2 ದಶಕದ ಬಳಿಕ Congress ಚುಕ್ಕಾಣಿ ಗಾಂಧಿಯೇತರಿಗೆ..? ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಗೆಹ್ಲೋಟ್ ಷರತ್ತು..!

By Kannadaprabha NewsFirst Published Sep 21, 2022, 10:43 AM IST
Highlights

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ 2 ದಶಕಗಳ ಹಿಂದೆ ಕಾಂಗ್ರೆಸ್ಸೇತರ ಅಭ್ಯರ್ಥಿ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಸೋಲನುಭವಿಸಿದ್ದರು. ಆದರೆ, ಈ ಬಾರಿ ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. 

ನವದೆಹಲಿ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಸೋನಿಯಾ ಗಾಂಧಿ ವಿರುದ್ಧ 20 ವರ್ಷಗಳ ಹಿಂದೆ ಜಿತೇಂದ್ರ ಪ್ರಸಾದ್‌ ಸ್ಪರ್ಧಿಸಿ ಸೋತ ನಂತರ ಈ ಬಾರಿ ಮತ್ತೆ ಗಾಂಧಿ ಕುಟುಂಬದ ಹೊರಗಿನವರು ಸ್ಪರ್ಧಿಸುವ ಸಾಧ್ಯತೆಗಳು ಗೋಚರಿಸಿವೆ. ಅಲ್ಲದೆ, 24 ವರ್ಷಗಳಲ್ಲಿ ಇದೇ ಮೊದಲ ಬಾರಿ ಪಕ್ಷಕ್ಕೆ ಗಾಂಧಿಯೇತರ ಅಧ್ಯಕ್ಷರು (Non Gandhi Chief) ಲಭಿಸುವ ಸಾಧ್ಯತೆಗಳಿವೆ. 2000ನೇ ಇಸ್ವಿಯಲ್ಲಿ ನಡೆದ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ (President Election) ಜಿತೇಂದ್ರ ಪ್ರಸಾದ್‌ ಸ್ಪರ್ಧಿಸಿ ಸೋನಿಯಾ ಗಾಂಧಿಯಿಂದ ಪರಾಭವಗೊಂಡಿದ್ದರು. ಅದಕ್ಕೂ ಮೊದಲು 1997ರಲ್ಲಿ ಸೀತಾರಾಂ ಕೇಸರಿ ಅವರು ಶರದ್‌ ಪವಾರ್‌ ಮತ್ತು ರಾಜೇಶ್‌ ಪೈಲಟ್‌ರನ್ನು ಸೋಲಿಸಿದ್ದರು. ನಂತರ 1998ರಲ್ಲಿ ಸೋನಿಯಾ ಅಧ್ಯಕ್ಷರಾಗಿ, ಈವರೆಗೂ ಅವರೇ ಆ ಹುದ್ದೆಯಲ್ಲಿದ್ದಾರೆ. ಮಧ್ಯೆ 2017ರಿಂದ 2019ರವರೆಗೆ ರಾಹುಲ್‌ ಗಾಂಧಿ ಅಧ್ಯಕ್ಷರಾಗಿದ್ದರು.

ರಾಹುಲ್‌ ಸ್ಪರ್ಧೆ ಸಾಧ್ಯತೆ ಕಡಿಮೆ:
ಈ ಬಾರಿ ಸಂಸದ ಶಶಿ ತರೂರ್‌ ಸ್ಪರ್ಧಿಸುವ ಸಾಧ್ಯತೆಗಳಿವೆ. ಜೊತೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸ್ಪರ್ಧಿಸಬೇಕೆಂದು ಪಕ್ಷದಲ್ಲಿ ಒತ್ತಡಗಳಿವೆ. ಆದರೆ ಗೆಹ್ಲೋಟ್‌ಗೆ ಮನಸ್ಸಿಲ್ಲ. ರಾಹುಲ್‌ ಗಾಂಧಿಯೇ ಸ್ಪರ್ಧಿಸುವಂತೆ ಮನವೊಲಿಸುತ್ತೇನೆ ಎಂದು ಗೆಹ್ಲೋಟ್‌ ಹೇಳಿದ್ದರೂ, ಸ್ಪರ್ಧಿಸದಿರುವ ನಿಲುವಿಗೇ ರಾಹುಲ್‌ ಗಟ್ಟಿಯಾಗಿ ಅಂಟಿಕೊಳ್ಳುವ ಸಾಧ್ಯತೆಯಿದೆ. ಸೋನಿಯಾ ಗಾಂಧಿ ಅವರಂತೂ ಸ್ಪರ್ಧಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಗಾಂಧಿ ಕುಟುಂಬದ ಹೊರಗೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನು ಓದಿ: Congress ಅಧ್ಯಕ್ಷ ಸ್ಥಾನಕ್ಕೆ ಮೂವರ ಸ್ಪರ್ಧೆ..? ಶಶಿ ತರೂರ್‌ ಸ್ಪರ್ಧೆಗೆ ಸೋನಿಯಾ ಸಮ್ಮತಿ..!

ಸ್ಪರ್ಧಿಸಲು ಯಾರ ಅನುಮತಿಯೂ ಬೇಕಿಲ್ಲ:
ಈ ಮಧ್ಯೆ, ಮಂಗಳವಾರ ಟ್ವೀಟ್‌ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಎಐಸಿಸಿ (AICC) ಅಧ್ಯಕ್ಷರ ಚುನಾವಣೆಗೆ (President Election) ಸ್ಪರ್ಧಿಸಲು ಯಾರಿಗೂ ಯಾರದೇ ಅನುಮತಿ ಬೇಕಿಲ್ಲ. ಪಕ್ಷದ ಎಲ್ಲ ಸದಸ್ಯರೂ ಸ್ಪರ್ಧಿಸಲು ಅರ್ಹರು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ತಮ್ಮನ್ನು ಸೋಮವಾರ ಭೇಟಿ ಮಾಡಿದ ಶಶಿ ತರೂರ್‌ ಅವರಿಗೆ ಸೋನಿಯಾ ಗಾಂಧಿ ತಾವು ಈ ಚುನಾವಣೆಯಲ್ಲಿ ತಟಸ್ಥರಾಗಿ ಇರುವುದಾಗಿಯೂ, ಪಕ್ಷದಿಂದ ಯಾರನ್ನೂ ‘ಅಧಿಕೃತ ಅಭ್ಯರ್ಥಿ’ಯಾಗಿ ನಿಲ್ಲಿಸುವುದಿಲ್ಲ ಎಂದೂ ಹೇಳಿದ್ದಾರೆ ಎನ್ನಲಾಗಿದೆ.

ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೆಪ್ಟೆಂಬರ್ 24ರಿಂದ ಆರಂಭವಾಗಲಿದೆ. ಸೆಪ್ಟೆಂಬರ್‌ 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅಕ್ಟೋಬರ್ 8 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ. ಅಗತ್ಯ ಬಿದ್ದರೆ ಅಕ್ಟೋಬರ್ 17ರಂದು ಚುನಾವಣೆ ನಡೆದು,ಅಕ್ಟೋಬರ್ 19ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್‌ ಷರತ್ತು..? 
ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಸ್ವತಃ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಂದ ಸೂಚಿಸಲ್ಪಟ್ಟಿರುವ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇದಕ್ಕಾಗಿ ಕೆಲವೊಂದು ಷರತ್ತು ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶಶಿ ತರೂರ್ ಪ್ಲಾನ್‌..!

ಒಂದು ವೇಳೆ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ, ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ಪ್ರಬಲ ಪ್ರತಿಸ್ಪರ್ಧಿ ಸಚಿನ್‌ ಪೈಲಟ್‌ಗೆ ಬಿಟ್ಟುಕೊಡಬೇಕಾಗುತ್ತದೆ ಎಂಬ ಕಳವಳ ಅವರಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್‌ ತಾವು ಕಾಂಗ್ರೆಸ್‌ ಅಧ್ಯಕ್ಷನಾದರೆ ತಮಗೆ ನಿಷ್ಠನಾಗಿರುವ ವ್ಯಕ್ತಿಯನ್ನೇ ಮುಖ್ಯಮಂತ್ರಿಯಾಗಿಸಬೇಕು. ಇದಲ್ಲದಿದ್ದರೆ ತಾವು ಮುಖ್ಯಮಂತ್ರಿಯಾಗಿ ಮುಂದುವರೆಯುವುದರ ಜೊತೆಗೆ ಪಕ್ಷದ ಕಾರ್ಯಾಧ್ಯಕ್ಷನ ಹೊಣೆ ನಿರ್ವಹಿಸಲು ಅವಕಾಶ ನೀಡಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಗೆಹ್ಲೋಟ್‌ ಸ್ಪರ್ಧೆ ಬಹುತೇಕ ಖಚಿತವಾಗಿರುವಾಗಲೇ, ಬುಧವಾರ ರಾತ್ರಿ ಅವರು ಶಾಸಕಾಂಗ ಪಕ್ಷದ ತುರ್ತು ಸಭೆ ಕರೆದಿದ್ದಾರೆ ಎನ್ನಲಾಗಿದೆ. ಇದು ಅವರು ಚುನಾವಣಾ ಕಣಕ್ಕೆ ಇಳಿಯುವುದರ ಸ್ಪಷ್ಟ ಸಂದೇಶ ಎನ್ನಲಾಗಿದೆ.

click me!