ಮುಂದಿನ ವಿಧಾನಸಭೆ ಗೆಲ್ಲಲು ಬಿಜೆಪಿ ಹೊಸ ತಂತ್ರ, ವಿಪಕ್ಷಗಳು ಥಂಡಾ!

By Suvarna NewsFirst Published Aug 6, 2021, 4:43 PM IST
Highlights

* ಉತ್ತರ ಪ್ರದೇಶ ಚುನಾವಣೆಗೆ ಅಖಾಡ ಸಿದ್ಧಮಾಡಿಕೊಂಡ ಬಿಜೆಪಿ
* ಉಚಿತ  ರೇಶನ್ ಅಸ್ತ್ರ ಬಳಸಿ ಜನರ ಸೆಳೆಯುವ ಯತ್ನ
* ಜನರೊಂದಿಗೆ ಸರ್ಕಾರ ನಿಂತಿದೆ ಎನ್ನುವ ಭಾವನೆ
* ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ

ಲಕ್ನೋ(ಆ. 06)  ಉತ್ತರ ಪ್ರದೇಶದದಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು ಬಿಜೆಪಿ ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ. ರಾಮ ಮಂದಿರದ ವಿಚಾರದಲ್ಲಿ ಚುನಾವಣೆ ಎದುರಿಸಿ ಜಯ ಗಳಿಸಿದ್ದ ಬಿಜೆಪಿ ಈ ಸಾರಿ ಉಚಿತ ರೇಶನ್  ಅಸ್ತ್ರ ಬಳಸಲು ಮುಂದಾಗಿದೆ. 

ಪ್ರಧಾನಿ ನರೇಂದ್ರ  ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಒಟ್ಟಾಗಿಯೇ ಮುಂದಿನ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.   ಬಡವರಿಗೆ ಉಚಿತ ಲಸಿಕೆ ಮತ್ತು ರೇಶನ್ ನೀಡುವ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.

ಸೇವಾ ಹೀ ಸಂಘಟನ್ ಧ್ಯೇಯ ವಾಕ್ಯದ ಆಧಾರದಲ್ಲಿ  ಕಾರ್ಯಕರ್ತರ ಮೂಲಕ ತಳಮಟ್ಟದಿಂದಲೇ  ಮಾಹಿತಿ ಕಲೆಹಾಕುವ ಕೆಲಸ ಮಾಡಲಾಗುತ್ತಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಜತೆಗೆ ರಾಮಮಂದಿರ ನಿರ್ಮಾಣ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಹಲವು ಚುನಾವಣೆಗಳನ್ನು ಎದುರಿಸಿದೆ.  ಈಗ ಕೊರೋನಾ ಲಸಿಕೆ ಮತ್ತು ಉಚಿತ ರೇಶನ್  ಅಸ್ತ್ರದ ಸಿದ್ಧತೆ ಮಾಡಿಕೊಂಡಿದೆ.

ಅಯೋಧ್ಯೆಯಿಂದಲೇ ಯೋಗಿ ಸ್ಪರ್ಧೆ

ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ ಮೂಲಕವೇ ಉಚಿತ ರೇಶನ್ ವಿತರಣೆ ಮಾಡುತ್ತ ಜನರನ್ನು ಆಕರ್ಷಿಸುವುದು ಗುರಿ. 14.81 ಕೋಟಿ ಫಲಾನುಭವಿಗಳಿಗೆ ಉಚಿತ ರೇಶನ್ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡು ಬಂದಿದೆ.  ರಾಜ್ಯದಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು ಎಲ್ಲರಿಗೂ ಆಹಾರ ತಲುಪಿಸುತ್ತೇವೆ ಎಂದು ತಿಳಿಸಿದೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರೊಂದಿಗೆ ಸರ್ಕಾರ ನಿಂತಿದೆ ಎನ್ನುವ ಭಾವನೆ ಬಹಳ ಮುಖ್ಯವಾಗುತ್ತದೆ. ಯಾವುದೇ ಗೊಂದಲಗಳು ಆಗದಂತೆ ಉಚಿತ ರೇಶನ್ ನೀಡಿಕೆ ಆಗಬೇಕು ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.

ಈ ಅಸ್ತ್ರಗಳ ಜತೆಗೆ ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಾರ್ಟಿಯನ್ನು ಖಂಡಿಸುತ್ತಲೇ ಬಂದಿರುವ ಬಿಜೆಪಿ ಮುಂದಿನ ಚುನಾವಣೆಗೆ ಈಗಲೇ ಅಖಾಡ ಸಿದ್ಧಮಾಡಿಕೊಂಡಿದೆ.

click me!