
ಬೆಂಗಳೂರು(ಮಾ.20): ‘ನಮ್ಮಲ್ಲಿ ಸೂಪರ್ ಸಿಎಂ ಇಲ್ಲ, ಶ್ಯಾಡೋ ಸಿಎಂ ಇಲ್ಲ. ಇರೋದು ಒಬ್ಬರೇ ಸಿಎಂ ಅದು- ‘ಸ್ಟ್ರಾಂಗ್ ಸಿಎಂ’. ನಿಮ್ಮ ಹಾಗೇ ನಾನು ‘ವೀಕ್ ಪಿಎಂ’ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಮಂಗಳವಾರ ಈ ಕುರಿತು ‘ಎಕ್ಸ್’ನಲ್ಲಿ (ಟ್ವೀಟರ್) ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ. ಅದು ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ನಾನು ವೀಕ್ ಪಿಎಂ ಅಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಬಾಯಿಯಲ್ಲೂ ಸೀತಾರಾಮ ಹೇಳಿಸಿದ್ದ ಮೋದಿ: ಕೋಟ ಶ್ರೀನಿವಾಸ್ ಪೂಜಾರಿ
‘ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ. ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ‘ವೀಕ್ ಪಿಎಂ’ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ. ಬಿ.ಎಸ್.ಯಡಿಯೂರಪ್ಪನವರು ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು. ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ‘ವೀಕ್ ಪಿಎಂ’ ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
‘ಕರ್ನಾಟಕದಲ್ಲಿ ನಿಮ್ಮ ನಾಯಕತ್ವದ ವಿರುದ್ಧ ಅರ್ಧ ಡಜನ್ ಬಿಜೆಪಿ ನಾಯಕರು ಬಂಡೆದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ನಿಮ್ಮ ಪಕ್ಷದ ನಾಯಕರು ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿಮ್ಮ ಯಾವ ಮನವಿಗೂ ಅವರು ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲವರು ನಮ್ಮನ್ನೂ ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತಹ ಅಶಿಸ್ತಿನ ತಾಂಡವ. ಇದಕ್ಕೆಲ್ಲ ಕಾರಣ ನೀವೊಬ್ಬ ‘ವೀಕ್ ಪಿಎಂ’ ಆಗಿರುವುದಲ್ಲವೇ?’ ಎಂದು ಪ್ರಧಾನಿ ಮೋದಿಯವರನ್ನು ಕೆಣಕಿದ್ದಾರೆ.
ಕೇಂದ್ರದಿಂದ ಬರದ ಹಣ ನಯಾಪೈಸೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ
‘ಶಿವಮೊಗ್ಗದಲ್ಲಿ ನೀವು ಪಕ್ಷದ ಪ್ರಚಾರ ಸಭೆ ನಡೆಸುತ್ತಿದ್ದಾಗ ಬಂಡುಕೋರ ನಾಯಕ ಈಶ್ವರಪ್ಪ ಅವರು ಕೂಗಳತೆ ದೂರದ ತಮ್ಮ ಮನೆಯಲ್ಲಿದ್ದರೂ ಕ್ಯಾರೇ ಅನ್ನದೆ ಸಭೆಗೆ ಗೈರು ಹಾಜರಾಗಿದ್ದರು. ಇಷ್ಟು ಮಾತ್ರವಲ್ಲ ನಿರಂತರವಾಗಿ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ವೀಕ್ ಪಿಎಂ ಅಲ್ಲದೆ ಮತ್ತೇನು?’ ಎಂದಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂಗಳ ಕಾಟವಿದೆ. ಶ್ಯಾಡೋ ಸಿಎಂ, ಸೂಪರ್ ಸಿಎಂ ಇಲ್ಲಿದ್ದಾರೆ ಎಂದು ಟೀಕಿಸಿದ್ದರು.
ಸಿಎಂ ವಾಗ್ಬಾಣ
1. ಬಿಎಸ್‌ವೈ ನಿಮ್ಮ ವಿರುದ್ಧವೇ ಬಂಡೆದ್ದಿದ್ದರು. ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದಿದ್ದೀರಿ. ಹಾಗಾದರೆ ನೀವು ದುರ್ಬಲ ಅಲ್ಲವೇ?
2. ಟಿಕೆಟ್ ವಂಚಿತ ಅರ್ಧ ಡಜನ್ ಬಿಜೆಪಿಗರು ಬೀದಿಯಲ್ಲಿ ಹೊಡೆದಾಡುತ್ತಿದ್ದಾರೆ. ಈ ಅಶಿಸ್ತಿಗೆ ನೀವು ವೀಕ್ ಆಗಿರುವುದೇ ಕಾರಣವಲ್ಲವೇ?
3. ಶಿವಮೊಗ್ಗದಲ್ಲಿದ್ದಾಗ ಈಶ್ವರಪ್ಪ, ಬಿಜೆಪಿ ವಿರುದ್ಧವೇ ಕಿಡಿಕಾರುತ್ತಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದ ನೀವು ವೀಕ್ ಅಲ್ಲವೇ?
ಇಂಡಿಯಾ ಶೈನಿಂಗ್‌ಗೆ ಆದ ಗತಿಯೇ ಮೋದಿ ಗ್ಯಾರಂಟಿಗೂ ಆಗುತ್ತೆ
ಲೋಕಸಭೆ ಚುನಾವಣೆಯಲ್ಲಿ ಭಾರತವು ಬದಲಾವಣೆ ಬಯಸಿದೆ. ಈಗ ಮೋದಿ ಸರ್ಕಾರ ಘೋಷಿಸುತ್ತಿರುವ ಗ್ಯಾರಂಟಿಗಳಿಗೆ 2004ರಲ್ಲಿ ಬಿಜೆಪಿ ಮಾಡಿದ್ದ ‘ಇಂಡಿಯಾ ಶೈನಿಂಗ್’ ಘೋಷಣೆಗೆ ಆದ ಗತಿಯೇ ಆಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.