ಮನುವಾದ ಮಟ್ಟಹಾಕಲು ಮತ್ತೊಂದು ಹೋರಾಟ ಅಗತ್ಯ: ಸಚಿವ ಮಹದೇವಪ್ಪ

By Kannadaprabha News  |  First Published Jan 16, 2025, 10:14 PM IST

ಸ್ವಾತಂತ್ರ್ಯ ಚಳವಳಿಯ ಮಾದರಿಯಲ್ಲಿ ಮನುವಾದವನ್ನು ಮಟ್ಟ ಹಾಕಲು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. 


ಮೈಸೂರು (ಜ.16): ಸ್ವಾತಂತ್ರ್ಯ ಚಳವಳಿಯ ಮಾದರಿಯಲ್ಲಿ ಮನುವಾದವನ್ನು ಮಟ್ಟ ಹಾಕಲು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬೆಳಗಾವಿ ಗಾಂಧಿ ಭಾರತ ಜೈ ಬಾಪು, ಜೈ ಭೀಮ್- ಜೈ ಸಂವಿಧಾನ ಸಮಾವೇಶ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮ, ಜಾತೀಯತೆ ಹೆಸರಿನಲ್ಲಿ ಕೋಮುವಾದದ ರಾಜಕಾರಣ ಮಾಡುತ್ತಿರುವುದನ್ನು ಮಟ್ಟ ಹಾಕಿ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಆಶಯದ ಜಾತ್ಯತೀತತೆಯನ್ನು ಉಳಿಸಲು ಸಂಕಲ್ಪ ಮಾಡಬೇಕು.

ದೇಶದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಕೋಮುಪ್ರಚೋದನೆ ಕೆಲಸ ನಡೆಯುತ್ತಿದೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ಕಾಂಗ್ರೆಸ್ ಆಡಳಿತ ಹೊರತುಪಡಿಸಿ ಬಂದ ಸರ್ಕಾರಗಳು ಸ್ವಾತಂತ್ರ್ಯದ ವಿಚಾರ, ಸಂವಿಧಾನದ ಆಶಯಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಭಾರತದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಎತ್ತಿಕಟ್ಟುವ ವಾತಾವರಣ ಇದೆ. ಜನರು ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದರು. ಸಂವಿಧಾನ ರಕ್ಷಿಸಬೇಕಾದ ಗೃಹಸಚಿವ ಅಮಿತ್ ಶಾ ಅವರೇ ರಾಜ್ಯಸಭೆಯಲ್ಲಿ ಹೇಳಿರುವ ಮಾತು ನೋಡಿದರೆ ಭಾರತದ ಸಂವಿಧಾನಕ್ಕೆ ಅಪಾಯ ಬಂದಿದೆ. ಹೀಗಾಗಿ, ಮನುವಾದವನ್ನು ಮಟ್ಟ ಹಾಕಲು ಜೈ ಬಾಪು, ಜೈ ಭೀಮ್ ಅನಿವಾರ್ಯ. ಸ್ವಾತಂತ್ರ್ಯ ಚಳವಳಿ ಮಾದರಿಯಲ್ಲಿ ಮತ್ತೊಂದು ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

Tap to resize

Latest Videos

ಸಿಎಂ ಕುರ್ಚಿ ಖಾಲಿ ಇಲ್ಲ, ಸಿದ್ದರಾಮಯ್ಯ ಮುಂದುವರಿಯುತ್ತಾರೆ: ಸಚಿವ ಮಹದೇವಪ್ಪ

ರಾಷ್ಟ್ರದ ನಡೆ ಒಂದೆಡೆಯಾದರೆ ಬಿಜೆಪಿಯದ್ದು ಮತ್ತೊಂದು ಕಡೆ ಸಾಗುತ್ತಿದೆ. ಭಾರತದ 140 ಕೋಟಿ ಜನರನ್ನು ರಕ್ಷಿಸುವ ಸಂವಿಧಾನ ಹೊರತು ದಲಿತರು, ಮೀಸಲಾತಿಗೆ ಸೀಮತವಾಗಿಲ್ಲ. ಆದರೆ ಇಂದಿಗೂ ಅಂಬೇಡ್ಕರ್ ಅವರನ್ನು ದಲಿತರಿಗೆ ಸೀಮಿತಗೊಳಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸ್ವರಾಜ್ಯ ಮತ್ತು ಸ್ವಾವಲಂಬನೆ ಬದುಕು ಸಾಗಬೇಕು ಎನ್ನುವುದರ ಆಶಯವನ್ನು ಮರೆತಿರುವ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಾತ್ಯತೀತತೆಗೆ ಧಕ್ಕೆಯಾಗಿದೆ. ಬೆಳಗಾವಿ ಅಧಿವೇಶನಕ್ಕೆ ಹಾಲಿ ಮತ್ತು ಮಾಜಿ ಶಾಸಕರು ಜವಾಬ್ದಾರಿ ತೆಗೆದುಕೊಂಡು ಹೆಚ್ಚು ಮಂದಿಯನ್ನು ಸೇರಿಸಬೇಕು. ಜೈ ಬಾಪು, ಜೈ ಅಂಬೇಡ್ಕರ್, ಜೈ ಸಂವಿಧಾನ ಸಭೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ ಎಂದರು.

ಅಸ್ಪಶ್ಯತೆ ಆಚರಣೆ ತೊಡೆದು ಹಾಕಬೇಕು. ಧರ್ಮಗಳ ನಡುವೆ ಸಂಘರ್ಷ ಉಂಟಾಗದೆ ಸರ್ವಧರ್ಮದವರು ಒಂದಾಗಬೇಕು ಎನ್ನುವ ಕಲ್ಪನೆಯನ್ನು ಮರು ಸ್ಥಾಪಿಸಬೇಕಿದೆ ಎಂದು ಅವರು ಸಲಹೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಬೆಳಗಾವಿಯಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ದಾಟಿದೆ. ನಾವು ಈಗ ಮತ್ತೆ ಗಾಂಧೀಜಿ, ಅಂಬೇಡ್ಕರ್ ವಿಚಾರವನ್ನು ಮತ್ತೆ ಮಾತನಾಡಬೇಕಿದೆ. ಕೇಂದ್ರ ಗೃಹ ಸಚಿವರ ಮಾತುಗಳು ದಲಿತರಿಗಲ್ಲ, ಇಡೀ ಭಾರತೀಯರಿಗೆ ಮಾಡಿದ ಅಪಮಾನ. ಕಾಂಗ್ರೆಸ್ ಜಾತ್ಯತೀತ. ಸಂವಿಧಾನದ ಮೇಲೆ ನಂಬಿಕೆ ಹೊಂದಿದೆ. ಕಾಂಗ್ರೆಸ್ ಸಿದ್ಧಾಂತ ತಿಳಿಯದವರು ಅಧಿಕಾರದ ದಾಹದಿಂದ ಒಂದು ಕಡೆಯಿಂದ ಮತ್ತೊಂದು ಕಡೆ ಜಿಗಿಯುತ್ತಾರೆ. ಆದರೆ ಕಾಂಗ್ರೆಸ್ ಸಿದ್ಧಾಂತ ನಂಬಿದವರು ಎಂದಿಗೂ ಅಂತಹ ಕೆಲಸ ಮಾಡುವುದಿಲ್ಲ ಎಂದರು.

ದೇಶದಲ್ಲಿ ಶೇ.1ರಷ್ಟು ಜನರು 51ರಷ್ಟು ಸಂಪತನ್ನು ಹೊಂದಿದ್ದಾರೆ. ನಿರುದ್ಯೋಗ ಹೆಚ್ಚಾಗಿ ಬಡವರು ಮತ್ತು ಶ್ರೀಮಂತ ವರ್ಗದ ಅಂತರ ಹೆಚ್ಚಾಗಿದೆ. ವಿನಾಕಾರಣ ಜಾತೀವ್ಯವಸ್ಥೆ, ಧಾರ್ಮಿಕ ಆಲೋಚನೆಯ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಆಡಳಿತದಲ್ಲಿ ನಾನಾ ರೀತಿಯ ಸುಳ್ಳು ಹೇಳುತ್ತಿದೆ ಎಂದು ಅವರು ಕಿಡಿಕಾರಿದರು. ರಾಜಕೀಯ ಕಾರಣಕ್ಕಾಗಿ ಸರ್ಕಾರದ ವಿರುದ್ಧ ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿದ್ದು, ವಕ್ಛ್, ವಾಲ್ಮೀಕಿ, ಬೋವಿ, ಮುಡಾ ವಿಷಯಗಳಲ್ಲಿ ಸತ್ಯಾಂಶವಿಲ್ಲ. ನಾವು ಸತ್ಯವನ್ನು ಜನರಿಗೆ ಹೇಳುವ ಕೆಲಸ ಮಾಡದೆ ಮೌನವಾಗಿರುವುದು ಸರಿಯಲ್ಲ. 

ಚುನಾವಣೆ ಬಂದಾಗ ಸಂವಿಧಾನ ಬದಲಾವಣೆ ವಿಚಾರ ಹೇಳಿದರೆ ತಲುಪಲ್ಲ. ಹಾಗಾಗಿ ಜನರಿಗೆ ಬಿಜೆಪಿ ಸಂವಿಧಾನದ ವಿರೋಧಿ ಕೆಲಸಗಳನ್ನು ತಿಳಿಸಬೇಕು. ಮೀಸಲಾತಿ ಕಡಿತಗೊಳಿಸುವ ಮಾತು, ಬಿಜೆಪಿ ಸಂಸದರು ಸಂವಿಧಾನ ವಿರೋಧಿ ದಲಿತರಿಗೆ ಅಲ್ಲ, ಭಾರತೀಯರಿಗೆ ನೀಡಿದ ದೊಡ್ಡ ಕೊಡುಗೆ ಎಂದು ಅವರು ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 150 ಮಂದಿ ಪಾಲ್ಗೊಳ್ಳುವ ಕೆಲಸ ಮಾಡಬೇಕು. ಜವಾಬ್ದಾರಿ ಅರಿತು ಕರೆದುಕೊಂಡು ಹೋಗಿ, ಮತ್ತೆ ಕರೆತರಬೇಕು ಎಂದರು. ಮುಂದಿನ ತಿಂಗಳು ರಾಹುಲ್ ಗಾಂಧಿ ಅವರು ಬೆಂಗಳೂರು ನಗರ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಅದೇ ದಿನ ರಾಜ್ಯದಲ್ಲಿ ನೂರು ಕಾಂಗ್ರೆಸ್ ಭವನ ನಿರ್ವಾಣಕ್ಕೆ ತೀರ್ವಾನ ಮಾಡಲಾಗಿದೆ. 

ಬಿಜೆಪಿ-ಜೆಡಿಎಸ್ ಸರ್ವಾಧಿಕಾರಿ ನಡೆಯನ್ನು ಜನರು ತಿರಸ್ಕರಿಸಿದ್ದಾರೆ: ಸಚಿವ ಮಹದೇವಪ್ಪ

ಮೈಸೂರು ನಗರ ಕಾಂಗ್ರೆಸ್ ಭವನಕ್ಕೂ ಅಡಿಗಲು ಹಾಕಲಾಗುತ್ತಿದ್ದು, ಕಾಂಗ್ರೆಸ್ ಕಚೇರಿಗೆ ಭೂಮಿ ಬಿಟ್ಟುಕೊಟ್ಟ ಡಿ. ದೇವರಾಜ ಅರಸು ಟ್ರಸ್ಟ್ ಗೆ ಬೇರೆ ಕಡೆ ಎರಡು ಮೂರು ಎಕರೆ ಜಾಗಕೊಡಿಸಬೇಕು ಎಂದರು. ಕಟ್ಟಡ ನಿರ್ಮಾಣಕ್ಕೆ ಪ್ರತಿಯೊಬ್ಬರೂ ದೇಣಿಗೆ ನೀಡಬೇಕು. ಕಾರ್ಯಕರ್ತರಿಗೆ ಕಚೇರಿ ದೇಗುಲ ಇದ್ದಂತೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಬೆಳಗಾವಿಗೆ ಸಾರಿಗೆ ಬಸ್ ಗಳ ಬದಲಿಗೆ ಮಿನಿ ಬಸ್ ವ್ಯವಸ್ಥೆ ಮಾಡಿದರೆ ಉತ್ತಮವಾಗಲಿದೆ. ಬಸ್ ಗಳಲ್ಲಿ ಯಾರೂ ಬರಲ್ಲ. ಬೆಳಗಾವಿ ದೂರವಾಗಿರುವ ಕಾರಣ ಅಗತ್ಯವಾದ ಮಿನಿ ಬಸ್ ವ್ಯವಸ್ಥೆ ಮಾಡಿದರೆ ಜನರು ಬರುವುದಾಗಿ ಅವರು ತಿಳಿಸಿದರು.

click me!