ಮೇಕೆದಾಟು ಪಾದಯಾತ್ರೆ ತರುವಾಯ ಭಾರತ್ ಜೋಡೋ ಯಾತ್ರೆ ನೆನಪಿನಾರ್ಥ ರಾಮನಗರ ಕ್ಷೇತ್ರದಲ್ಲಿ ಮತ್ತೊಂದು ಪಾದಯಾತ್ರೆ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಎಂ. ಅಫ್ರೋಜ್ ಖಾನ್
ರಾಮನಗರ (ಸೆ.07): ಮೇಕೆದಾಟು ಪಾದಯಾತ್ರೆ ತರುವಾಯ ಭಾರತ್ ಜೋಡೋ ಯಾತ್ರೆ ನೆನಪಿನಾರ್ಥ ರಾಮನಗರ ಕ್ಷೇತ್ರದಲ್ಲಿ ಮತ್ತೊಂದು ಪಾದಯಾತ್ರೆ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿರುವ ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಭಾರತ್ ಜೋಡೋ ನೆನಪಿನಾರ್ಥ ಪಾದಯಾತ್ರೆ ಹಮ್ಮಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ ಭದ್ರಕೋಟೆ ಅಂತಲೇ ಕರೆಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರ ಕರ್ಮಭೂಮಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ೨ ಹಂತದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸಿತ್ತು. ಇದೀಗ ಎರಡನೇ ಬಾರಿ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಕಳೆದ 2022ರ ಜ.9ರಿಂದ 12ರವರೆಗೆ (4 ದಿನ 60.5 ಕಿಲೋ ಮೀಟರ್ ) ಮೊದಲ ಹಂತದ ಮೇಕೆದಾಟು ಪಾದಯಾತ್ರೆ ನಿರೀಕ್ಷೆಗೂ ಮೀರಿದ ಜನಬೆಂಬಲದೊಂದಿಗೆ ಯಶಸ್ವಿಯಾಗಿ ಜರುಗಿತ್ತು. ಆನಂತರ ಫೆಬ್ರವರಿ 27ರಂದು ಕೈ ನಾಯಕರು ಜೆಡಿಎಸ್ ಭದ್ರಕೋಟೆ ರಾಮನಗರದಲ್ಲಿಯೇ ಕೈ ನಾಯಕರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಣ ಕಹಳೆ ಮೊಳಗಿಸಿದ್ದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ಸಿಎಂ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿ: ಸಿ.ಪಿ.ಯೋಗೇಶ್ವರ್
‘ಮೇಕೆದಾಟು ಸಂಗಮದಿಂದ ಬೆಂಗಳೂರುವರೆಗೆ 169ಕಿಲೋಮೀಟರ್ ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸಿ ಕಾಂಗ್ರೆಸ್ ನಾಯಕರು ದಾಖಲೆ ಬರೆದಿದ್ದರು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗಿರುವುದು ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ. ಈಗ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ಸಿನ ನೆನಪಿನಾರ್ಥ ಕಾಂಗ್ರೆಸ್ ಪಕ್ಷ ರಾಮನಗರ ಕ್ಷೇತ್ರದಲ್ಲಿಯೇ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ.
ಸಂಸತ್ ಚುನಾವಣೆಗೆ ಬಿಜೆಪಿ - ಜೆಡಿಎಸ್ ಹೊಂದಾಣಿಕೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್ ನಾಯಕರು ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿ ಸಂಘಟಿಸುವ ಸಲುವಾಗಿ ಕಾರ್ಯಕರ್ತರಲ್ಲಿ ರಣೋತ್ಸವ ತುಂಬಲು ಪಾದಯಾತ್ರೆ ಮೊರೆ ಹೋಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸಂಬಂಧವೂ ಚೆನ್ನಾಗಿದೆ ಎಂಬ ಸಂದೇಶ ರವಾನಿಸುವ ಉದ್ದೇಶವೂ ಪಾದಯಾತ್ರೆಯಲ್ಲಿ ಅಡಗಿದೆ. ಈ ಕಾರಣದಿಂದಲೇ ಸಿದ್ದರಾಮಯ್ಯ ಅವರನ್ನು ಪಾದಯಾತ್ರೆಗೆ ಕರೆತರಲಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಐಜೂರು ವೃತ್ತದಲ್ಲಿ ವೇದಿಕೆ ನಿರ್ಮಾಣ: ಸೆ.7 ಸಂಜೆ 4 ಗಂಟೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲ ಸಚಿವರು ಆಗಮಿಸಲಿದ್ದಾರೆ. ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರಿನಿಂದ ಆರಂಭವಾಗುವ ಪಾದಯಾತ್ರೆ ಪೊಲೀಸ್ ಭವನ ವೃತ್ತದಿಂದ ವಾಟರ್ ಟ್ಯಾಂಕ್ ವೃತ್ತಕ್ಕೆ ಸಾಗಿ ಎಂ.ಜಿ ರಸ್ತೆ ಮಾರ್ಗವಾಗಿ ಕೆಂಗಲ್ ಹನುಮಂತಯ್ಯ ವೃತ್ತದ ಮೂಲಕ ಐಜೂರು ವೃತ್ತದಲ್ಲಿ ಸಮಾವೇಶಗೊಳ್ಳಲಿದೆ. ಐಜೂರು ವೃತ್ತದಲ್ಲಿ ಬಹಿರಂಗ ಸಮಾವೇಶಕ್ಕಾಗಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.
ಸುಮಾರು 3-4 ಕಿ.ಮೀ ಪಾದಯಾತ್ರೆಯಲ್ಲಿ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಜ್ಜೆ ಹಾಕಲಿದ್ದಾರೆ. ಪಾದಯಾತ್ರೆ ಸಾಗುವ ರಸ್ತೆ ಬದಿಯ ಕಟ್ಟಡಗಳಿಗೆ ವಿದ್ಯುತ್ ದೀಪಗಳ ಅಲಂಕಾರ, ಬಾಳೆಕಂದು ಕಟ್ಟಲಾಗುತ್ತಿದ್ದು, ನಾಯಕರ ಸ್ವಾಗತಕೋರುವ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ. ಜಿಲ್ಲೆಯ ಐದು ತಾಲೂಕು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಕಾಂಗ್ರೆಸ್ ಮುಖಂಡರು ಆಗಮಿಸುತ್ತಿದ್ದು, ಈ ಪಾದಯಾತ್ರೆಯಲ್ಲಿ ಸುಮಾರು 15-20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾನಪದ ಕಲಾ ತಂಡಗಳು ಮಾರ್ಗದುದ್ದಕ್ಕೂ ಪಾದಯಾತ್ರೆಗೆ ಮೆರಗು ತುಂಬಲಿವೆ.
ಡಿಕೆ ಸಹೋದರರಿಂದ ಕಳ್ಳ ಮಾರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಳಾಂತರ: ಅಶ್ವತ್ಥ ನಾರಾಯಣ
ಭಾರತ್ ಜೋಡೋ ಯಾತ್ರೆ ನೆನಪಿನಾರ್ಥ ರಾಮನಗರದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಜಿಲ್ಲಾಕಾರಿಗಳ ಕಚೇರಿ ಬಳಿ ಸಿಎಂ ಸಿದ್ದರಾಮಯ್ಯ, ಡಿಸಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರನ್ನು ಅದ್ಧೂರಿಯಾಗಿ ಸ್ವಾಗತ ಕೋರಲಾಗುವುದು. ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಇಕ್ಬಾಲ್ ಹುಸೇನ್ , ಶಾಸಕರು , ರಾಮನಗರ ಕ್ಷೇತ್ರ.
ಕಾಂಗ್ರೆಸ್ಸಿನವರದು ಭಾರತವನ್ನು ಜೋಡಣೆ ಮಾಡುವ ಕೆಲಸ ಅಲ್ಲ. ಭಾರತ ಅಂತ ಹೆಸರಿಟ್ಟರೆ ಭಾರತ್ ಜೋಡೋ ಅಂತ ಹೋಗುತ್ತಾರೆ. ಕಾಂಗ್ರೆಸ್ ಹೆಸರನ್ನೂ ವಿದೇಶಿಗರೇ ಇಟ್ಟಿದ್ದು. ಇಂಡಿಯಾ ಅಂತ ನಾಮಕರಣ ಮಾಡಿದ್ದು ವಿದೇಶಿಗರು. ಇವರ ಪಕ್ಷನೇ ವಿದೇಶಿ. ಅವರ ಪಕ್ಷದಲ್ಲಿರುವ ಪ್ರಮುಖರು ಎಲ್ಲರು ವಿದೇಶಿಗರೇ. ಭಾರತ ಅನ್ನೋ ಭಾವನೆ ಇಲ್ಲದವರು.
-ಅಶ್ವತ್ಥ ನಾರಾಯಣ, ಮಾಜಿ ಉಪಮುಖ್ಯಮಂತ್ರಿ.