ಕಾಂಗ್ರೆಸ್ ಸೇರಿದ ಬಿಆರ್‌ಎಸ್ ಶಾಸಕರ ಸಂಖ್ಯೆ 9ಕ್ಕೇರಿಕೆ. ಬಿಆರ್‌ಎಸ್ ಶಾಸಕರ ಸಂಖ್ಯೆ 30ಕ್ಕೆ ಕುಸಿತ.
ಹೈದರಾಬಾದ್ (ಜು.14): ತೆಲಂಗಾಣದ ಬಿಆರ್‌ಎಸ್ ಪಕ್ಷದ ಮತ್ತಿಬ್ಬರು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಸೇರಿದ ಬಿಆರ್‌ಎಸ್ ಶಾಸಕರ ಸಂಖ್ಯೆ 9ಕ್ಕೆ ಏರಿದ್ದು, ವಿಧಾನಸಭೆಯಲ್ಲಿ ಬಿಆರ್‌ಎಸ್ ಬಲ 30ಕ್ಕೆ ಕುಸಿದಿದೆ. ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ಸೆರಿಲಿಂಗಂಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅರೆಕಪುಡಿ ಗಾಂಧಿ ಹಾಗೂ ರಾಜೇಂದ್ರನಗರ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಪ್ರಕಾಶ್ ಗೌಡ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಇದರಿಂದ ಕಾಂಗ್ರೆಸ್ ಶಾಸಕರ ಬಲ 74ಕ್ಕೆ ಏರಿಕೆ ಆಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 65 ಹಾಗೂ ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದಿದ್ದವು ಇತ್ತೀಚೆಗೆ ಬಿಆರ್‌ಎಸ್‌ನ ಆರು ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
undefined
ಜಗನ್ ವಿರುದ್ಧ ಕೊಲೆ ಯತ್ನ ಕೇಸು:
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಚಂದ್ರಬಾಬು ನಾಯ್ಡು ಸರ್ಕಾರ ಪ್ರಹಾರ ಮುಂದುವರಿಸಿದೆ. ರೆಡ್ಡಿ ಮತ್ತು ಇತರ ನಾಲ್ವರ ವಿರುದ್ಧ ಗುಂಟೂರು ಜಿಲ್ಲೆಯ ನಗರಂಪಲೆಂ ಪೊಲೀಸರು ಶುಕ್ರವಾರ ಹಳೆಯ ಘಟನೆಯೊಂದನ್ನು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ತೆಲುಗುದೇಶಂ ಶಾಸಕ ಕೆ ರಘುರಾಮ ಕೃಷ್ಣಂ ರಾಜು ಅವರ ದೂರಿನ ಮೇರೆಗೆ ಜಗನ್, ಮಾಜಿ ಪೊಲೀಸ್ ಮಹಾನಿರ್ದೇಶಕ (ಗುಪ್ತಚರ) ಪಿಎಸ್‌ಆರ್ ಆಂಜನೇಯುಲು, ಮಾಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಸಿಐಡಿ) ಮತ್ತು ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಯ ಮಾಜಿ ಅಧೀಕ್ಷಕಿ ಡಾ ಜಿ ಪ್ರಭಾವತಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
2001ರಲ್ಲಿ ರಘುರಾಮ ಕೃಷ್ಣಂ ರಾಜು ಅವರನ್ನು ಆಂಧ್ರ ಸಿಐಡಿ ಸಿಬ್ಬಂದಿ ಹೈದರಾಬಾದ್‌ನಲ್ಲಿ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ‘ಆಗ ನನಗೆ ಸಿಐಡಿ ಅಧಿಕಾರಿ ಪಿ.ವಿ. ಸುನೀಲ್ ಕುಮಾರ್, ಆಂಜನೇಯುಲು ಮತ್ತು ಇತರ ಕೆಲವು ಪೊಲೀಸ್ ಅಧಿಕಾರಿಗಳು ರಬ್ಬರ್ ಬೆಲ್ಟ್ ಮತ್ತು ಲಾಠಿಯಿಂದ ಥಳಿಸಿದ್ದರು. ಎದೆ ಮೇಲೆ ಕುಳಿತು ಉಸಿರುಗಟ್ಟಿಸಲು ಯತ್ನಿಸಿದರು. ಜಗನ್ ಅವರ ಸೂಚನೆ ಮೇರೆಗೆ ನನಗೆ ಹೃದಯ ಸಂಬಂಧಿ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳಲೂ ಅವಕಾಶ ನೀಡಲಿಲ್ಲ. ಪೊಲೀಸ್ ಸಿಬ್ಬಂದಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದರು’ ಎಂದು ರಾಜು ದೂರಿದ್ದಾರೆ. ಈ ದೂರು ಆಧರಿಸಿ ಜಗನ್ ವಿರುದ್ಧ ಕೊಲೆ ಯತ್ನ, ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಕ್ರಿಮಿನಲ್ ಪಿತೂರಿ ಮುಂತಾದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.