ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ಹೋರಾಡಿದ್ದು ನಿಜ: ರಮೇಶ್‌ ಜಾರಕಿಹೊಳಿ

By Kannadaprabha News  |  First Published Jan 16, 2025, 6:30 PM IST

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು. 


ಬೆಳಗಾವಿ (ಜ.16): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ. ಆದರೆ, ಯಾಕೆ ಪ್ರವಾಸ ಮಾಡುತ್ತಾರೆ ಅದನ್ನ ಸ್ಪಷ್ಟಪಡಿಸಬೇಕು. ಮಗನ ಸ್ಥಾನ ಭದ್ರ ಮಾಡೋಕೆ ಮಾಡುತ್ತಿದ್ದಾರಾ? ಪಕ್ಷ ಭದ್ರ ಮಾಡೋಕೆ ಮಾಡುತ್ತಿದ್ದಾರಾ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪರವರೇ ನಿಮ್ಮ ಬಗ್ಗೆ ಗೌರವ ಇದೆ. ವಯಸ್ಸಾಗಿದೆ. ಪಕ್ಷ ಎಲ್ಲವನ್ನೂ ನಿಮಗೆ ಕೊಟ್ಟಿದೆ‌. ದಯವಿಟ್ಟು ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡಬೇಡಿ. ವಿಜಯೇಂದ್ರ ಬೆನ್ನು ಹತ್ತಿದರೆ ನೀವೂ ಹಾಳಾಗುತ್ತೀರಿ. ಮಗನಾಗಿ ನೋಡಬೇಡಿ, ವೈಫಲ್ಯಗೊಂಡ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕಕ್ಕೆ ಸಹಕಾರ ಕೊಡಿ ಎಂದು ಒತ್ತಾಯಿಸಿದರು.

Tap to resize

Latest Videos

ಬೆಳಗಾವಿ ಕಾಂಗ್ರೆಸ್‌ ಕಚೇರಿಗೆ 1.27 ಕೋಟಿ ನೀಡಿದ್ದೇನೆ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ

ಡಿಕೆಶಿ ಹಸ್ತಕ್ಷೇಪ ನನಗೆ ಸಂಬಂಧಿಸಿದ್ದಲ್ಲ: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ ಹಸ್ತಕ್ಷೇಪ ಮಾಡುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ. ಅದಕ್ಕೂ ನನಗೂ ಸಂಬಂಧ ಇಲ್ಲ. ನಾನು ಬಿಜೆಪಿ ನಿಷ್ಠಾವಂತ ಎಂಎಲ್‌ಎ, ಕಾರ್ಯಕರ್ತ. ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ದೊಡ್ಡದಿತ್ತು ಎಂಬುದು ನಿಜ. ಇಂದು ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣ ಆಗಲು ಜಾಗ ಕೊಡಿಸಲು ನಾನು ಓಡಾಡಿದ್ದೇ‌ನೆ ಎಂದು ಹೇಳಿದರು. ಕಾಂಗ್ರೆಸ್‌ ಕಚೇರಿಗೆ ಸತೀಶ ಜಾರಕಿಹೊಳಿ ಕೊಡುಗೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸತೀಶ್ ಜಾರಕಿಹೊಳಿ ಕೊಡುಗೆ ಇದೆ. 

ಅರ್ಧ ಕಾಮಗಾರಿ ಆಗಿದ್ದ ಕಟ್ಟಡ ಪೂರ್ಣಗೊಳಿಸಿದ್ದಾರೆ. ಇಂದಿಗೂ ಕಚೇರಿ ನಿರ್ವಹಣೆಗೆ ಸತೀಶ ಜಾರಕಿಹೊಳಿ ದುಡ್ಡು ನೀಡುತ್ತಿದ್ದಾರೆ ಎಂಬುದನ್ನು ಕೇಳಿದ್ದೇನೆ. ಕಾಂಗ್ರೆಸ್ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಹಾಗೂ ನಿರ್ವಹಣೆಗೆ ಸತೀಶ ಜಾರಕಿಹೊಳಿ ಕೊಡುಗೆ ಇದೆ ಎಂದು ಹೇಳಿದರು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಬೆಳಗಾವಿ ರಾಜಕಾರಣಕ್ಕೆ ಡಿ.ಕೆ.ಶಿವಕುಮಾರ ಎಂಟ್ರಿ ಆಗಲು ಕೊಟ್ಟಿಲ್ಲ. ಅಲ್ಲೇ ಬ್ಲಾಕ್ ಮಾಡಿದ್ದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಶಾಸಕ, ಮಂತ್ರಿಯಾಗಿ ಇದ್ದಾಗ ಆತನನ್ನು ಇಲ್ಲಿ ಬರಲು ಕೊಟ್ಟಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ಮಟ್ಟದಲ್ಲಿ ಅಂದು ಡಿ.ಕೆ.ಶಿವಕುಮಾರ ಅವರ ಸಲಹೆ ಸ್ವೀಕಾರ ಮಾಡಿದ್ದೇನೆ ಎಂದರು.ಕಾಂಗ್ರೆಸ್‌ ಭವನ ನಿರ್ಮಾಣದಲ್ಲಿ ಗೋಲಮಾಲ್‌:

ಕಾಂಗ್ರೆಸ್‌ ಭವನದ ಕಟ್ಟಡ ನಿರ್ಮಾಣ ಆಗುವಾಗ ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿದ್ದರು. ಆ ವೇಳೆ ಏನು ಲೆಕ್ಕ ಪತ್ರ ಮಾಡಿದ್ದಾರೆ ದೇವರಿಗೆ ಗೊತ್ತು. ಈಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಕೇಳಿ, ಯಾರ್ಯಾರು ಗೋಲ್‌ಮಾಲ್ ಮಾಡಿದ್ದಾರೆ ಎಂದು ನನಗೆ ಹೇಳಿದ್ದಾರೆ. ನಾನು ಅದನ್ನು ಬಹಿರಂಗಪಡಿಸಲ್ಲ. ಆ ಹಣದಲ್ಲಿ ಯಾರು ಕಾರು ಖರೀದಿಸಿದ್ದಾರೆ ಎನ್ನುವುದನ್ನು ವಿನಯನನ್ನು ಕೇಳಿ‌ ಎಂದು ಹೇಳಿದರು. ಕಾಂಗ್ರೆಸ್‌ ಕಚೇರಿ ಇರುವ ಜಾಗ ಕೇಂದ್ರ ಮಾಜಿ ಸಚಿವ ಬಿ.ಶಂಕರಾನಂದ ಹೆಸರಲ್ಲಿತ್ತು. ಬಿ.ಶಂಕರಾನಂದ ಮಕ್ಕಳನ್ನು ಆ ಜಾಗ ಕಚೇರಿಗೆ ಬಿಟ್ಟು ಕೊಡಲು ಮನವೊಲಿಸಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಕಟ್ಟಡಕ್ಕೆ ಜಾಗ ಮಂಜೂರಾಯಿತು. ಜಾಗ ಫ್ರೀ ಆಗಿ ಕೊಡಬಹುದಿತ್ತು. ಆದರೆ, ಆ ಜಾಗಕ್ಕೆ ₹54 ಲಕ್ಷ ನಿಗದಿ ಮಾಡಿದರು. 

ಈ ಹಣ ಕಡಿಮೆ ಮಾಡಲು ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ. ಆಗ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಣ ತುಂಬಲು ಮನವಿ ಮಾಡಿದರು. ಒಂದೇ ಹಂತದಲ್ಲಿ ಕಾಂಗ್ರೆಸ್ ಕಚೇರಿಗೆ ₹54 ಲಕ್ಷ ಕಟ್ಟಬೇಕಿತ್ತು. ಅದು ಬಹಳ ಆಗುತ್ತದೆ. ಎರಡು ಹಂತದಲ್ಲಿ ಹಣ ಪಾವತಿಗೆ ಮನವಿ ಮಾಡಿದೆ‌. ಬಳಿಕ ಮೊದಲ ಕಂತು ₹27 ಲಕ್ಷ ಹಣವನ್ನು ನಾನೇ ತುಂಬಿದೆ. ಜಾಗ ಖರೀದಿ ಆಯಿತು, ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ . ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರುಪಾಯಿ ಕೊಟ್ಟೆ . ಹೀಗೆ ಒಟ್ಟು ₹ 1.27 ಕೋಟಿ ಹಣವನ್ನು ನಾನು ಕೊಟ್ಟಿದ್ದೇನೆ. ಕಟ್ಟಡ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿದೆ‌‌‌. ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್ ಕಚೇರಿ ನಾನೇ ನಿರ್ಮಾಣ ಮಾಡಿದ್ದು ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳುತ್ತಿರುವುದು ತಪ್ಪು. ಆಗ ಇದ್ದಂತಹ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ₹20 ರಿಂದ 25 ಲಕ್ಷ ಹಣ ನೀಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಯಡಿಯೂರಪ್ಪ ಬಗ್ಗೆ ಮಾತಾಡೋ ಹಕ್ಕು ರಮೇಶ್‌ಗಿಲ್ಲ: ವಿಜಯೇಂದ್ರ

ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಆಡಿದ ಮಾತಿಗೆ ನನ್ನ ಸಹಮತವಿಲ್ಲ. ಅವರು ಆ ರೀತಿ ಹೇಳಿಲ್ಲಾ ಎನ್ನುತ್ತಾರೆ. ಇವರು ಹೇಳಿದ್ದಾರೆ ಎನ್ನುತ್ತಾರೆ. ಇಂದಿರಾಗಾಂಧಿ ಬಗ್ಗೆ ಸಿಎಂ ಇಬ್ರಾಹಿಂ ಏನ್ ಬೇಕಾದರೂ ಮಾತನಾಡಿದ್ದರು. ರಾಜಕಾರಣದಲ್ಲಿ ಇಂತಹ ವಿಚಾರ ದೊಡ್ಡದು ಮಾಡಬಾರದು. ರಾಜಕಾರಣದಲ್ಲಿ ಯಾರೂ ಶುದ್ಧರಿಲ್ಲ. ಏನೇ‌ನೋ ತಪ್ಪು ಹೇಳಿಕೆ ಕೊಡುತ್ತಾರೆ. ಈ ವಿಚಾರ ದೊಡ್ಡದು ಮಾಡಿ ವಿಧಾನಸೌಧಕ್ಕೆ ಅಗೌರವ ತಂದಿದ್ದಾರೆ ಎಂದು ಕಿಡಿಕಾರಿದರು.

click me!