ಶೀಲಾ ದೀಕ್ಷಿತ್‌ ನಂತರ ದೆಹಲಿಗೆ ಮತ್ತೆ ಮಹಿಳಾ ಸಿಎಂ: ಅತಿಶಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಕೇಜ್ರಿವಾಲ್

By Anusha KbFirst Published Sep 17, 2024, 12:26 PM IST
Highlights

ಚುನಾವಣಾ ಹೊಸ್ತಿಲಲ್ಲಿರುವ ದೆಹಲಿಯಲ್ಲಿ ಮತ್ತೆ ಮಹಿಳೆಯೊಬ್ಬರು ಸಿಎಂ ಗದ್ದುಗೆ ಏರಿದ್ದಾರೆ. ದೆಹಲಿ ಸಿಎಂ ಆಗಿದ್ದ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಸಚಿವೆಯಾಗಿದ್ದ ಅತಿಶಿ ಅವರಿಗೆ ಸಿಎಂ ಸ್ಥಾನ ಒಲಿದು ಬಂದಿದೆ.

ನವದೆಹಲಿ: ಚುನಾವಣಾ ಹೊಸ್ತಿಲಲ್ಲಿರುವ ದೆಹಲಿಯಲ್ಲಿ ಮತ್ತೆ ಮಹಿಳೆಯೊಬ್ಬರು ಸಿಎಂ ಗದ್ದುಗೆ ಏರಿದ್ದಾರೆ. ದೆಹಲಿ ಸಿಎಂ ಆಗಿದ್ದ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಸಚಿವೆಯಾಗಿದ್ದ ಅತಿಶಿ ಅವರಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ಇಂದು ನಡೆದ ಎಎಪಿ ಶಾಸಕರ ಸಭೆಯಲ್ಲಿ ಚರ್ಚೆ ನಡೆಸಿ ಸಚಿವೆಯಾಗಿದ್ದ ಅತಿಶಿ ಅವರನ್ನು ಸಿಎಂ ಆಗಿ ನೇಮಕ ಮಾಡಲಾಗಿದೆ. ದೆಹಲಿ ಸಿಎಂ ಆಗಿದ್ದ ಅರವಿಂದ್‌ ಕೇಜ್ರಿವಾಲ್ ಅವರು  ಎರಡು ದಿನಗಳ ಹಿಂದಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಅವರು ಇಂದು ಸಂಜೆ 4 ಗಂಟೆಗೆ ಅವರು ರಾಜೀನಾಮೆ ನೀಡಿದ್ದು, ಹೀಗಾಗಿ ಅತಿಶಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ನಂತರ ದೆಹಲಿ ಸಿಎಂ ಗದ್ದುಗೆ ಹಿಡಿದ ಎರಡನೇ ಮಹಿಳೆ ಹಾಗೂ ರಾಜ್ಯದ ಸಿಎಂ ಆದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅತಿಶಿ ಪಾತ್ರರಾಗಿದ್ದಾರೆ.

ಶೀಲಾ ದೀಕ್ಷಿತ್‌ಗೂ ಮೊದಲು ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು ದೆಹಲಿ ಸಿಎಂ ಆಗಿದ್ದರು. 1988ರಲ್ಲಿ ದೆಹಲಿ ಸಿಎಂ ಆಗಿದ್ದ ಅವರು 52 ದಿನಗಳ ಕಾಲ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಇವರ ನಂತರ ದೆಹಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ನಾಯಕಿ ದಿವಂಗತ ಶೀಲಾ ದೀಕ್ಷಿತ್ ಅವರು ಸುಮಾರು 15 ವರ್ಷಗಳ ಕಾಲ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸುವ ಮೂಲಕ ಅತೀ ಹೆಚ್ಚು ಅವಧಿಯವರೆಗೆ ದೆಹಲಿ ಸಿಎಂ ಆಗಿದ್ದ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಅತಿಶಿ ಅವರು ದೆಹಲಿ ಸರ್ಕಾರದಲ್ಲಿ ಶಿಕ್ಷಣ ಹಾಗೂ ಲೋಕೋಪಯೋಗಿ ಇಲಾಖೆಯಂತಹ ಮಹತ್ವ ಖಾತೆಗಳನ್ನು ಹೊಂದಿದ್ದಾರೆ. ಆಕ್ಸ್‌ಫರ್ಡ್ ಯುನಿವರ್ಸಿಟಿಯ ಹಳೆ ವಿದ್ಯಾರ್ಥಿಯಾಗಿರುವ ಅತಿಶಿ ಮರ್ಲೆನಾ, ರೋಡಿಸ್ ವಿಶ್ವ ವಿದ್ಯಾನಿಲಯದಿಂದಲೂ ಪದವಿ ಪಡೆದಿದ್ದಾರೆ. ದೆಹಲಿಯ ಕಲ್ಕಾಜಿ ಕ್ಷೇತ್ರದ ಶಾಸಕರಾಗಿದ್ದ ಅತಿಶಿ, ಅಬಕಾರಿ ಮದ್ಯ ಹಗರಣದಲ್ಲಿ ಸಚಿವ ಮನೀಷ್ ಸಿಸೋದಿಯಾ ಅವರ ಬಂಧನದ ನಂತರ ಸಚಿವೆಯಾಗಿ ಆಯ್ಕೆಯಾಗಿದ್ದರು. ಕೇಜ್ರಿವಾಲ್ ಹಾಗೂ ಮನೀಷ್ ಸಿಸೋದಿಯಾ ಅವರು ಜೈಲಿನಲ್ಲಿದ್ದಾಗ ಪಕ್ಷದ ಕಾರ್ಯಕ್ರಮಗಳಲ್ಲಿ, ಮಾಧ್ಯಮಗಳಲ್ಲಿ ಪಕ್ಷ ಹಾಗೂ ನಾಯಕರನ್ನು ಸಮರ್ಥಿಸಿಕೊಳ್ಳುವ ಮೂಲಕ ಎಎಪಿಯ ನಿಷ್ಠಾವಂತ ನಾಯಕಿ ಎನಿಸಿದ್ದರು.

Latest Videos

43 ವರ್ಷದ ಅತಿಶಿ ಅವರನ್ನು ಆಗಸ್ಟ್‌ 15 ರಂದು ನಡೆದ ಸ್ವಾತಂತ್ರ ದಿನಾಚರಣೆಯಂದು ದೆಹಲಿ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ  ಧ್ವಜಾರೋಹಣ ನೆರವೇರಿಸಲು ಅತಿಶಿ ಅವರನ್ನು ತಮ್ಮ ಅನುಪಸ್ಥಿತಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಆಯ್ಕೆ ಮಾಡಿದ್ದರು. 

ಅಬಕಾರಿ ಮಧ್ಯ ಹಗರಣದಲ್ಲಿ ಜೈಲು ಪಾಲಾಗಿ ಆರು ತಿಂಗಳ ಕಾಲ ಜೈಲಿನಲ್ಲಿ ಕಳೆದ ಅರವಿಂದ್ ಕೇಜ್ರಿವಾಲ್‌ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಆಕ್ಟೋಬರ್ 13 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಇದಾಗಿ ಎರಡು ದಿನದ ನಂತರ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ ಅವರು ಎರಡು ದಿನದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು, ಜನರೇ ತಾನು ಪ್ರಾಮಾಣಿಕ ಎಂದು ತೀರ್ಪು ನೀಡುವವರೆಗೆ ಸಿಎಂ ಕುರ್ಚಿ ಏರುವುದಿಲ್ಲ ಎಂದು ಹೇಳಿದ್ದರು. ಅದರಂತೆ ಇಂದು ಅವರು ರಾಜೀನಾಮೆ ನೀಡಲಿದ್ದು, ನೂತನ ಸಿಎಂ ಆಗಿ ಅತಿಶಿ ಅವರನ್ನು ಆಯ್ಕೆ ಮಾಡಿದ್ದಾರೆ.

ದೆಹಲಿ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ರಾಜೀನಾಮೆಯ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಚರ್ಚೆಯಾಗುತ್ತಿದೆ.

click me!