ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಮಾಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಈ ಕುರಿತು ಪಕ್ಷ ಹಾಗೂ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ (ಜ.02): ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಮಾಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಈ ಕುರಿತು ಪಕ್ಷ ಹಾಗೂ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವ ಅಧಿಕಾರ ಎಐಸಿಸಿಗೆ ಮಾತ್ರ ಇದೆ. ಒಬ್ಬೊಬ್ಬರು ಎರಡು ಹುದ್ದೆಯಲ್ಲಿರಬಾರದು ಎನ್ನುವುದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಕಮೀಟಿ ಅಧ್ಯಕ್ಷರ ನೇಮಕ ಸಂಬಂಧ ಒಬ್ಬರ ಹೆಸರಿನ ಪ್ರಸ್ತಾವನೆಯನ್ನು ಪಕ್ಷಕ್ಕೆ ಕಳುಹಿಸಲಾಗಿದೆ. ಚಿಕ್ಕೋಡಿ ಜಿಲ್ಲಾಧ್ಯಕ್ಷರ ನೇಮಕವನ್ನೂ ಮಾಡಲಾಗುವುದು. ಕಾರ್ಯಕರ್ತರ ನಡುವೆ ನಿಕಟ ಸಂಪರ್ಕ ಹೊಂದಿರುವವರು, ಕಾಂಗ್ರೆಸ್ ಕಚೇರಿಯಲ್ಲಿದ್ದು, ಪಕ್ಷಕ್ಕೆ ಹೆಚ್ಚು ಸಮಯ ಕೊಡಬೇಕು ಎಂಬ ಮಾನದಂಡದ ಮೇರೆಗೆ ಸಾಮಾನ್ಯ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಹೇಳಿದರು.
ಕಿತ್ತೂರು ಇತಿಹಾಸ ರಾಷ್ಟ್ರಮಟ್ಟಕ್ಕೆ ತಲುಪಲಿ: ಸಚಿವ ಸತೀಶ್ ಜಾರಕಿಹೊಳಿ
ನಿಗಮ ಮಂಡಳಿಗೆ ನೇಮಕ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಇದೆ. ಈಗಾಗಲೇ ಶೇ.70 ಆಗಿದೆ. ಶೇ.30 ಇದೆ. ನಮ್ಮ ಮೇಲೆ ಜವಾಬ್ದಾರಿ ಇರುವುದು ನಿರ್ದೇಶಕರ ನೇಮಕ ಮಾಡುವುದು. ಗೃಹ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಕಮಿಟಿ ಇದೆ. ಹಂತ ಹಂತವಾಗಿ ನೇಮಕ ಮಾಡಲಾಗುವುದು ಎಂದ ಅವರು, ಬೆಳಗಾವಿ ಜಿಲ್ಲೆಯ ವಿಭಜನೆ ಮಾಡುವ ವಿಷಯ ಬಜೆಟ್‌ನಲ್ಲಿ ಇಲ್ಲ. ಹೊಸ ಜಿಲ್ಲೆಯಾಗಬೇಕು ಎಂಬ ಬೇಡಿಕೆ ಇದೆ. ಎಲ್ಲ ರೀತಿಯಿಂದ ಒಮ್ಮತ ಬರಬೇಕಷ್ಟೇ ಎಂದರು.
ಕಳೆದ ಒಂದೂವರೆ ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಜನಪರ ಕೆಲಸ ಮಾಡಿದೆ. ಬರುವ ದಿನಗಳ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಮೂರು ಬಜೆಟ್ ಮಂಡಣೆ ಮಾಡಿ ಜನಪರ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆಯಾಗಿದೆ. ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.
2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸಚಿವ ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ಸೇತುವೆಗಳು ಹಾಳಾಗಿವೆ. ಬಜೆಟ್‌ನಲ್ಲಿ ವಿಶೇಷವಾಗಿ ಸೇತುವೆ ನಿರ್ಮಾಣಕ್ಕೆ ಅನುದಾನ ಕೇಳುತ್ತೇವೆ. ಬಿಜೆಪಿಯವರು ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪದ ಕುರಿತು ಉತ್ತರಿಸಿದ ಅವರು, ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ಕೇವಲ ಆರೋಪ ಮಾಡುವುದೇ ಕೆಲಸವಾಗಿದೆ ಎಂದರು. ಸಿ.ಟಿ.ರವಿ ಪ್ರಕರಣದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದೆ ಎಂದರು.