'ನನ್ನ ಬೆಳೆ ನನ್ನ ಹಕ್ಕು':ರೈತರಿಗೆ ಧಕ್ಕೆಯಾಗುವುದಾದ್ರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ'

By Suvarna NewsFirst Published May 15, 2020, 3:18 PM IST
Highlights

ಎಪಿಎಂಸಿ ಕಾಯ್ದೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುವ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರು, (ಮೇ.15): ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ “ರೈತರು ಮೊದಲು” ಎಂಬ ಘೋಷವಾಕ್ಯದ ಅನುಷ್ಠಾನ ಸಾಧ್ಯವಾಗುತ್ತದೆ  ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಹೊಂದಿರುತ್ತಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು (ಶುಕ್ರವಾರ) ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಾನು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವನು. ರೈತರ ಹಿತಕ್ಕೆ ಧಕ್ಕೆಯಾಗುವುದಾದರೆ ಒಂದು ಕ್ಷಣವೂ ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ ಎಂದು ಹೇಳುವ ಮೂಲಕ  ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧ ಎದ್ದಿರುವ ವಿವಾದ ಕುರಿತು ಸಮರ್ಥನೆ ನೀಡಿದರು.

ವಿವಾದಿತ ಎಪಿಎಂಸಿ ಸುಗ್ರೀವಾಜ್ಞೆಗೆ ಸಂಪುಟ ಅಸ್ತು

ಎಪಿಎಂಸಿ ಕಾಯ್ದೆಯಲ್ಲಿ ರೈತರಿಗೆ ತೊಂದರೆಯಾಗುವಂತಹ ಯಾವ ತಿದ್ದುಪಡಿಯನ್ನು ತಂದಿಲ್ಲ. ಈ ತಿದ್ದುಪಡಿಯಿಂದಾಗಿ ಎಪಿಎಂಸಿಯ ಹೊರಗಡೆಯೂ ರೈತ ತನ್ನ ಬೆಳೆ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ರೈತ ಬೆಳೆದ ಬೆಳೆಯನ್ನು ಎಲ್ಲಿಯೂ ಮಾರಾಟಮಾಡುವಂತಹ ಹಕ್ಕು ರೈತನಿಗಿರಬೇಕು ಎಂದು ಹೇಳಿದರು.

ಈ ಕಾಯ್ದೆಯಿಂದ ಎಪಿಎಂಸಿಗಳ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಅವು ಹಿಂದಿನಂತೆ ಮುಂದುವರೆಯುತ್ತವೆ. ಮಾರುಕಟ್ಟೆ ಪ್ರಾಂಗಣದ ಹೊರಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ಮತ್ತು ಮೇಲ್ವಿಚಾರಣೆಯನ್ನು ಕೃಷಿ ಮಾರಾಟ ನಿರ್ದೇಶಕರು ಮಾಡುತ್ತಾರೆ. ಈ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಸೀಮಿತಗೊಳಿಸಿ ರೈತರು ಉತ್ತಮ ಧಾರಣೆ ಪಡೆಯಲು ಅವಕಾಶ ಒದಗಿಸಿ ಆ ಮೂಲಕ ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಒದಗಿಸಿ ರೈತರ ಹಿತ ಕಾಯಲು ಅವಕಾಶ ನೀಡುತ್ತದೆ ಎಂದು ಹೇಳಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ರೈತರಿಗೆ ಶಾಪ; ಕಾಯ್ದೆ ಹಿಂಪಡೆಯಲು ರೈತ ಸಂಘ ಆಗ್ರಹ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ರೈತರ ಹಿತಾಸಕ್ತಿಯೇ ಮುಖ್ಯ. 2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡಬೇಕು. ರೈತರಿಗೆ ನೆರವಾಗಬೇಕು ಎನ್ನುವುದಕ್ಕಾಗಿಯೇ ಅನೇಕ ಕಾರ್ಯಕ್ರಮಗಳನ್ನು ಮತ್ತು ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಈಗಲೂ ಎಪಿಎಂಸಿ ಕಾಯ್ದೆಯನ್ನೇನೂ ನಾವು ತೆಗೆದು ಹಾಕಿಲ್ಲ. ಕೇವಲ ಕಾಯ್ದೆಯ ಎರಡು ಸೆಕ್ಷನ್ ಗಳಿಗೆ ತಿದ್ದುಪಡಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು. 

ಈ ಸುಧಾರಣೆಯ ಉದ್ದೇಶ- ನಮ್ಮ ರೈತರಿಗೆ ಮಾರುಕಟ್ಟೆಯ ಹೆಚ್ಚಿನ ಆಯ್ಕೆಗಳು ಲಭಿಸಲಿವೆ. ನಮ್ಮ ರೈತರು ಎಪಿಎಂಸಿಯಾಗಲೀ ಅಥವಾ ಇತರೇ ವರ್ತಕರ ಅಧೀನಕ್ಕೆ ಒಳಪಡುವುದಿಲ್ಲ. ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಉತ್ಪನ್ನ ಮಾರಾಟ ಮಾಡಬಹುದು. ಬೆಂಬಲ ಬೆಲೆಗೆ ಕಡಿಮೆ ದರದಲ್ಲಿ ಖರೀದಿ ಮಾಡುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಈ ಶೋಷಣೆಯನ್ನು ಇನ್ನು ಮುಂದೆ ತಪ್ಪಿಸಬಹುದು.ಇನ್ನು ಮುಂದೆ ಎಪಿಎಂಸಿಯಲ್ಲಿ ವ್ಯವಹಾರ ಮಾಡುವ ವರ್ತಕರು ರೈತರನ್ನು ಶೋಷಣೆ ಮಾಡುವುದು ತಪ್ಪುತ್ತದೆ ಎಂದು ಯಡಿಯೂರಪ್ಪ ವಿವರಿಸಿದರು.

click me!