ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜುಲೈ ಒಂದರಿಂದ ಜಾರಿಯಾಗಿರುವುದಿಲ್ಲ. ಆದರೆ, ಆಗಸ್ಟ್ ಮಾಸ ಆರಂಭಕ್ಕೂ ಮೊದಲೇ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು (ಜೂ.23): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜುಲೈ ಒಂದರಿಂದ ಜಾರಿಯಾಗಿರುವುದಿಲ್ಲ. ಆದರೆ, ಆಗಸ್ಟ್ ಮಾಸ ಆರಂಭಕ್ಕೂ ಮೊದಲೇ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1ರಿಂದಲೇ ಅನ್ನಭಾಗ್ಯ ಯೋಜನೆ ಪ್ರಾರಂಭಿಸುವುದಾಗಿ ಹೇಳಿದ್ದೆವು. ಆದರೆ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ಆದ್ದರಿಂದ ನಿಗದಿಯಂತೆ ಅನ್ನಭಾಗ್ಯ ಯೋಜನೆ ವಿಳಂಬವಾಗುತ್ತಿದೆ. ಆದರೆ, ಆಗಸ್ಟ್ ಮಾಸಕ್ಕೂ ಮೊದಲೇ ಯೋಜನೆ ಆರಂಭಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.
ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ: ಮಾಜಿ ಸಿಎಂ ಬೊಮ್ಮಾಯಿ
ಅನ್ನಭಾಗ್ಯ ಯೋಜನೆ ಜಾರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಅಕ್ಕಿ ಕೊಡುವುದಾಗಿ ಹೇಳಿದ್ದ ಎಫ್‌ಸಿಐ ಈಗ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಅಕ್ಕಿಗಾಗಿ ಬೇರೆ ರಾಜ್ಯಗಳಿಗೆ ಮನವಿ ಮಾಡುವಂತಾಗಿದೆ. ಈಗಾಗಲೇ ಛತ್ತೀಸ್‌ಗಢ ಮತ್ತು ಪಂಜಾಬ್ ಸರ್ಕಾರಗಳು ಅಕ್ಕಿ ಕೊಡಲು ಮುಂದೆ ಬಂದಿವೆ. ಈ ಕುರಿತು ಮಾತುಕತೆಯೂ ನಡೆಯುತ್ತಿದೆ ಎಂದು ತಿಳಿಸಿದರು.
ಛತ್ತೀಸ್‌ಗಢ ಸರ್ಕಾರ ಕೇವಲ ಒಂದು ತಿಂಗಳಿಗೆ ಆಗುವಷ್ಟುಅಕ್ಕಿ ಕೊಡಲು ಮುಂದೆ ಬಂದಿದೆ. ಕೇವಲ 1.5 ಮೆಟ್ರಿಕ್ ಟನ್ ಮಾತ್ರ ಕೊಡಲಿದೆ. ಬೇರೆ ರಾಜ್ಯಗಳ ಆಹಾರ ಸಚಿವರ ಜೊತೆಗೆ ಈ ಕುರಿತು ಸಭೆ ನಡೆಸಲಾಗುತ್ತಿದೆ. ಈ ಸಭೆಗಳು ಯಶಸ್ವಿಯಾಗಿ ನಮ್ಮಿಂದ ಅವರಿಗೆ ಹಣ ಸಂದಾಯವಾಗಿ ಅಕ್ಕಿ ಬರಲು ವಿಳಂಬವಾಗಲಿದೆ. ಹೀಗಾಗಿ ನಾವು ಆಗಸ್ಟ್ ತಿಂಗಳೊಳಗೆ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದರು.
ಕೇಂದ್ರದ ಅಸಹಕಾರ: ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಭೇಟಿ ಮಾಡಲು ಹೋಗಿದ್ದೆವು. ಆದರೆ, ಅವರು ಸಮಯ ಕೊಡಲಿಲ್ಲ. ರಾಜ್ಯಖಾತೆ ಸಚಿವರನ್ನು ಭೇಟಿಯಾಗಲು ಸಮಯ ಕೇಳಿದ್ದೆವು. ಗುರುವಾರ ಬೆಳಗ್ಗೆ 10 ಗಂಟೆಗೆ ಸಮಯ ನಿಗದಿ ಮಾಡಿದ್ದರು. ಅದನ್ನು ಕೂಡ ಮುಂದಕ್ಕೆ ಹಾಕಿದರು. ಅವರ ಉದ್ದೇಶ ಬಹಳ ಸ್ಪಷ್ಟವಾಗಿದೆ. ಬಡವರಿಗೆ ಅಕ್ಕಿ ಕೊಡಲು ಅವರು ಸಹಕಾರ ಕೊಡುತ್ತಿಲ್ಲ. ಅಕ್ಕಿ ವಿಚಾರವನ್ನು ಅವರು ರಾಜಕೀಯವಾಗಿ ತೆಗೆದುಕೊಂಡಿದ್ದಾರೆ. ಬಡವರಿಗೆ ಕೊಡುವ ಅನ್ನದಲ್ಲಿ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ ಅಷ್ಟು ಸಾಕು: ಎಚ್‌ಡಿಕೆ ಅಕ್ಕಿ ಹೇಳಿಕೆಗೆ ಡಿಕೆಶಿ ತಿರುಗೇಟು
ಅಕ್ಕಿಯನ್ನು ಕೇಂದ್ರದಿಂದ ಪುಕ್ಕಟೆ ಕೇಳುತ್ತಿಲ್ಲ. ಅದಕ್ಕೆ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ, ಕೇಂದ್ರದಿಂದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ನಮ್ಮದೇ ಆದಂತ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಎನ್‌ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ ಮುಖಾಂತರ ಅಕ್ಕಿ ಖರೀದಿ ಮಾಡುತ್ತೇವೆ. ತೆಲಂಗಾಣದವರು ಗೋಧಿ ಕೊಡುತ್ತೇವೆ ಎಂದಿದ್ದಾರೆ. ಛತ್ತೀಸ್‌ಗಢ ಮತ್ತು ಪಂಜಾಬ್ ಅಕ್ಕಿ ಕೊಡುವುದಾಗಿ ಹೇಳಿವೆ. ಆದರೆ ಈ ರಾಜ್ಯಗಳಿಂದ ನಮಗೆ ಸಾರಿಗೆ ವೆಚ್ಚ ಜಾಸ್ತಿ ಆಗಲಿದೆ. ಕೇಂದ್ರದ ಸಂಸ್ಥೆಗಳಾದರೆ ಅವರೇ ತರಿಸಿಕೊಂಡು ನಮಗೆ ಕೊಡುತ್ತಾರೆ. ಈ ವಾರದಲ್ಲಿ ದರ ನಿಗದಿಪಡಿಸಿ ಆ ನಂತರ ಖರೀದಿ ಮಾಡುತ್ತೇವೆ ಎಂದು ಹೇಳಿದರು.