‘ಅನರ್ಹ’ ಶಾಸಕರ ಜೊತೆಗೆ ಇನ್ನೂ ಇಬ್ಬರಿಗೆ ಸಚಿವ ಸ್ಥಾನ?

By Web DeskFirst Published Dec 11, 2019, 10:01 AM IST
Highlights

ಬಿಜೆಪಿ ಹಿರಿಯ ಶಾಸಕರಿಂದಲೂ ಮಂತ್ರಿಗಿರಿಗೆ ಲಾಬಿ| ‘ಅನರ್ಹ’ ಶಾಸಕರ ಜೊತೆಗೆ ಇನ್ನೂ ಇಬ್ಬರಿಗೆ ಸಚಿವ ಸ್ಥಾನ ನೀಡಲು ಅವಕಾಶ| ಕತ್ತಿ, ಲಿಂಬಾವಳಿ, ರಾಜುಗೌಡ, ನಿರಾಣಿಗೆ ಸಚಿವ ಸ್ಥಾನದ ಮೇಲೆ ಕಣ್ಣು

ಬೆಂಗಳೂರು[ಡಿ.11]: ಬಿಜೆಪಿಗೆ ಪಾದಾರ್ಪಣೆ ಮಾಡಿ ನೂತನ ಶಾಸಕರಾಗಿ ಆಯ್ಕೆಯಾದವರ ಜೊತೆ ತಮಗೂ ಸಚಿವ ಸ್ಥಾನ ನೀಡುವಂತೆ ಪಕ್ಷದ ಹಲವು ಹಿರಿಯ ಶಾಸಕರು ಲಾಬಿ ಆರಂಭಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಉದ್ದೇಶಿಸಿದ್ದಾರೆ.

ಸದ್ಯ ಖಾಲಿ ಉಳಿದಿರುವ 16 ಸಚಿವ ಸ್ಥಾನಗಳ ಪೈಕಿ ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿಗೆ ನೀಡುವುದು ಬಹುತೇಕ ನಿಶ್ಚಿತವಾಗಿದೆ. ಇನ್ನುಳಿದ ಎರಡು ಕ್ಷೇತ್ರಗಳ ಉಪಚುನಾವಣೆ ಬಾಕಿಯಿದೆ. ಇಬ್ಬರು ಅನರ್ಹರು ಸೋಲುಂಡಿದ್ದಾರೆ. ಒಬ್ಬ ಅನರ್ಹ ಶಾಸಕ ಕಣದಿಂದ ಹಿಂದೆ ಸರಿದಿದ್ದಾರೆ. ಇವರೆಲ್ಲರೂ ಸೇರಿಸಿದರೂ ಇನ್ನು ಎರಡು ಸಚಿವ ಸ್ಥಾನಗಳು ಖಾಲಿ ಉಳಿಯುತ್ತವೆ.

ಹೀಗಾಗಿ, ಆ ಎರಡು ಸ್ಥಾನಗಳಿಗಾಗಿ ಒತ್ತಡ ತಂತ್ರ ಆರಂಭವಾಗಿದೆ. ಜತೆಗೆ ಇನ್ನುಳಿದ ಅನರ್ಹ ಶಾಸಕರ ಹಾದಿ ಸುಗಮಗೊಳ್ಳುವವರೆಗೆ ಖಾಲಿ ಉಳಿಯುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಿ ಮುಂದೆ ಬಿಟ್ಟುಕೊಟ್ಟರಾಯಿತು ಎಂಬ ಮಾತೂ ಕೇಳಿಬರುತ್ತಿದೆ.

ಸದ್ಯಕ್ಕೆ ಹಿರಿಯ ಶಾಸಕರಾದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ರಾಜುಗೌಡ, ಮುರುಗೇಶ್‌ ನಿರಾಣಿ ಮೊದಲಾದವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ಆರಂಭಿಸಿದ್ದಾರೆ. ಈ ನಡುವೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಶಾಸಕರನ್ನು ಪಕ್ಷಕ್ಕೆ ಕರೆತರುವಲ್ಲಿ ಶ್ರಮಿಸಿದವರಲ್ಲಿ ಒಬ್ಬರಾಗಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರೂ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಆದರೆ, ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕವೇ ಈ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

click me!