
ಬೆಂಗಳೂರು (ಸೆ.20): ಆಳಂದ ವಿಧಾನ ಸಭಾ ಕ್ಷೇತ್ರದ ಮತ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಸುಳ್ಳು ಮಾಹಿತಿ ನೀಡಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2023ರಲ್ಲಿ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ 6,670 ನಕಲಿ ಅರ್ಜಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದವು. ಇದನ್ನು ನಾವು ಆಯೋಗದ ಗಮನಕ್ಕೆ ತಂದಿದ್ದೆವು. ಆದರೆ ಮತಗಳ್ಳತನವನ್ನು ತಡೆಹಿಡಿದಿದ್ದೇವೆ ಎಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಸುಳ್ಳು ಮಾಹಿತಿ ನೀಡಿವೆ. ಆದ್ದರಿಂದ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.
2013 ಫೆ.11ರಂದು ಕಲಬುರಗಿಯಲ್ಲಿ ನಾವು ಪತ್ರಿಕಾಗೋಷ್ಠಿ ನಡೆಸಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ 6,670 ಅರ್ಜಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿವೆ ಎಂದು ಬಹಿರಂಗಗೊಳಿಸಿದ್ದೆವು. ನಂತರ ಫೆ.20 ರಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ದೂರು ಸಲ್ಲಿಸಲಾಯಿತು. ಅರ್ಜಿ ಸಲ್ಲಿಸಿದ ಮೊಬೈಲ್ ಸಂಖ್ಯೆಗಳು ಉತ್ತರ ಪ್ರದೇಶ, ಬಿಹಾರ, ಒಡಿಶಾ ಮೂಲದವು. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.
ಮತ ಅಕ್ರಮದ ಬಗ್ಗೆ ಸೈಬರ್ ಕ್ರೈಂನವರು ಇಲ್ಲಿಯವರೆಗೂ ಮುಖ್ಯ ಚುನಾವಣಾಧಿಕಾರಿಗೆ 18 ಪತ್ರ ಬರೆದಿದ್ದರೂ ಒಂದಕ್ಕೂ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಒಟಿಪಿ, ಮೊಬೈಲ್ ಸಂಖ್ಯೆ, ಲಾಗಿನ್ ಮಾಹಿತಿ, ಐಪಿ ವಿಳಾಸ, ಡಿವೈಜ್ ಐಡಿ ಸೇರಿ ತಾಂತ್ರಿಕ ವಿವರಗಳನ್ನು ನೀಡಿ ಎಂದರೆ ಅದಕ್ಕೂ ಉತ್ತರ ನೀಡುತ್ತಿಲ್ಲ. ಲೋಕಸಭೆ ವಿಪಕ್ಞ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯ ಪ್ರಸ್ತಾಪ ಮಾಡಿದ ಬಳಿಕ ದಾಖಲೆಗಳನ್ನು ನೀಡಲಾಗಿದೆ ಎಂದು ಆಯೋಗ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಆಳಂದ ಮತಗಳ್ಳತನದ ಬಗ್ಗೆ ರಾಜ್ಯ ಚುನಾವಣಾಧಿಕಾರಿ, ಕಲಬುರಗಿ ಜಿಲ್ಲಾಧಿಕಾರಿ, ಆಳಂದ ತಹಸೀಲ್ದಾರ್‌ಗೆ ದೂರು ನೀಡಲಾಗಿತ್ತು. ಮತ ಅಕ್ರಮದ ಬಗ್ಗೆ ಆಳಂದ ಚುನಾವಣಾಧಿಕಾರಿಯೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಬಳಿಕ ಆಳಂದ ಡಿವೈಎಸ್ಪಿ ತನಿಖೆ ನಡೆಸಲು ಮುಂದಾದಾಗ ಅವರಿಗೆ ಸಹಕಾರ ಸಿಗಲಿಲ್ಲ. ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಸಹಕಾರ ಸಿಗದೆ ಕೊನೆಗೆ ಸಿಐಡಿ ತನಿಖೆಗೆ ವಹಿಸಲಾಯಿತು. ಆದರೆ ಸಿಐಡಿ ತನಿಖೆಗೂ ಚುನಾವಣಾ ಆಯೋಗ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.