ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ನೋಂದಣಿ ಜು.14ರಿಂದ?: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

By Kannadaprabha NewsFirst Published Jun 29, 2023, 3:20 AM IST
Highlights

‘ಗೃಹ ಲಕ್ಷ್ಮೀ’ ಯೋಜನೆಗೆ ಅರ್ಜಿ ನೋಂದಣಿ ಮಾಡಲು ಸಿದ್ಧಪಡಿಸಿರುವ ಆ್ಯಪ್‌ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಅರ್ಜಿ ನೋಂದಣಿ ಪ್ರಕ್ರಿಯೆಗೆ ಜು.14ರಿಂದ ಚಾಲನೆ ನೀಡಲು ತಾತ್ಕಾಲಿಕ ಚರ್ಚೆಯಾಗಿದ್ದು, ಜು.3 ರಂದು ಅಧಿಕೃತ ದಿನಾಂಕ ಖಚಿತಪಡಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. 

ಬೆಂಗಳೂರು (ಜೂ.29): ‘ಗೃಹ ಲಕ್ಷ್ಮೀ’ ಯೋಜನೆಗೆ ಅರ್ಜಿ ನೋಂದಣಿ ಮಾಡಲು ಸಿದ್ಧಪಡಿಸಿರುವ ಆ್ಯಪ್‌ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಅರ್ಜಿ ನೋಂದಣಿ ಪ್ರಕ್ರಿಯೆಗೆ ಜು.14ರಿಂದ ಚಾಲನೆ ನೀಡಲು ತಾತ್ಕಾಲಿಕ ಚರ್ಚೆಯಾಗಿದ್ದು, ಜು.3 ರಂದು ಅಧಿಕೃತ ದಿನಾಂಕ ಖಚಿತಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಅಲ್ಲದೆ, ಆಗಸ್ಟ್‌ ತಿಂಗಳ ವೇಳೆಗೆ ಎಲ್ಲಾ ಗೃಹ ಲಕ್ಷ್ಮೀಯರ ಖಾತೆಗೆ ತಲಾ 2 ಸಾವಿರ ರು. ಹಣ ತಲುಪಲಿದೆ ಎಂದು ಭರವಸೆ ನೀಡಿದರು.

ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಆ್ಯಪ್‌ಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ‘ಗೃಹ ಜ್ಯೋತಿ’ ನೋಂದಣಿ ಇದೀಗ ಸುಗಮವಾಗಿ ನಡೆಯುತ್ತಿದೆ. ಪ್ರಾರಂಭದ ಹಂತದಲ್ಲಿ ಸರ್ವರ್‌ ಮೇಲೆ ಹೆಚ್ಚಿನ ಒತ್ತಡ ಬಿದ್ದಿತ್ತು. ಇದೀಗ ಕ್ರಮೇಣ ಅದು ಕಡಿಮೆಯಾಗುತ್ತಿದ್ದು, ಸುಗಮವಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

Latest Videos

ಕೇಂದ್ರವು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಸರ್ವರ್‌ ಮೇಲೆ ಇನ್ನೂ ಹೆಚ್ಚು ಒತ್ತಡ ಬೀಳುವುದು ಬೇಡ ಎಂಬ ಕಾರಣಕ್ಕೆ ಗೃಹ ಲಕ್ಷ್ಮೀ ಯೋಜನೆಯ ನೋಂದಣಿಯನ್ನು ವಿಳಂಬ ಮಾಡಲಾಗುತ್ತಿದೆ. ಸರ್ವರ್‌ ಹೊರತಾಗಿ ಇದಕ್ಕೆ ಬೇರೆ ಯಾವುದೇ ಕಾರಣವೂ ಇಲ್ಲ. ಏನೇ ಆದರೂ ಕೊಟ್ಟ ಮಾತಿನಂತೆ ಆಗಸ್ಟ್‌ ತಿಂಗಳಲ್ಲಿ ಗೃಹ ಲಕ್ಷ್ಮೀಯರ ಖಾತೆಗೆ ಹಣ ಬೀಳಲಿದೆ ಎಂದು ಭರವಸೆ ನೀಡಿದರು.

‘ನೀವು ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಿದ್ದರೂ ಸರ್ವರ್‌ ಚಿಂತೆ ಯಾಕೆ?’ ಎಂಬ ಪ್ರಶ್ನೆಗೆ, ‘ಪ್ರತ್ಯೇಕ ಆ್ಯಪ್‌ ಇರಬಹುದು. ಆದರೆ ಸರ್ವರ್‌ ಒಂದೇ ಆಗಿರುತ್ತದೆ. ಎಷ್ಟೇ ಸಿದ್ಧತೆ ಮಾಡಿಕೊಂಡರೂ ಸರ್ವರ್‌ ಮೇಲೆ ಹೊರೆ ಬಿದ್ದರೆ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲಾಗುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ. ಆಗಸ್ಟ್‌ನಲ್ಲಿ ನೇರವಾಗಿ ಮಹಿಳೆಯರ ಖಾತೆಗೆ ಹಣ ಬೀಳಲಿದೆ’ ಎಂದರು.

ಕೊಡಗಿನಲ್ಲಿ ಬೆಟ್ಟ ಕುಸಿಯುವ ಆತಂಕ: ತೋರಾ ಗ್ರಾಮದ 20 ಕುಟುಂಬಗಳಿಗೆ ನೋಟಿಸ್!

ತಾತ್ಕಾಲಿಕ ದಿನಾಂಕ ನಿಗದಿ: ಇದಕ್ಕೂ ಮೊದಲು ಮಾತನಾಡಿದ ಸಚಿವ ಎಚ್‌.ಕೆ. ಪಾಟೀಲ್‌, ಸಚಿವ ಸಂಪುಟ ಸಭೆಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಜು.14 ರಿಂದ ಚಾಲನೆ ನೀಡಲು ತಾತ್ಕಾಲಿಕ ದಿನಾಂಕ ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಸಚಿವರು ಖಚಿತವಾದ ದಿನಾಂಕವನ್ನು ಪ್ರಕಟಿಸಲಿದ್ದಾರೆ ಎಂದು ಹೇಳಿದರು.

click me!