
ದಾವಣಗೆರೆ (ಅ.31): ಶ್ರದ್ಧಾ ಕೇಂದ್ರವಾದ ಧರ್ಮಸ್ಥಳಕ್ಕೆ ಅಪಮಾನ ಮಾಡುವ ವ್ಯವಸ್ಥಿತ ಷಡ್ಯಂತ್ರವು ಸರ್ಕಾರಿ ಪ್ರಾಯೋಜಿತ ಕೆಲಸ, ನಾಟಕಗಳಾಗಿವೆ. ಎಡಪಂಥೀಯರ ಜೊತೆಗೂಡಿ ಸರ್ಕಾರವೇ ಇಂತಹ ಕೆಲಸ ಮಾಡುತ್ತಿದೆ ಎಂದು ಮಾಜಿ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಆರಗ ಜ್ಞಾನೇಂದ್ರ ಆರೋಪಿಸಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಧರ್ಮಸ್ಥಳ ಪ್ರಕರಣದಲ್ಲಿ ತಾವೇ ನೀಡಿದ್ದ ಕೇಸ್ ವಜಾ ಕೋರಿ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಯುಟೂಬರ್ಸ್ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂದರು.
ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಗೊತ್ತಿಲ್ಲ. ಶಿಕ್ಷಕರನ್ನಷ್ಟೇ ಅಲ್ಲ ಬೇರೆ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನೂ ಜಾತಿ ಸಮೀಕ್ಷೆಗೆ ನೇಮಿಸಿದ್ದಾರೆ. ಯಾವೊಬ್ಬ ಮಂತ್ರಿಗಳೂ ಕೈಗೆ ಸಿಗದಂತಾಗಿದೆ. ಸರ್ಕಾರಿ ಮಿಷನರಿ ಸ್ಟಾಪ್ ಆಗಿದೆ. ರಾಜ್ಯಮಟ್ಟದಿಂದ ತಾಲೂಕುಮಟ್ಟದ ಯಾವುದೇ ಅಧಿಕಾರಿಗಳೂ ಜನರ ಕೈಗೆ ಸಿಗುತ್ತಿಲ್ಲ. ಯಾವ ಅಭಿವೃದ್ಧಿ ಕಾರ್ಯಗಳೂ ಆಗುತ್ತಿಲ್ಲ ಎಂದು ಅವರು ಟೀಕಿಸಿದರು.
ಸಾಲ ಮಾಡಿ ಗ್ಯಾರಂಟಿ ನೀಡಿ ಓಡಾಡುತ್ತಿದ್ದಾರೆ. ರಸ್ತೆಗಳೆಲ್ಲವೂ ಹಾಳಾಗಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ನೀಡುತ್ತಿಲ್ಲ. ಚಿಕ್ಕಪುಟ್ಟ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕೆಲಸ ನಿಂತು ಹೋಗಿವೆ. ಈಗಾಗಲೇ ಕೆಲಸ ಮಾಡಿದ ಗುತ್ತಿಗೆದಾರರು ವಿಷ ಸೇವಿಸಿ, ಸಾಯುವ ಹಂತಕ್ಕೆ ತಲುಪಿದ್ದಾರೆ. ಇಷ್ಟೊಂದುಹೀನ ಸ್ಥಿತಿಗೆ ಸರ್ಕಾರ ಬಂದು ನಿಂತಿದೆ ಎಂದು ಅವರು ಹರಿಹಾಯ್ದರು. ತಾನೊಬ್ಬ ಹೀರೋ ಆಗುವುದಕ್ಕೆ ಪ್ರಿಯಾಂಕ ಖರ್ಗೆ ಪ್ರಯತ್ನಿಸುತ್ತಿದ್ದಾರೆ. ಆರೆಸ್ಸೆಸ್ ವಿರುದ್ಧ 2-3 ಸಂಘಟನೆಗಳನ್ನು ಎತ್ತಿ ಕಟ್ಟುತ್ತಿದ್ದಾರೆ. ಇಂತಹವರು ಪ್ರಿಯಾಂಕ್ ಖರ್ಗೆ ಅಲ್ಲ, ಪ್ರಚಾರ ಖರ್ಗೆ.
ಹಿಂದು ಹಿತಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಹಿಂದೂ ಸಂಘಟನೆಗಳ ವಿರುದ್ಧ ಈ ಸರ್ಕಾರವಿದೆ. ತಮ್ಮ ಓಟುಗಳನ್ನು ತೃಪ್ತಿಪಡಿಸಲು ಮಾಡಬಾರದ ಕೆಲಸವನ್ನು ಕಾಂಗ್ರೆಸ್ ಸರ್ಕಾರದವರು ಮಾಡುತ್ತಿದ್ದಾರೆ. ಮಠಾಧೀಶರಿಗೆ ಜಿಲ್ಲೆಗೆ ಹೋಗದಂತೆ ಅಡ್ಡ ಹಾಕುವ ಕೆಲಸ ನಡೆದಿದೆ. ಗೃಹ ಸಚಿವರು ಹೆಸರಿಗಷ್ಟೇ ಇದ್ದಾರೆ ಎಂದು ಜ್ಞಾನೇಂದ್ರ ವ್ಯಂಗ್ಯವಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಧನಂಜಯ ಕಡ್ಲೇಬಾಳು, ಎಚ್.ಪಿ.ವಿಶ್ವಾಸ್ ಇತರರು ಇದ್ದರು.
ಕರ್ನಾಟಕದ ಜನರಿಗೆ ಕೆಟ್ಟ ದಿನಗಳು ಆದಷ್ಟು ಬೇಗನೆ ತೊಲಗಿ ಅಂತಾ ಹಾರೈಸುತ್ತೇನೆ. ಆರೆಸ್ಸೆಸ್‌ಗೆ ನೂರು ವರ್ಷ ತುಂಬಿದ ಹಿನ್ನೆಲೆ ಎಲ್ಲೆಡೆ ಪಥ ಸಂಚಲನ ನಡೆಯುತ್ತಿದೆ. ಪ್ರಿಯಾಂಕ ಖರ್ಗೆ ತಮ್ಮ ಖಾತೆಯಲ್ಲಿ ಏನು ಆಗುತ್ತಿದೆಯೆಂಬುದೇ ಗೊತ್ತಿಲ್ಲ. ಖರ್ಗೆ ಖಾತೆಯಲ್ಲಿರುವ ಅನುದಾನವೇ ಖರ್ಚಾಗುತ್ತಿಲ್ಲ. ಗ್ರಾಮೀಣಾಭಿವೃದ್ಧಿಗೆ ದುಡ್ಡು ಕೊಡುತ್ತಿಲ್ಲವೆಂದರೆ ಏನರ್ಥ? ಅಂತಹ ವ್ಯಕ್ತಿಯನ್ನು ಗ್ರಾಮೀಣಾಭಿವೃದ್ಧಿ ಖಾತೆಗೆ ತಂದು, ಸಚಿವರಾಗಿ ಕೂಡಿಸಿದ್ದಾರೆ.
- ಆರಗ ಜ್ಞಾನೇಂದ್ರ, ಬಿಜೆಪಿ ಮುಖಂಡ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.