
ಶಿವಮೊಗ್ಗ (ಮಾ.07): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಆ ಪಕ್ಷದ ಶಾಸಕರೇ ಬೇಸತ್ತು ಬಿಜೆಪಿ ಕಡೆ ಬರುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬೇರೆ ಅಲ್ಲ, ಹೆತ್ತ ತಾಯಿ ಬೇರೆ ಅಲ್ಲ. ಆಶೀರ್ವಾದ ಮಾಡಿದ ಪಕ್ಷಕ್ಕೆ ದ್ರೋಹವೆಸಗುವ ಕೆಲಸವನ್ನು ಯಾರೂ ಮಾಡಬಾರದು. ಲೋಕಸಭೆ ಚುನಾವಣೆಯ ನಂತರ ಸಾಕಷ್ಟು ಬದಲಾವಣೆ ಆಗಲಿದೆ. ನನ್ನನ್ನು ಉಪ ಮುಖ್ಯಮಂತ್ರಿ ಮಾಡುವ ಕಾರ್ಯ ಚುನಾವಣೆ ನಂತರ ಆರಂಭ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ರೀತಿ ಕಾಂಗ್ರೆಸ್‌ನಲ್ಲೇ ಭಿನ್ನ ಧ್ವನಿ ಸಾಕಷ್ಟಿವೆ. ಈ ಸರ್ಕಾರ ಬಹಳ ದಿನ ಇರುತ್ತದೆ ಎಂದೆನಿಸಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉಳಿದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಕಟುವಾಗಿ ಹೇಳಿದರು. ಲೋಕಸಭಾ ಟಿಕೆಟ್‌ಗೆ ಕಾಂಗ್ರೆಸ್ ಹಣ ಪಡೆಯುತ್ತಿರುವುದಾಗಿ ತಡವಾಗಿ ಆರೋಪ ಮಾಡುತ್ತಿದ್ದಾರೆ. ಈ ಸತ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್ ನಲ್ಲಿ ಫೇಮೆಂಟ್ ಇಲ್ಲದೇ ಯಾವುದೂ ನಡೆಯಲ್ಲ ಎಂಬುದು ಜಗಜ್ಜಾಹೀರಾಗಿದೆ ಎಂದು ಕುಟುಕಿದರು. ಪ್ರಧಾನಿ ಮೋದಿಯವರು ಭಾರತ ಅಕ್ಕಿಯನ್ನು ಕಡಿಮೆ ಬೆಲೆಗೆ ಕೊಟ್ಟಿದ್ದಾರೆ. 29 ರು.ಗೆ ಒಂದು ಕೇಜಿ ಅಕ್ಕಿ ಕೊಡುತ್ತಿದ್ದಾರೆ.
Loksabha Elections 2024: ಈ ಬಾರಿಯು ನನ್ನ ಗೆಲುವಿಗೆ ಸಹಕಾರ ನೀಡಿ: ಸಂಸದ ಪ್ರತಾಪ್ ಸಿಂಹ
ಅಕ್ಕಿಯನ್ನು ಎಷ್ಟು ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ರಾಜ್ಯ ಸರ್ಕಾರ ಅಕ್ಕಿ ಕೊಡುತ್ತೇವೆ ಎಂದು ಈಗ ದುಡ್ಡು ಕೊಡುತ್ತಿದೆ. ದುಡ್ಡು ಕೊಡುವುದರಿಂದ ಜನರ ಹೊಟ್ಟೆ ತುಂಬುವುದಿಲ್ಲ. ಜನರಿಗೆ ಹೊಟ್ಟೆ ತುಂಬಲು ಅಕ್ಕಿ ಬೇಕು, ಅದನ್ನು ಮೋದಿ ಕೊಡುತ್ತಾರೆ ಎಂದರು. ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ಎಸ್ಕೇಪ್ ಆಗಿದ್ದಾನೆ. ಆದರೆ, ನಮ್ಮ ಪೊಲೀಸ್ ಇಲಾಖೆ ಬಗ್ಗೆ ನಮಗೆ ವಿಶ್ವಾಸವಿದೆ. ಪೊಲೀಸರ ಕಣ್ತಪ್ಪಿಸಿಕೊಂಡು ಹೋಗುವ ಕೆಲಸ ಏನು ಮಾಡಿದ್ದಾರೆ?, ಮತ್ತೆ ಹಿಡಿದು ಒಳಗೆ ಹಾಕುತ್ತಾರೆ. ನೀನು ಅತ್ತಹಾಗೆ ಮಾಡು ನಾನು ಚಿವುಟುವ ಹಾಗೆ ಮಾಡುತ್ತೇನೆ ಎಂಬ ರೀತಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೋ, ನಿಜವಾಗಿಯೂ ತಪ್ಪಿಸಿಕೊಂಡು ಹೋಗಿದ್ದಾನೋ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಶಿರಾಳಕೊಪ್ಪ ಪಟ್ಟಣಕ್ಕೆ ಶರಾವತಿ ನದಿಯಿಂದ ನೀರು: ಶಿರಾಳಕೊಪ್ಪ ಪಟ್ಟಣಕ್ಕೆ ₹೩೨ ಕೋಟಿ ವೆಚ್ಚದಲ್ಲಿ ಶರಾವತಿ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ. ಇಲ್ಲಿಯ ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನದ ೧೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೂತನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯತೆ ವಿಷಯ ಬಂದಾಗ ವಿಶ್ವಕರ್ಮ ಸಮಾಜ ಎದ್ದು ನಿಲ್ಲುತ್ತದೆ. ನಮ್ಮ ಆಧ್ಯಾತ್ಮಿಕ ಶಕ್ತಿ ತೋರಿಸುವ ಕಾರ್ಯವಾಗಿದೆ. ಸಮಾಜದಿಂದ ಪಡೆದಿದ್ದನ್ನು ಮರಳಿ ಸಮಾಜಕ್ಕೆ ಕೊಡಲಾಗಿದೆ. ಈ ಸಮುದಾಯ ಭವನ ಅಚ್ಚುಕಟ್ಟಾಗಿ ಕಟ್ಟಲಾಗಿದೆ. ಇದು ಸಮಾಜದ ಎಲ್ಲ ವರ್ಗಕ್ಕೆ ದೊರಕುವಂತಾಗಲಿ ಎಂದು ತಿಳಿಸಿದರು.
ಮಂಡ್ಯದಲ್ಲಿ ಸಾಫ್ಟ್‌ವೇರ್ ಪಾರ್ಕ್ ಮಾಡೇ ಮಾಡ್ತೇನೆ: ಶಾಸಕ ಪಿ.ರವಿಕುಮಾರ್
ಸಾನ್ನಿಧ್ಯ ವಹಿಸಿದ್ದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ ಜಗನ್ಮಾತೆ ಮನುಷ್ಯರಿಗೆ ಮಾತ್ರವೇ ಅನುಗ್ರಹ ನೀಡುವವಳಲ್ಲ. ಆದಿಶಕ್ತಿ ಬ್ರಹ್ಮ, ವಿಷ್ಣು, ಮಹೇಶ್ವರಿಗೂ ಶಕ್ತಿ ಕರುಣಿಸಿದವಳು. ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಕಾಳಿಕಾದೇವಿಗೆ ಇದೆ ಎಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರು ವಿಶ್ವಕರ್ಮ ಸಮುದಾಯಕ್ಕೆ ಅಪಾರ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು. ಸ್ಥಳೀಯ ವೀರಕ್ತ ಮಠದ ಸ್ವಾಮೀಜಿ ಸಿದ್ದೇಶ್ವರ ದೇವರು ಮಾತನಾಡಿ, ಹಾಳುಬಿದ್ದ ಜಾಗದಲ್ಲಿ ದೇವಸ್ಥಾನ ಹೇಗೆ ಕಟ್ಟುತ್ತಾರೆ ಎನ್ನುತ್ತಿದ್ದರು. ಅಂಥ ಜಾಗದಲ್ಲಿ ಯಾವ ದೊಡ್ಡ ಸಮಾಜವೂ ಮಾಡದಂತಹ ಕಾರ್ಯವನ್ನು ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರ ಸಹಕಾರದಿಂದ ಮಾಡಲಾಗಿದೆ. ಕೇಳದಿದ್ದರೂ ನಮ್ಮ ಮಠಕ್ಕೆ ₹೭೫ ಲಕ್ಷ ಹಣ ನೀಡಿ ಮಠದಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಅವರ ಸಮಾಜಮುಖಿ ಕಾರ್ಯಕ್ಕೆ ಎಲ್ಲ ಗುರುಗಳ ಆಶೀರ್ವಾದವಿರುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.