10 ಬಾರಿ ಒಂದೇ ಪಕ್ಷ, ಒಂದೇ ಚಿಹ್ನೆಯಡಿ ಸ್ಪರ್ಧಿಸಿ ದಾಖಲೆ ನಿರ್ಮಿಸುವತ್ತ ಆರಗ ಜ್ಞಾನೇಂದ್ರ!

By Kannadaprabha News  |  First Published Apr 19, 2023, 10:22 AM IST

ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಎಐಸಿಸಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿದರೆ ರಾಜ್ಯದಲ್ಲಿ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿರುವವರಲ್ಲಿ ಆರಗ ಜ್ಞಾನೇಂದ್ರ ಪ್ರಮುಖರು.


ಶಿವಮೊಗ್ಗ (ಏ.19): ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಎಐಸಿಸಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿದರೆ ರಾಜ್ಯದಲ್ಲಿ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿರುವವರಲ್ಲಿ ಆರಗ ಜ್ಞಾನೇಂದ್ರ ಪ್ರಮುಖರು. ಮಲ್ಲಿಕಾರ್ಜುನ ಖರ್ಗೆಯವರು 10 ಬಾರಿ ವಿಧಾನಸಭೆಗೆ ಸ್ಪರ್ಧಿಸಿ ದಾಖಲೆ ನಿರ್ಮಿಸಿದ್ದಾರೆ. ಈಗ ಆರಗ ಜ್ಞಾನೇಂದ್ರ ಕೂಡ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ, 10 ಬಾರಿಯೂ ಒಂದೇ ಪಕ್ಷ ಮತ್ತು ಒಂದೇ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದ್ದಾರೆ. 1983ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅವರು ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. 

ಆಗ ಶಿಕಾರಿಪುರದಿಂದ ಯಡಿಯೂರಪ್ಪ ಮತ್ತು ಶಿವಮೊಗ್ಗದಿಂದ ಎಂ.ಆನಂದ ರಾವ್‌ ಕೂಡ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಯಡಿಯೂರಪ್ಪ ಮತ್ತು ಆನಂದ ರಾವ್‌ ಗೆಲುವು ಸಾಧಿಸಿದ್ದರು. ಆದರೆ, ಜ್ಞಾನೇಂದ್ರ ಸೋತಿದ್ದರು. ಆರಗ ಅವರು 10 ಬಾರಿ ಬಿಜೆಪಿಯಿಂದ ಕಮಲ ಚಿಹ್ನೆಯಡಿ ಸ್ಪರ್ಧಿಸಿದ್ದು, 4 ಬಾರಿ ಗೆಲುವು ಸಾಧಿಸಿದ್ದಾರೆ. ಜೊತೆಗೆ, ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬ ತೀರ್ಥಹಳ್ಳಿ ಕ್ಷೇತ್ರದ ನಂಬಿಕೆಯನ್ನು ಕೂಡ ಪುಡಿಗಟ್ಟಿ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕೂಡ ಹಿರಿಯ ರಾಜಕಾರಣಿ ಆಗಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಒಂದೇ ಪಕ್ಷ ಮತ್ತು ಒಂದೇ ಚಿಹ್ನೆಯಡಿ 10 ಬಾರಿ ಸ್ಪರ್ಧಿಸಿಲ್ಲ.

Tap to resize

Latest Videos

ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ‘ರಾಜಕೀಯ’ಕ್ಕೆ ಎಂಟ್ರಿ ಕೊಟ್ಟ ಸುಭಾಶ್ಚಂದ್ರ ರಾಠೋಡ

ಆರಗ ಜ್ಞಾನೇಂದ್ರ ಕುಟುಂಬ ಆಸ್ತಿ 12 ಕೋಟಿ: ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು 12 ಕೋಟಿ ಒಡೆಯರಾಗಿದ್ದಾರೆ. 97.06 ಲಕ್ಷ ಚರಾಸ್ತಿಯನ್ನು ಹೊಂದಿರುವ ಅವರು 5.16 ಕೋಟಿ ಸ್ಥಿರಾಸ್ತಿ ಮತ್ತು .1.52 ಕೋಟಿ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ. ಜ್ಞಾನೇಂದ್ರ ಬಳಿ ಯಾವುದೇ ಆಭರಣ ಇಲ್ಲ. ಅವರ ಪತ್ನಿ .15 ಲಕ್ಷ ಆಸ್ತಿ ಹೊಂದಿದ್ದಾರೆ. ಇವರಿಗೆ ಒಟ್ಟು .86 ಲಕ್ಷ ಮೌಲ್ಯದ ಕೃಷಿ ಭೂಮಿ ಇದ್ದು, 4 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಕೈಯಲ್ಲಿ 1.5 ಲಕ್ಷ ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 7.75 ಲಕ್ಷ ಹಣ ಇಟ್ಟಿದ್ದಾರೆ. 6 ಲಕ್ಷ ಸಾಲ ಮಾಡಿಕೊಂಡಿದ್ದಾರೆ. 28 ಲಕ್ಷ ಮೌಲ್ಯದ ಇನ್ನೋವಾ ಕಾರು, 8 ಲಕ್ಷ ಮೌಲ್ಯದ ಮಾರುತಿ ಎರ್ಟಿಗಾ ಮತ್ತು 80 ಸಾವಿರ ಮೌಲ್ಯದ ಮಾರುತಿ ಓಮ್ನಿ ವಾಹನ ಹೊಂದಿದ್ದಾರೆ. 15 ಲಕ್ಷ ಮೌಲ್ಯದ ಚಿನ್ನಾಭರಣ ಇದೆ.

ಕಾಮಗಾರಿ ಮುಗಿ​ಸಲು ಮತ್ತೆ ಗೆಲ್ಲಬೇಕಾಗಿದೆ: ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಈ ಚುನಾವಣೆಯಲ್ಲಿನ ಗೆಲುವು ಕಾರಣವಾಗಬೇಕು ಎಂದು ಗೃಹ ಸಚಿವರೂ ಆದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹೇಳಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, 10ನೇ ಬಾರಿ ಸ್ಪರ್ಧಿಸುತ್ತಿದ್ದೇನೆ. ಈ ಕೊನೆಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕೆಂದರು.

ಕಳೆದ ಚುನಾವಣೆಯಲ್ಲಿ ದಾಖಲೆ ಅಂತರದಲ್ಲಿ ಗೆದ್ದು ಜನಸೇವೆಗೆ ಅವಕಾಶ ಪಡೆದಿದ್ದ ನಾನು ಈ ಕ್ಷೇತ್ರಕ್ಕೆ .3254 ಕೋಟಿ ಅನುದಾನವನ್ನು ದಾಖಲೆ ರೂಪದಲ್ಲಿ ತಂದಿದ್ದೇನೆ. ಎಲ್ಲಿ ನೋಡಿದರೂ ಅಭಿವೃದ್ಧಿ ಕಾರ್ಯ ಕಾಣುತ್ತಿದೆ. ಇದು ವಿರೋಧಿಗಳು ನಡುಗಲು ಕಾರಣವಾಗಿದೆ. ಆದರೆ ದುರದೃಷ್ಟವೆಂದರೆ, ನಾನು ಟಾರ್‌ ರಸ್ತೆಯನ್ನು ಹೊಸದಾಗಿ ಮಾಡಿಸಿದ ಮಾರನೇ ದಿನ ಪಿಕಾಸಿಯಿಂದ ಇದನ್ನು ಅಗೆದು ಹಾಕಲಾಗುತ್ತಿದೆ. ಪರಸ್ಪರ ವಿರೋಧಿಗಳಾದವರು ಈಗ ಒಂದಾಗಿದ್ದಾರೆ. ಒಂದಾದ ಮಾತ್ರಕ್ಕೆ ಜನ ಮರುಳಾಗುವುದಿಲ್ಲ. ಈ ಜೋಡಿಯನ್ನು ಸೋಲಿಸಲು ಜನ ಒಂದಾಗಿದ್ದಾರೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಈ ಚುನಾವಣೆ ಈ ಕ್ಷೇತ್ರದ ಭವಿಷ್ಯವನ್ನು ಬದಲಾಯಿಸುವ ಚುನಾವಣೆಯಾಗಿದೆ. ರಾಜ್ಯದ ಬಿಜೆಪಿ ಸರ್ಕಾರದ ಸಾಧನೆ, ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಯನ್ನು ಜನತೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. 2013ರ ಚುನಾವಣೆಯಲ್ಲಿ ಜ್ಞಾನೇಂದ್ರ ಸೋತಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ನಿಲ್ಲಬಾರದು ಎಂದು ಆಗಲೂ ಕೆಲಸ ಮಾಡಿದ್ದರು ಎಂದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾಳಜಿ ವ್ಯಕ್ತಿಯ ರಕ್ತದಲ್ಲಿ ಬರಬೇಕು. ಇದಕ್ಕೆ ಪಕ್ಷ, ವ್ಯಕ್ತಿ ಮತ್ತು ಡಿಎನ್‌ಎ ಕೂಡ ಕಾರಣವಾಗುತ್ತದೆ. 

ಶೆಟ್ಟರ್‌ ಇಷ್ಟು ವರ್ಷ ಗೆದ್ದಿದ್ದು ಬಿಜೆಪಿ ವರ್ಚಸ್ಸಿನಿಂದ, ವೈಯಕ್ತಿಕವಾಗಲ್ಲ: ಅರುಣ್‌ ಸಿಂಗ್‌

ಬಿಜೆಪಿಯಂತಹ ಪಕ್ಷದಲ್ಲಿ 10ನೇ ಬಾರಿಗೆ ಸ್ಪರ್ಧಿಸುವ ಅವಕಾಶ ಪಡೆಯುವುದು ಸಾಧಾರಣ ಮಾತಲ್ಲ. ಈ ಕ್ಷೇತ್ರದ ಅಭಿವೃದ್ಧಿ ಮಾತ್ರವಲ್ಲದೇ ರಾಜ್ಯದ ಗೃಹ ಸಚಿವರಾಗಿ 591 ದಿನಗಳಲ್ಲಿ ಜ್ಞಾನೇಂದ್ರ ಅವರು ಮಾಡಿರುವ ಸಾಧನೆ ಪ್ರಶಂಸನೀಯ. ನಮ್ಮದು ಡಬಲ್‌ ಎಂಜಿನ್‌ ಸರ್ಕಾರವಾಗಿದೆ. ಆದರೆ ಕಾಂಗ್ರೆಸ್‌ನದು ರಿವರ್ಸ್‌ ಎಂಜಿನ್‌ ಸರ್ಕಾರ ಎಂದು ಲೇವಡಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!