
ಹುಬ್ಬಳ್ಳಿ(ಏ.27): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವಾಗ ಗಲಾಟೆ ಆಗಿದೆ ತೋರಿಸಿ. ಶಾ ಅವರು ತಕ್ಷಣ ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನಿಲ್ಲಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಜನ ಅಷ್ಟು ಕೆಟ್ಟವರಿದ್ದಾರಾ? ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಲ್ಲಿ ಬರೀ ಗದ್ದಲಗಳಾಗುತ್ತಿದ್ದವೇ? ಶಾಂತಿ, ಸಹನೆಯುಳ್ಳ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ಬಿಜೆಪಿ ಗಲಾಟೆ, ದಂಗೆ ಎಬ್ಬಿಸುವ ಹುನ್ನಾರ ನಡೆಸುವಂತಿದೆ. ಶಾ ಹೇಳಿಕೆಗಳ ಬಗ್ಗೆ ಕಾನೂನು ಅಂಶಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವ ಕುರಿತು ಇಂಗಿತ ವ್ಯಕ್ತಪಡಿಸಿದರು.
ಡಬಲ್ ಎಂಜಿನ್ ಕಮಿಷನ್ 80 ಪರ್ಸೆಂಟ್?: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳಲಿದೆ ಎಂದು ಅಮಿತ್ ಶಾ ಟೀಕೆಗೂ ತಿರುಗೇಟು ನೀಡಿದ ಅವರು, ಇದುವರೆಗೂ ಬಿಜೆಪಿ ಕೂಡ ಹಾಗೆ ಮಾಡಿಕೊಂಡು ಬಂದಿದೆಯೇ? ನೀವು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಖಜಾನೆ ಕೀಲಿ ನಿಮ್ಮ ಬಳಿಯೇ ಇದೆ. ಪೆಗಾಸಸ್ ಅನ್ನು ಎಲ್ಲರ ಮನೆ ಮೇಲೆ ಇಟ್ಟಿದ್ದೀರಿ. ಎಟಿಎಂ ಕೂಡ ಅವರಲ್ಲಿಯೇ ಇದೆ ಎಂದು ಹೇಳಿದರು.
ಶೆಟ್ಟರನ್ನು ಗೆಲ್ಲಿಸ್ತೇವೆ: ಖರ್ಗೆ
ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್‌ಗೆ ಬಂದಿರುವ ಲಿಂಗಾಯತ ಮುಖಂಡ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಟಾರ್ಗೆಟ್ ಮಾಡಿದೆ. ಆದರೆ ಅದು ಫಲಿಸುವುದಿಲ್ಲ. ಕಾಂಗ್ರೆಸ್ ಅವರನ್ನು ಗೆಲ್ಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರು ಕಾರಣ ಎಂಬುದು ಗೊತ್ತಿದೆ. ಹಾಗಂತ ಅವರನ್ನು ಹೊಣೆ ಮಾಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.