Davanagere: ಶಾಸಕ ರೇಣುಕಾಚಾರ್ಯ ಮನೆಯಲ್ಲಿ ಭಾವುಕರಾದ ಬಿಎಸ್‌ವೈ

By Govindaraj SFirst Published Jul 24, 2022, 2:29 PM IST
Highlights

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಚುನಾವಣಾ ರಾಜಕೀಯ ನಿವೃತ್ತಿಯ ವಿಚಾರಕ್ಕೆ ಸಂಬಂಧಿಸಿ ಒಂದರೆಕ್ಷಣ ಭಾವುಕರಾದ ಪ್ರಸಂಗ ಶನಿವಾರ ನಡೆಯಿತು. 

ದಾವಣಗೆರೆ (ಜು.24): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಚುನಾವಣಾ ರಾಜಕೀಯ ನಿವೃತ್ತಿಯ ವಿಚಾರಕ್ಕೆ ಸಂಬಂಧಿಸಿ ಒಂದರೆಕ್ಷಣ ಭಾವುಕರಾದ ಪ್ರಸಂಗ ಶನಿವಾರ ನಡೆಯಿತು. ಬೆಂಗಳೂರಿಗೆ ತೆರಳುವ ಮುನ್ನ ತಮ್ಮ ಶಿಷ್ಯ, ಶಾಸಕ ರೇಣುಕಾಚಾರ್ಯ ಅವರ ಹೊನ್ನಾಳಿಯ ಮನೆಗೆ ಭೇಟಿಕೊಟ್ಟಿದ್ದ ಯಡಿಯೂರಪ್ಪ ಅವರು ಕೆಲಕಾಲ ಕುಶಲೋಪರಿ ವಿಚಾರಿಸಿದ್ದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ‘ನಿಮ್ಮ ರಾಜಕೀಯ ನಿವೃತ್ತಿ ರಾಜ್ಯ ಬಿಜೆಪಿಗೆ ಮಾರಕವಾಗುವುದಿಲ್ಲವೇ? ಎಂದು ಸುದ್ದಿಗಾರರಿಂದ ಪ್ರಶ್ನೆಯೊಂದು ತೂರಿಬಂದಾಗ, ಒಂದು ಕ್ಷಣ ಭಾವುಕರಾದರು. ಕಣ್ಣಂಚಿನಲ್ಲಿ ನೀರು ತುಂಬಿದರೂ, ಬೆಂಗಳೂರಿನಲ್ಲಿ ಹಿರಿಯರ ಜೊತೆಗೆ ಚರ್ಚಿಸುತ್ತೇನೆಂದಷ್ಟೇ ಹೇಳಿ ಸುಮ್ಮನಾದರು.

ಯಡಿಯೂರಪ್ಪ ಇದೊಂದು ಸಲ ಸ್ಪರ್ಧಿಸಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಇದೊಂದು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ರಾಜಕೀಯ ಗುರುವಿಗೆ ಮನವಿ ಮಾಡಿದ್ದಾರೆ. ಹೊನ್ನಾಳಿಯ ತಮ್ಮ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿ ತೆರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಯಡಿಯೂರಪ್ಪನವರದ್ದು. ಇನ್ನೂ 20 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷವು ವಿಪಕ್ಷ ಸ್ಥಾನದಲ್ಲೇ ಕೂರಲಿದೆ. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 

ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ: ಬಿಎಸ್‌ವೈ

ಲಕ್ಷಾಂತರ ಯುವಕರಿಗೆ ಯಡಿಯೂರಪ್ಪ ಮಾರ್ಗದರ್ಶನದ ಅಗತ್ಯವಿದೆ. ರಾಜ್ಯದ ಉದ್ದಗಲಕ್ಕೂ ಬಿಎಸ್‌ವೈ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು. ಪರಿಶಿಷ್ಟಜಾತಿ-ಪಂಗಡ, ಹಿಂದುಳಿದ ವರ್ಗ ಹೀಗೆ ಎಲ್ಲಾ ವರ್ಗದವರೂ ಬಿಜೆಪಿ ಮತ್ತು ಬಿ.ಎಸ್‌.ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದಾರೆ. ಯಡಿಯೂರಪ್ಪ ಮಾಸ್‌ ಲೀಡರ್‌. ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದ ಯಡಿಯೂರಪ್ಪ ಚುನಾವಣೆಗೆ ಸ್ಪರ್ಧೆ ಮಾಡಲ್ಲವೆಂದಿದ್ದಾರೆ. ಬಿ.ವೈ.ವಿಜಯೇಂದ್ರ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ನಾಯಕರು, ವರಿಷ್ಠರು ನಿರ್ಧಾರ ಮಾಡುತ್ತಾರೆ. ನಮ್ಮೆಲ್ಲರ ಅಪೇಕ್ಷೆಯಂತೆ ಯಡಿಯೂರಪ್ಪ ಮತ್ತೆ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದರು.

ಸದನದಲ್ಲಿ ಯಡಿಯೂರಪ್ಪ ಎದ್ದು ನಿಂತು ಮಾತು ಶುರು ಮಾಡಿದರೆ ಸಿದ್ದರಾಮಯ್ಯ ಸೇರಿದಂತೆ ಪ್ರತಿ ಪಕ್ಷದ ನಾಯಕರು ಆಲಿಸುತ್ತಾರೆ. ನಾವು ಯಾವಾಗ ಕರೆದರೂ ನಮ್ಮ ನಾಯಕ ಯಡಿಯೂರಪ್ಪ ಬರುತ್ತಾರೆ. ನಮ್ಮ ಹೋರಾಟಕ್ಕೆ ಸ್ಪೂರ್ತಿ ತುಂಬಿದ ನಾಯಕರವರು. ಕೆ.ಎಸ್‌.ಈಶ್ವರಪ್ಪ, ಅನಂತಕುಮಾರ, ಡಿ.ಎಚ್‌.ಶಂಕರಮೂರ್ತಿ ಸೇರಿದಂತೆ ಅನೇಕರು ಪಕ್ಷ ಕಟ್ಟಿದ್ದಾರೆ. ಆ ಎಲ್ಲರೂ ನೀಡಿದ ಕೊಡುಗೆಯೂ ಅಪಾರ. ಬಿಎಸ್‌ವೈ ಜೊತೆಗೆ ನಾವೆಲ್ಲರೂ ಇರುತ್ತೇವೆ ಎಂದು ಹೇಳಿದರು. ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ ಎಂಬುದು ಯಡಿಯೂರಪ್ಪನವರ ಧ್ಯೇಯ. ಜಾತ್ಯತೀತ ವ್ಯಕ್ತಿತ್ವದ ಯಡಿಯೂರಪ್ಪನವರು ಎಂಬುದಾಗಿ ಹೇಳುತ್ತಲೇ ಕಣ್ಣೀರು ಹಾಕುತ್ತಾ ರೇಣುಕಾಚಾರ್ಯ ಭಾವುಕರಾದರು.

ನನಗೆ ತಾಕತ್ತಿದ್ರೆ ಜವಾಬ್ದಾರಿ ಸಿಗುತ್ತೆ: ವಿಜಯೇಂದ್ರ

ರೇಣು ಭಾವುಕರಾಗಿ ಕಣ್ಣೀರು: 2023ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರು ಸ್ಪರ್ಧೆ ಮಾಡಬೇಕೆಂಬುದಾಗಿ ನಾವೂ ಮನವಿ ಮಾಡಿದ್ದೇವೆ ಎಂದರು. ಯಡಿಯೂರಪ್ಪನವರು ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆಯೇ ಹೊರತು, ಪಕ್ಷವನ್ನು ಸಂಘಟನೆ ಮಾಡುವುದಿಲ್ಲವೆಂಬು ಎಲ್ಲಿಯೂ ಹೇಳಿಲ್ಲ. ನಮ್ಮ ನಾಯಕರಾದ ಯಡಿಯೂರಪ್ಪನವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಬೇಕೆಂಬುದು ನಮ್ಮೆಲ್ಲಾ ಶಾಸಕರ ಇಂಗಿತವಾಗಿದೆ ಎನ್ನುವ ಮೂಲಕ ಭಾವುಕರಾಗಿ ಕಣ್ಣೀರು ಸುರಿಸಲಾರಂಭಿಸಿದರು.

click me!