AICC President Election: ಕಾಂಗ್ರೆಸ್‌ ಅಧ್ಯಕ್ಷರ ಎಲೆಕ್ಷನ್ನಲ್ಲಿ 500 ಮತ ಚಲಾವಣೆ: ಶೇ.99.40 ವೋಟಿಂಗ್‌

By Govindaraj S  |  First Published Oct 18, 2022, 2:45 AM IST

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದೇಶಾದ್ಯಂತ ನಡೆದ ಚುನಾವಣೆ ಅಂಗವಾಗಿ ಸೋಮವಾರ ರಾಜ್ಯದ ಕೆಪಿಸಿಸಿ ಕಚೇರಿಯಲ್ಲಿ ವ್ಯವಸ್ಥಿತ ಮತದಾನ ನಡೆದಿದ್ದು, ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 500 ಮಂದಿ ಮತದಾನ ಮಾಡಿದ್ದಾರೆ. 137 ವರ್ಷಗಳ ಇತಿಹಾಸದ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಆರನೇ ಬಾರಿಗೆ ಚುನಾವಣೆ ನಡೆದಿದೆ.


ಬೆಂಗಳೂರು (ಅ.18): ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದೇಶಾದ್ಯಂತ ನಡೆದ ಚುನಾವಣೆ ಅಂಗವಾಗಿ ಸೋಮವಾರ ರಾಜ್ಯದ ಕೆಪಿಸಿಸಿ ಕಚೇರಿಯಲ್ಲಿ ವ್ಯವಸ್ಥಿತ ಮತದಾನ ನಡೆದಿದ್ದು, ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 500 ಮಂದಿ ಮತದಾನ ಮಾಡಿದ್ದಾರೆ. 137 ವರ್ಷಗಳ ಇತಿಹಾಸದ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಆರನೇ ಬಾರಿಗೆ ಚುನಾವಣೆ ನಡೆದಿದೆ. 22 ವರ್ಷಗಳ ಬಳಿಕ ನಡೆದ ಚುನಾವಣೆಗೆ ರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿರುವುದರಿಂದ ತೀವ್ರ ಕುತೂಹಲ ಮೂಡಿಸಿತ್ತು.

ರಾಜ್ಯದ ಮತದಾರರಿಗಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತಗಟ್ಟೆವ್ಯವಸ್ಥೆ ಮಾಡಲಾಗಿತ್ತು. ಒಟ್ಟು 503 ಮಂದಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದರು. ಈ ಪೈಕಿ ನಿವೇದಿತ್‌ ಆಳ್ವಾ ಹಾಗೂ ಪ್ರಶಾಂತ್‌ ದೇಶಪಾಂಡೆ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಮತದಾನ ಮಾಡಿಲ್ಲ. ಇನ್ನು ಕೊರೋನಾದಿಂದ ಬಳಲುತ್ತಿರುವ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್‌ ಖಾನ್‌ ಪರ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಮತ ಚಲಾಯಿಸಿದ್ದರು. ಆದರೆ, ಚುನಾವಣಾಧಿಕಾರಿಗಳು ಮತವನ್ನು ಅನೂರ್ಜಿತಗೊಳಿಸಿದ್ದು, ಹೀಗಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದ ಮತದಾನದಲ್ಲಿ 500 ಮಂದಿ ಮಾತ್ರ ಮತ ಚಲಾಯಿಸಿದಂತಾಗಿದೆ. ಈ ಮೂಲಕ ಶೇ.99.40ರಷ್ಟು ಮತದಾನ ಆಗಿದೆ.

Tap to resize

Latest Videos

ಮಲ್ಲಿಕಾರ್ಜುನ್ ಖರ್ಗೆಯಲ್ಲ ನಡ್ಡಾ ರಬ್ಬರ್‌ ಸ್ಟಾಂಪ್‌: ಕಾಂಗ್ರೆಸ್‌ ತಿರುಗೇಟು

ಉಳಿದಂತೆ ಎಐಸಿಸಿ ಚುನಾವಣಾ ಜವಾಬ್ದಾರಿಯಲ್ಲಿರುವ ಡಾ.ಜಿ.ಪರಮೇಶ್ವರ್‌ ಅವರು ಕೇರಳದಲ್ಲಿ, ಜಿ.ಸಿ.ಚಂದ್ರಶೇಖರ್‌ ಉತ್ತರಖಂಡ, ಅಂಜಲಿ ನಿಂಬಾಳ್ಕರ್‌ ಅವರು ತಮಿಳುನಾಡಿನಲ್ಲಿ ಮತದಾನ ಮಾಡಿದ್ದಾರೆ. ರಾಹುಲ್‌ಗಾಂಧಿ ಅವರೊಂದಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ತೊಡಗಿರುವ ಸಂಸದ ಡಿ.ಕೆ.ಸುರೇಶ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಮಾಜಿ ಸಚಿವ ಎಚ್‌.ಆಂಜನೇಯ ಸೇರಿದಂತೆ ಕೆಲವರು ಬಳ್ಳಾರಿಯ ಸಂಗಲಕಲ್ಲು ಶಿಬಿರದಲ್ಲಿ ವ್ಯವಸ್ಥೆ ಮಾಡಿರುವ ವಿಶೇಷ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮತದಾನ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್‌ ನಡುವೆ ನೇರ ಹಣಾಹಣಿ ಉಂಟಾಗಿದೆ. ಸೋಮವಾರ ಬೆಳಗ್ಗೆ ಮತದಾನ ಮಾಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ವಾಗತಿಸಿ ಕೈ ಹಿಡಿದು ಮತಗಟ್ಟೆವರೆಗೆ ಕರೆದೊಯ್ದರು.

ಬಳಿಕ ಖರ್ಗೆ ಅವರು ತಮ್ಮ ಹೆಸರು ಹುಡುಕಿ 483 ಕ್ರಮ ಸಂಖ್ಯೆ ಮುಂದೆ ಸಹಿ ಹಾಕಿದರು. ನಂತರ ಮತಗಟ್ಟೆಸಂಖ್ಯೆ 3ರಲ್ಲಿನ ಮತಪೆಟ್ಟಿಗೆಯಲ್ಲಿ ಮತ ಪತ್ರ ಹಾಕುವ ಮೂಲಕ ಮತದಾನದ ಹಕ್ಕು ಚಲಾಯಿಸಿದರು. ಈ ವೇಳೆ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಸೇರಿದಂತೆ ಹಲವರು ಸಾಥ್‌ ನೀಡಿದರು. ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯ ಸಚೇತಕರು ಸೇರಿದಂತೆ ಹಿರಿಯ ನಾಯಕರು ಮತ ಚಲಾಯಿಸಿದರು.

ಎಐಸಿಸಿ ಅಧ್ಯಕ್ಷನಾದರೆ ಕಾಂಗ್ರೆಸ್‌ಗೆ ಶಕ್ತಿ ತುಂಬುವೆ: ಮಲ್ಲಿಕಾರ್ಜುನ ಖರ್ಗೆ

ಶಾಮನೂರು ಶಿವಶಂಕರಪ್ಪ ಹಿರಿಯ ಮತದಾರ: ಸೋಮವಾರ ನಡೆದ ಚುನಾವಣೆಯಲ್ಲಿ 91 ವರ್ಷದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಖುದ್ದು ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು. ಈ ಮೂಲಕ ಮತ ಚಲಾಯಿಸಿದ ಹಿರಿಯ ವ್ಯಕ್ತಿ ಎನಿಸಿಕೊಂಡರೆ, ಮಾಜಿ ಶಾಸಕ ದಿ. ಮಂಚನಹಳ್ಳಿ ಮಹದೇವ್‌ ಪುತ್ರಿ ಐಶ್ವರ್ಯ ಮಹದೇವ್‌ (29) ಮತ ಚಲಾಯಿಸಿದ ಕಿರಿಯ ಮತದಾರರಾದರು.

click me!