ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೂರ್ವದಿಂದ ಪಶ್ಚಿಮದವರೆಗೆ ಮತ್ತೊಂದು ಭಾರತ ಜೋಡೋ ಯಾತ್ರೆ ಮಾಡಲು ಚಿಂತನೆ ಮಾಡಿದ್ದಾರೆ. ಇದಕ್ಕೆ ಹಿನ್ನಡೆ ಮಾಡಲು ಷಡ್ಯಂತ್ರ ನಡೆಯುತ್ತಿದೆ.
ಬೆಂಗಳೂರು (ಜು.10): ದೇಶದಲ್ಲಿ ದಕ್ಷಿಣದ ತುದಿ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರವದವರೆಗೆ ಪಾದಯಾತ್ರೆಯನ್ನು ಮಾಡಿದ್ದ ರಾಹುಲ್‌ಗಾಂಧಿ ಅವರಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈಗ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹತೆಗೊಳಿಸಿದ್ದರೂ, ಧೃತಿಗಡೆದೇ ಮತ್ತೊಮ್ಮೆ ಪೂರ್ವದಿಂದ ಪಶ್ಚಿಮಕ್ಕೆ ಭಾರತ್ ಜೋಡೋ ಯಾತ್ರೆಯನ್ನು ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹೋದ ಕಡೆಗಳಲ್ಲಿ ಎಲ್ಲವೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅವರು ಈಸ್ಟ್ ಅಂಡ್ ವೆಸ್ಟ್ ಭಾರತ್ ಜೋಡೋ ಯಾತ್ರೆ ಮಾಡಲು ಚಿಂತನೆ ನಡೆಸಿದ್ದಾರೆ. ಈ ಯಾತ್ರೆಗೆ ಹಿನ್ನಡೆಯನ್ನುಂಟು ಮಾಡುವ ಉದ್ದೇಶದಿಂದಲೇ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ಆದ್ದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ವಿರೋಧಿ ಪಕ್ಷಗಳಿಗೆ ಬುದ್ಧಿ ಕಲಿಸಲಿಕ್ಕೆಂದೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಡೆಯಿಂದ ಒಂದು ನಿರ್ಧಾರ ಮಾಡಲಾಗಿದೆ. ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ಪರವಾಗಿ ನಿಲ್ಲುವ ಸಂದೇಶವನ್ನು ವಿರೋಧಿಗಳಿಗೆ ಕಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜು.12ರಂದು ಕಾಂಗ್ರೆಸ್‌ನಿಂದ ದೇಶಾದ್ಯಂತ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನಪ್ರತಿಭಟನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಹುಲ್ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ. ಇನ್ನು ಕರ್ನಾಟಕದಲ್ಲಿ ಎಲ್ಲ ಶಾಸಕರು, 30 ಜಿಲ್ಲೆಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ತಾಲೂಕು ಮತ್ತು ಬ್ಲಾಕ್ ಮಟ್ಟದ ಅಧ್ಯಕ್ಷರು ಕೂಡ ಭಾಗಿ ಆಗುತ್ತಾರೆ. ಇನ್ನು ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾನೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಜು.12ರಂದು ಅಧಿವೇಶನ ಇದ್ದರೂ ನಾವು ಬೇರೆಯವರಿಗೆ ಜವಾಬ್ದಾರಿ ವಹಿಸಿ ಭಾಗವಹಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜಕೀಯವಾಗಿ ಮುಗಿಸಲು ಷಡ್ಯಂತ್ರ: ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಮಾತನಾಡಿದ್ದ ಬಗ್ಗೆ ನ್ಯಾಯಾಲಯದಲ್ಲಿ ತೀರ್ಪು ಸಿಕ್ಕದೆ. ಅವರನ್ನು ರಾಜಕೀಯದಲ್ಲಿ ಮುಗಿಸಬೇಕು ಅಂತಾ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ. ಬರೋಬ್ಬರಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದುಬಂದ ಸಂಸದರನ್ನು ರಾತ್ರೋ ರಾತ್ರಿ ಇಳಿಸಿದ್ದಾರೆ. ಆದರೆ, ಅವರಿಗೆ ಭಾರತ್ ಜೋಡೋ ಯಾತ್ರೇಲಿ ಸಿಕ್ಕಿರೋ ಪ್ರೀತಿ ಅವರ ಮೇಲಿದೆ. ಅವರು ಜೋಡೋ ಯಾತ್ರೆಲಿ ಎಲ್ಲೆಲ್ಲಿ ಹೋಗಿದ್ದಾರೆ ಎಲ್ಲಾ ಕಡೆಯೂ ಗೆದ್ದಿದ್ದೇವೆ ಎಂದು ಹೇಳಿದರು.
ರಾಹುಲ್ ಗಾಂಧಿ ಯಾತ್ರೆ ಮಾಡಿದಲ್ಲೆಲ್ಲಾ ಗೆಲುವು: ಇನ್ನು ಕರ್ನಾಟಕದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ ವರುಣಾ, ಗುಂಡಲಪೇಟೆ, ಶ್ರೀರಂಗಪಟ್ಟಣ, ಹಿರಿಯೂರು, ಗುಬ್ಬಿ, ಮೊಳಕಾಲ್ಮೂರು, ಬಳ್ಳಾರಿ ಸೇರಿದಂತೆ ಅವ್ರು ಹೆಜ್ಜೆ ಹಾಕಿದ್ದಲ್ಲೆಲ್ಲಾ ಗೆದ್ದಿದ್ದೇವೆ. ನಾವು ಗೆಲ್ಲೋಕೆ ಆಗದಿರುವ ಕಡೆಗಳಲ್ಲಿಯೂ ಈ ಚುನಾವನೆಯಲ್ಲಿ ಗೆದ್ದಿದ್ದೇವೆ. ರಾಹುಲ್ ಗಾಂಧಿ ಅವರ ಯಾತ್ರೆಯಿಂದ ನಮಗೆ ಒಂದು ಶಕ್ತಿ ಬಂದಿದೆ. ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹತೆಗೊಳಿಸಿದ್ದರಿಂದಾಗಿ ಇಡೀ ದೇಶಾದ್ಯಂತ 12ನೇ ತಾರೀಖು ಮೌನ ಹೋರಾಟ ಮಾಡಲಾಗುತ್ತಿದೆ. ನಾವು ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡ್ತೀವಿ ಎಂದು ತಿಳಿಸಿದರು.
ರಾಹುಲ್ ಸಂಸತ್ ಸದಸ್ಯತ್ವ ರದ್ದು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಜುಲೈ 17 ಮತ್ತು 18ರಂದು ವಿರೋಧ ಪಕ್ಷಗಳ ಸಭೆ: ದೇಶದ ವಿರೋಧ ಪಕ್ಷಗಳ ಸಭೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಗವಹಿಸುತ್ತಾರೆ. ಈ ಮೂಲಕ ಬೆಂಗಳೂರಿನಿಂದ ಕೇಂದ್ರ ಸರ್ಕಾರಕ್ಕೆ ಸಂದೇಶ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಬದಲು ಹಣ ನೀಡುವ ಬಗ್ಗೆ ವಿರೋಧ ಪಕ್ಷಗಳೇ ಸಲಹೆ ಕೊಟ್ಟಿದ್ದಾರೆ. ಅವರೇ ನಮಗೆ ಮಾರ್ಗದರ್ಶಕರು. ನಾವೇನು ಅಕ್ಕಿ ಇದ್ರೂ ಹಣ ಕೊಡ್ತಿಲ್ಲ. ಅಕ್ಕಿ ಇಲ್ಲ ಅಂತಾ ಹಣ ಕೊಡ್ತಿದೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.