ಸಿದ್ದು ‘ಲಿಂಗಾಯತ ಸಿಎಂ ಭ್ರಷ್ಟಾಚಾರಿ’ ಹೇಳಿಕೆಯಿಂದ ಹೊಡೆತ, ಈಗ ‘ಮೋದಿ ವಿಷಸರ್ಪ’ ಹೇಳಿಕೆಯಿಂದ ಇನ್ನಷ್ಟು ಡ್ಯಾಮೇಜ್?, ಕಾಂಗ್ರೆಸ್ಸಿನ ನಾಯಕರ ಹೇಳಿಕೆಗೆ ಬಿಜೆಪಿ ಅಸ್ತ್ರ.
ಬೆಂಗಳೂರು(ಏ.28): ಸುಲಲಿತವಾಗಿ ಸಾಗುತ್ತಿದ್ದ ಪ್ರಚಾರ ಕಾರ್ಯಕ್ಕೆ ಪಕ್ಷದ ಮೇರು ನಾಯಕರು ಆಯಾಚಿತವಾಗಿ ನೀಡುವ ಕೆಲ ಹೇಳಿಕೆಗಳೇ ಕಂಟಕವಾಗುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ತಳಮಳ ಉಂಟುಮಾಡಿದೆ. ಲಿಂಗಾಯತ ಸಿಎಂಗಳು ಭ್ರಷ್ಟಾಚಾರಿಗಳು ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯ ಪರಿಣಾಮ ನೆನಪಿನಿಂದ ಮರೆಯಾಗುವ ಮುನ್ನವೇ ಪಕ್ಷದ ಮತ್ತೊಬ್ಬ ಮೇರು ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡುವ ಭರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಷದ ಹಾವು ಎಂದು ಹೇಳಿರುವುದು ವಿವಾದ ಹುಟ್ಟು ಹಾಕಿದೆ.
ಸಿದ್ದರಾಮಯ್ಯ ಅವರ ಲಿಂಗಾಯತ ಸಿಎಂಗಳು ಭ್ರಷ್ಟಾಚಾರಿಗಳು ಎಂಬ ಹೇಳಿಕೆಯಿಂದ ಲಿಂಗಾಯತರು ಭ್ರಷ್ಟಾಚಾರಿಗಳು ಎಂದು ಸಿದ್ದರಾಮಯ್ಯ ದೂಷಿಸಿದರು ಎಂಬಂತೆ ಸಂದೇಶ ರವಾನೆಯಾಗುವಂತೆ ಮಾಡಲು ಬಿಜೆಪಿ ತಂತ್ರಗಾರರು ಶ್ರಮಿಸಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ವಿಷ ಸರ್ಪ ಎನ್ನುವ ಮೂಲಕ ವೈಯಕ್ತಿಕ ಮಟ್ಟದ ಹೇಳಿಕೆ ನೀಡಿರುವುದು ಹೊಸ ಅಸ್ತ್ರವನ್ನು ಬಿಜೆಪಿಗೆ ನೀಡಿದಂತಾಗಿದೆ.
ಗ್ಯಾರಂಟಿ ಈಡೇರಿಸದಿದ್ದರೆ ಓಟು ಕೇಳಲು ಬರಲ್ಲ: ಡಿ.ಕೆ.ಶಿವಕುಮಾರ್ ಶಪಥ
ಸಿದ್ದರಾಮಯ್ಯ ಅವರಿಗೆ ತಾವು ನೀಡಿದ್ದ ಹೇಳಿಕೆ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಅವರು, ತಾವು ಲಿಂಗಾಯತ ಸಿಎಂಗಳು ಭ್ರಷ್ಟಾಚಾರಿಗಳು ಎಂದು ಹೇಳಿಕೆ ನೀಡಿಲ್ಲ. ಅದು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಎಂದು ಸ್ಪಷ್ಟನೆ ನೀಡಬೇಕಾಯಿತು. ಆದರೂ, ಈ ಹೇಳಿಕೆಯನ್ನು ಬಳಸಿಕೊಂಡ ಬಿಜೆಪಿ ರಾಜಕೀಯ ತಂತ್ರಗಾರರು ಕಾಂಗ್ರೆಸ್ ಪಕ್ಷ ಲಿಂಗಾಯತರ ವಿರುದ್ಧ ಧೋರಣೆ ಹೊಂದಿದೆ ಎಂದು ಬಿಂಬಿಸಲು ತೀವ್ರ ಯತ್ನ ನಡೆಸಿದರು.
ಹೀಗೆ ಸಿದ್ದರಾಮಯ್ಯ ಹೇಳಿಕೆಯಿಂದ ಕಾಂಗ್ರೆಸ್ ಇನ್ನೂ ಹೊರಬರಲಾಗದ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ವಿಷ ಸರ್ಪ ಎಂದಿದ್ದು ಬಿಜೆಪಿ ತಂತ್ರಗಾರರಿಗೆ ಬಯಸದೇ ಬಂದ ಭಾಗ್ಯವಾಗಿ ಪರಿಣಮಿಸಿದೆ. ಮೋದಿ ವಿರುದ್ಧ ವೈಯಕ್ತಿಕ ಮಟ್ಟದ ಈ ಹೇಳಿಕೆಯನ್ನು ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯಲು ಬಿಜೆಪಿ ಪಡೆ ಸಜ್ಜಾಗಿದೆ.
ಪ್ರಧಾನಿ ಮೋದಿಯ ಆದೇಶ ಪಾಲಿಸುವ ಸಿಎಂ ಬೇಕು: ಪ್ರಹ್ಲಾದ್ ಜೋಶಿ
ವಾಸ್ತವವಾಗಿ ಕಾಂಗ್ರೆಸ್‌ನ ಚಿಂತನಾ ಮಂಡಳಿಯು ಯಾವುದೇ ಕಾರಣಕ್ಕೂ ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡಬಾರದು, ಯಾವುದೇ ಸಮುದಾಯಕ್ಕೆ ಬೇಸರವಾಗುವಂತೆ ನಡೆದುಕೊಳ್ಳಬಾರದು ಹಾಗೂ ರಾಷ್ಟ್ರೀಯ ವಿಷಯಗಳನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದರೆ ಅದಕ್ಕೆ ಪ್ರತಿಕ್ರಿಯಿಸಬಾರದು. ರಾಜ್ಯದ ಬಿಜೆಪಿ ಸರ್ಕಾರದ ಆಡಳಿತ ವೈಖರಿ, ಅದರ ಲೋಪಗಳು ಹಾಗೂ ಭ್ರಷ್ಟಾಚಾರ ಈ ವಿಷಯವನ್ನು ಮಾತ್ರ ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸಬೇಕು ಎಂದು ತನ್ನ ನಾಯಕರಿಗೆ ಸ್ಪಷ್ಟಸೂಚನೆ ನೀಡಿದೆ. ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ.
ಆದರೆ, ಮೇರು ನಾಯಕರೆನಿಸಿದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ಮಾತಿನ ಓಘದಲ್ಲಿ ತಮ್ಮ ಕಾರ್ಯಸೂಚಿಗೆ ವಿರುದ್ಧವಾದಂತಹ ಹೇಳಿಕೆಗಳನ್ನು ನೀಡಿ ಅನಂತರ ಅದನ್ನು ಅರಗಿಸಿಕೊಳ್ಳಲಾಗದೆ ಸ್ಪಷ್ಟನೆ ನೀಡುತ್ತಿರುವುದು ಕಾಂಗ್ರೆಸ್ಸಿಗರಿಗೆ ನುಂಗಲಾಗದ ತುತ್ತಾಗಿದೆ. ಇದೇ ವೇಳೆ, ರಾಜ್ಯ ನಾಯಕರ ವರ್ಚಸ್ಸು ಮಾತ್ರ ಸಾಕಾಗುವುದಿಲ್ಲ. ರಾಷ್ಟ್ರೀಯ ನಾಯಕರಾದ ಮೋದಿ, ಅಮಿತ್ ಶಾ ಅವರ ನೇರ ಪ್ರವೇಶದ ಅಗತ್ಯವಿದೆ ಎಂದು ಕಾದು ಕುಳಿತಿರುವ ಬಿಜೆಪಿ ವಲಯಕ್ಕೆ ಇಂತಹ ಹೇಳಿಕೆಗಳಿಂದ ಹೊಸ ಅಸ್ತ್ರ ದೊರಕಿದಂತಾಗಿದ್ದು, ಅದನ್ನು ಬಳಸಿಕೊಂಡು ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ತನ್ನೆಲ್ಲ ಸಾಮರ್ಥ್ಯ ಬಳಸಲು ಮುಂದಾಗಿದೆ.