ದೇವಸ್ಥಾನ ಕಟ್ಟಿಸುವ ನಾವು ಹಿಂದುತ್ವ ವಿರೋಧಿಗಳ?: ಸಂಸದ ಡಿ.ಕೆ.ಸುರೇಶ್

By Kannadaprabha News  |  First Published Jan 5, 2024, 12:22 PM IST

ತಾಲೂಕಿನ ದೇವಸ್ಥಾನಗಳ ಅಭಿವೃದ್ಧಿಗೆ ಮುಜುರಾಯಿ ಇಲಾಖೆಯಿಂದ 1 ಕೋಟಿ ರು. ಅನುದಾನ ಮಂಜೂರಾಗಿದೆ. ಒಂದು ಕಡೆಯಲ್ಲ ಎಲ್ಲ ಕಡೆ ದೇವಸ್ಥಾನ ನಿರ್ಮಾಣವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ದೇವಸ್ಥಾನ ನಿರ್ಮಿಸುವ ನಾವು ಹಿಂದುತ್ವ ವಿರೋಧಿಗಳ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.


ಚನ್ನಪಟ್ಟಣ (ಜ.05): ತಾಲೂಕಿನ ದೇವಸ್ಥಾನಗಳ ಅಭಿವೃದ್ಧಿಗೆ ಮುಜುರಾಯಿ ಇಲಾಖೆಯಿಂದ 1 ಕೋಟಿ ರು. ಅನುದಾನ ಮಂಜೂರಾಗಿದೆ. ಒಂದು ಕಡೆಯಲ್ಲ ಎಲ್ಲ ಕಡೆ ದೇವಸ್ಥಾನ ನಿರ್ಮಾಣವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ದೇವಸ್ಥಾನ ನಿರ್ಮಿಸುವ ನಾವು ಹಿಂದುತ್ವ ವಿರೋಧಿಗಳ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು. ನಗರದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಎಲ್ಲ ಕಡೆ ದೇವಸ್ಥಾನ ಕಟ್ಟುವ ವ್ಯವಸ್ಥೆ ರೂಪಿಸಿಕೊಂಡಿದ್ದೇವೆ. ಎಲ್ಲೋ ಮೇಲೆ ಕುಳಿತು ಭಾವನೆಗಳ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ ಎಂದರು.

ನಾವು ಪೂಜೆ ಮಾಡುತ್ತೇವೆ: ದಿನ ಬೆಳಗ್ಗೆ ಎದ್ದು ನಾವೂ ದೇವರ ಮನೆಗೆ ಹೋಗಿ ಕೈಮುಗಿಯುತ್ತೇವೆ. ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತೇವೆ. ಕೋಟ್ಯಂತರ ದೇವತೆಗಳು ಹಿಂದುತ್ವವನ್ನು ಭಾರತೀಯ ಸಂಸ್ಕೃತಿಯನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

Tap to resize

Latest Videos

ಜಾತ್ಯತೀತ ತತ್ವವನ್ನು ಬಿಟ್ಟು, ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ: ಯತೀಂದ್ರ ಸಿದ್ದರಾಮಯ್ಯ

5 ಸಾವಿರ ಹೊಸ ಬಸ್: ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯಾದ್ಯಂತ ಸುಮಾರು 125 ಕೋಟಿ ಮಹಿಳೆಯರು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಪ್ರತಿನಿತ್ಯ ಸುಮಾರು 60 ಲಕ್ಷ ಟಿಕೆಟ್‌ಗಳನ್ನು ಮಹಿಳೆಯರಿಗೆ ಉಚಿತವಾಗಿ ವಿತರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಸಾರಿಗೆ ಸಂಸ್ಥೆಗೆ ಸರ್ಕಾರ ಮಹಿಳೆಯರ ಪರವಾಗಿ ಹಣ ಪಾವತಿಸುತ್ತಿದೆ. ಹಿಂದೆ ಸರಿಯಾದ ಸಮಯಕ್ಕೆ ಸಾರಿಗೆ ನೌಕರರಿಗೆ ಸಂಬಳ ಸಿಗುತ್ತಿರಲಿಲ್ಲ. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಸಂಬಳದ ಸಮಸ್ಯೆ ನೀಗಿದೆ ಎಂದರು.

ಶಕ್ತಿ ಯೋಜನೆಯಿಂದ ಸಾರಿಗೆ ಬಸ್‌ಗಳಲ್ಲಿ ಜನರ ಪ್ರಯಾಣ ಹೆಚ್ಚಳಗೊಂಡಿದ್ದು, ರಾಜ್ಯದ ಎಲ್ಲ ಕಡೆಯಿಂದ ಹೆಚ್ಚಿನ ಬಸ್‌ಗಳಿಗಾಗಿ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ 5 ಸಾವಿರ ಹೊಸ ಬಸ್‌ಗಳನ್ನು ಖರೀದಿಸಲು ನಿರ್ಧರಿಸಿದ್ದು, ಜಿಲ್ಲೆಗೂ ಶೀಘ್ರದಲ್ಲಿ 50 ಬಸ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಪೋಲಾಗುತ್ತಿದ್ದ ಹಣಕ್ಕೆ ಕಡಿವಾಣ ಹಾಕಿ ಪಂಚ ಗ್ಯಾರಂಟಿ ಜಾರಿಗೆ ತರಲಾಗಿದೆ ಎಂದರು.

ಆನೆ ಸಮಸ್ಯೆಗೆ ಪರಿಹಾರ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ೭ಜನ ರೈತರು ಕಾಡಾನೆಗಳ ದಾಳಿಗೆ ಬಲಿಯಾಗಿದ್ದಾರೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಮುತ್ತತ್ತಿ ಭಾಗದಿಂದ ಕಾವೇರಿ ವನ್ಯಜೀವಿಧಾಮದ ಕಾಡಂಚಿನ ಕೊನೆ ಭಾಗದವರೆಗೆ ರೈಲ್ವೇ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಉದ್ದೇಶಸಿಲಾಗಿದೆ. ಇದಕ್ಕಾಗಿ ಈಗಾಗಲೇ 45 ಕೋಟಿ ಹಣ ಮಂಜೂರಾಗಿದೆ. ಮುಂದಿನ ಮೂರು ವರ್ಷದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು.

ಪೋಡಿ, ಖಾತೆ ಸಮಸ್ಯೆಗೆ ಪರಿಹಾರ: ಜಿಲ್ಲೆಯಲ್ಲಿ ಎಲ್ಲ ಕಡೆ ಸರ್ವೇ, ದುರಸ್ತು ಹಾಗೂ ಪೋಡಿ ಕುರಿತಂತೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಪ್ರತಿ ತಾಲೂಕಿನಲ್ಲೂ ಮೊದಲ ಹಂತದಲ್ಲಿ 6 ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲೆ ದುರಸ್ತು, ಪೋಡಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಮಸ್ಯೆ ಪರಿಹರಿಸದ ಮಾಜಿ ಸಿಎಂ, ಮಾಜಿ ಸಚಿವರು: ಬಗರ್‌ ಹುಕುಂ ಸಾಗುವಳಿ ಚೀಟಿಗಾಗಿ ಬೇಡಿಕೆ ಬರುತ್ತಿದೆ. ಇದಕ್ಕಾಗಿ ಸಮಿತಿ ರಚಿಸಿದ್ದು, ಮಂಜೂರು ವೇಳೆಯೇ ಪಹಣಿ, ಖಾತೆ ನೀಡುವ ಚಿಂತನೆ ಇದೆ. ಇದಲ್ಲದೇ ತಾಲೂಕಿನ ಮಾಕಳಿ ಗ್ರಾಮದ ಬಳಿ ಅರಣ್ಯ ಭೂಮಿಯಲ್ಲಿ ಸಾಗುವಳಿ ನಡೆಸುತ್ತಿರುವವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯಾವ ಮಾಜಿ ಮುಖ್ಯಮಂತ್ರಿಯಾಗಲಿ, ಮಾಜಿ ಅರಣ್ಯ ಸಚಿವರಾಗಲಿ ಈ ಕುರಿತು ಆಸಕ್ತಿ ವಹಿಸಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರೇಳದೇ ಪರೋಕ್ಷ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಬಡವರಿಗೆ ನೆಮ್ಮದಿ: ಯತೀಂದ್ರ ಸಿದ್ದರಾಮಯ್ಯ

ಜಿಲ್ಲೆಯ ಎಲ್ಲ 5 ತಾಲೂಕುಗಳಿಗೂ ಕಾವೇರಿ ನೀರು ಪೂರೈಸಲು 250 ಕೋಟಿ ರು. ಯೋಜನೆ ರೂಪಿಸಲಾಗಿದೆ. ವಿದ್ಯುತ್ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಸೋಲಾರ್ ವಿದ್ಯುತ್ ಘಟಕಗಳ ಮೂಲಕ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜೀವ್ ಗಾಂಧಿ ವಿವಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಇಲ್ಲಿ ಕಂಡು ಬಂದಿರುವ ಎಲ್ಲ ಸಮಸ್ಯೆಗಳಿಗೂ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

click me!