದನ್ನು ಅವರು ಹೇಳಿದ್ದರು ಕೊಟ್ಟಿದ್ದಾರೆ. ಅದನ್ನು ಕೊಡದಿದ್ದರೇ ಜನ ಸುಮ್ಮನೆ ಬಿಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ಬಿಗಿಯಾದರೆ ಮಾತ್ರ ಸಿಎಂ ಅಧಿಕಾರ ಹಸ್ತಾಂತರವಾಗುತ್ತದೆ. ಇಲ್ಲದಿದ್ದರೆ ಆಗಲ್ಲ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೈಕಮಾಂಡ್ ಗೆ ಬಿಟ್ಟ ವಿಷಯ ಹೇಳಿದ್ದಾರೆ. ಅವರೇ ಒಪ್ಪಿಕೊಂಡಿದ್ದಾರೆ ಹೈಕಮಾಂಡ್ ನಾನಲ್ಲ, ಸೋನಿಯಾಗಾಂಧಿ, ರಾಹುಲ್ ಗಾಂಧಿಯೇ ಹೈಕಮಾಂಡ್‌. ಇಂಥ ಪಕ್ಷ ದೇಶದಲ್ಲಿ ಉಳಿಯಲು ಸಾಧ್ಯವೇ ಇಲ್ಲ ಎಂದರು. ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಆ್ಯಕ್ಟೀವ್ ಆಗಿರಬೇಕು. ಅಂದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಇಲ್ಲದಿದ್ದರ ಪ್ರಜಾಪ್ರಭುತ್ವಕ್ಕೆ ಕಷ್ಟ ಎಂದರು.

ಹಿಂದುತ್ವ ಕಡಿಮೆಯಾಗಿದೆ

ನಾನು ರಾಜ್ಯಾದ್ಯಂತ ಹೋರಾಟ ಮಾಡುವ ಶಕ್ತಿ ಹೊಂದಿಲ್ಲ. ಆದರೆ, ಶಿವಮೊಗ್ಗದಲ್ಲಿ ಮಾತ್ರ ನಾವು ಹೋರಾಟ ಮಾಡುತ್ತಲೇ ಇದ್ದೇವೆ. ಬಿಜೆಪಿ ನಾಯಕರು ನಮ್ಮನ್ನು ಕರೆಯವುದು ಬೀಡುವುದು ಬೇರೆ. ಬಿಜೆಪಿಯದೂ ಸಹ ಸರ್ವಾಧಿಕಾರ ಕುಟುಂಬದ ಕೈಯಲ್ಲಿದೆ. ಈ ಕುಟುಂಬದಿಂದ ಬಿಜೆಪಿ ಹೊರಗೆ ಬರಬೇಕು. ಹಿಂದುತ್ವ ಕಡಿಮೆಯಾಗಿದೆ. ಈ ದಿಕ್ಕಿನಲ್ಲಿಯೂ ಪಕ್ಷ ಚಿಂತನೆ ಮಾಡಬೇಕು. ಈ ಕಾರಣಕ್ಕಾಗಿಯೇ ನಾವು ಹೊರಗೆ ಬಂದಿದ್ದೇವೆ. ಇದೆಲ್ಲ ಸರಿ ಮಾಡಿದರೇ ನಾವು ಬಿಜೆಪಿ ಸೇರುವ ಚಿಂತನೆ ಮಾಡುತ್ತೇನೆ. ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ಸೇರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮನ್ನು ಹೊರಗೆ ಕಳುಹಿಸಿರುವುದು ತಾತ್ಕಾಲಿಕ. ರಾಜ್ಯದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ, ಹೋರಾಟ ಮಾಡಿದ್ದರಿಂದ ನನ್ನನ್ನು ಹೊರಗೆ ಹಾಕಿದ್ದಾರೆ. ಹಾಗಂತ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರು ಕರೆದರೂ ನಾನು ಹೋಗಿಲ್ಲ, ಹೋಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌