ರೈತರ ಜಾನುವಾರುಗಳಿಗೆ ವಿಮೆ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಬಿ. ಶೇಖರ್ ಗೋಪಿನಾಥಂ
ಮೈಸೂರು (ಅ.07): ರೈತರ ಜಾನುವಾರುಗಳಿಗೆ ವಿಮೆ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿರುವ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಶನಿವಾರ ನಡೆದ ರೈತ ದಸರಾ ವೇದಿಕೆ ಕಾರ್ಯಕ್ರಮವನ್ನು ನವಧಾನ್ಯ ಸುರಿದು, ಹೊಂಬಾಳೆಯನ್ನು ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳು ರೈತರಿಗೆ ಸಹಕಾರಿಯಾಗುತ್ತಿದ್ದು, ಮುಂದೆ ರೈತರ ಜಾನುವಾರುಗಳಿಗೆ ವಿಮೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತದೆ ಎಂದರು.
undefined
ಕೆಲವು ರೈತರು ಸಾಕಿರುವ ಹಳ್ಳಿಕಾರ್ ಎತ್ತುಗಳಿಗೆ 8 ರಿಂದ 10 ಲಕ್ಷ ಇದೆ. ಆಕಸ್ಮಿಕವಾಗಿ ಅವು ಮೃತಪಟ್ಟರೆ ರೈತರಿಗೆ ಆ ನಷ್ಟ ಭರಿಸಲಾಗಲ್ಲ. ಹೀಗಾಗಿ, ವಿಮೆಯನ್ನು ಜಾರಿಗೆ ತರುವಂತೆ ವೇದಿಕೆಯಲ್ಲಿದ್ದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರಲ್ಲಿ ಮನವಿ ಮಾಡಿದ ಅವರು, ಈ ವಿಚಾರವನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ಜಾರಿಗೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮಾನ್ವಿಯಲ್ಲಿ ಕಾಂಗ್ರೆಸ್‌ನಿಂದ ವಿಪಕ್ಷ ವಿರುದ್ಧ ಸ್ವಾಭಿಮಾನಿ ಅಸ್ತ್ರ ಪ್ರಯೋಗಿಸಿದ ಸಿಎಂ ಸಿದ್ದರಾಮಯ್ಯ!
ಪ್ರಸ್ತುತ ಜನರಲ್ಲಿ ವ್ಯವಸಾಯದ ಮೇಲಿನ ನಿರಾಸಕ್ತಿಯಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರಿಗೆ ಬೆನ್ನೆಲುಬಾಗಿರುವ ಸರ್ಕಾರವು ಅವರಿಗೆ ಕೃಷಿ ಹಾಗೂ ವ್ಯವಸಾಯದಲ್ಲಿ ವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರವೂ ಯಾವಾಗಲೂ ರೈತರ ಪರ ಇರುತ್ತದೆ. ರೈತರಿಗೆ ಗ್ಯಾರಂಟಿಗಳು ಸಹಕಾರಿ ಆಗಿದ್ದು, ಗ್ಯಾರಂಟಿಗಳನ್ನು ಇನ್ನೂ ಹೆಚ್ಚಿನ ರೈತರಿಗೆ ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನ ಮಾಡುವಂತ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು. ನಮ್ಮದು ಜನಸಾಮಾನ್ಯರ, ರೈತರ ಪರ ಸರ್ಕಾರ. ಕೃಷಿ ಕ್ಷೇತ್ರದ ಸುಧಾರಣೆಗೆ ಅತೀ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
ಕೃಷಿ ಲಾಭದಾಯಕವಾಗಿಸುವುದೇ ರಾಜ್ಯ ಸರ್ಕಾರದ ಧ್ಯೇಯ. ಅದಕ್ಕಾಗಿ ಕೃಷಿ, ಪಶುಸಂಗೋಪನೆ, ತೋಟಗಾರಿಗೆ, ರೇಷ್ಮೆ ಎಲ್ಲವನ್ನೂ ಒಟ್ಟುಗೂಡಿಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಕೃಷಿ ಯಾಂತ್ರೀಕರಣದ ಪರಿಣಾಮಕಾರಿ ಅಳವಡಿಕೆ ಅಗತ್ಯ. ಕೃಷಿ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಕೃಷಿಕರು ಸಾಂಪ್ರದಾಯಿಕ ಕೃಷಿ ಜೊತೆಗೆ ಸಮಗ್ರ ಬೇಸಾಯಕ್ಕೆ ಒತ್ತು ನೀಡಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ಪಾದನೆಯ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ವೇಳೆ ಕೃಷಿಯ ವಿಜ್ಞಾನಿಗಳು ಶ್ರೀ ಗಂಧದ ಬೇಸಾಯ ಮತ್ತು ಮಾರುಕಟ್ಟೆ, ರೈತರ ಆದಾಯ ವೃದ್ಧಿಗಾಗಿ ಸುಸ್ಥಿರ ಕೃಷಿ ಮತ್ತು ವಿದೇಶಿ ತರಕಾರಿ ಮತ್ತು ಹಣ್ಣುಗಳ ಬೇಸಾಯ ತಾಂತ್ರಿಕತೆ ಜೊತೆಗೆ ಬೆಳೆಯ ಉಪಯೋಗ, ಫಲವತ್ತತೆಯ ಮಾರ್ಗ, ಮಾರುಕಟ್ಟೆ, ನೀರಾವರಿ ಯೋಜನೆ ಮತ್ತು ಮಧ್ಯವರ್ತಿ ಇಲ್ಲದೆ ಬೆಳೆಯನ್ನು ನಿಗದಿತ ಪ್ರಮಾಣದಲ್ಲಿ ಮಾರುವುದನ್ನು ವೈಜ್ಞಾನಿಕ ಕಾರಣ ಹಾಗೂ ಆಧುನಿಕ ಕಾಲದ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ರೈತರ ದಸರಾ ಉಪ ಸಮಿತಿಯ ಅಧ್ಯಕ್ಷ ಕರೀಗೌಡ, ಉಪಾಧ್ಯಕ್ಷರಾದ ಎನ್. ಶಿವಕುಮಾರ್, ಜಾಕೀರ್ ಪಾಷಾ, ಎಚ್.ಕೆ. ಮಂಜುನಾಥ್, ಹರೀಶ್ ಮೊಗಣ್ಣ, ಉಪ ವಿಶೇಷಾಧಿಕಾರಿ ಡಾ.ಎಂ. ಕೃಷ್ಣರಾಜು ಮೊದಲಾದವರು ಇದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ ಸ್ವಾಗತಿಸಿದರು.
ನನ್ನ ಪತ್ನಿ ಯಾವ ತಪ್ಪು ಮಾಡಿದ್ದಾಳೆ?: ವಿಪಕ್ಷಗಳ ವಿರುದ್ದ ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ
ಕೃಷಿಕರ ಆದಾಯದಲ್ಲಿ ವೃದ್ಧಿಯಾಗಬೇಕು. ವೈಜ್ಞಾನಿಕ ಬೆಲೆ ದೊರೆಯುವ ಜೊತೆಗೆ ಸರ್ವ ಋತು ವರಮಾನ ಬರುವಂತೆ ಬೇಸಾಯ ಪದ್ಧತಿ ಅಳವಡಿಕೆಯಾಗಬೇಕು. ಇದಕ್ಕಾಗಿ ಕೃಷಿಕರು ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು. ಹೈನುಗಾರಿಕೆ ಕುರಿ, ಕೋಳಿ, ಹಂದಿ, ಮೀನು, ಜೇನು ಸಾಕಾಣಿಕೆಗಳ ಬಗ್ಗೆಯೂ ಗಮನ ಹರಿಸಬೇಕು. ಆಗ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ.
-ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ