
ಬೀದರ್ (ಮೇ.03): ಬರೋಬ್ಬರಿ 13 ವರ್ಷಗಳ ನಂತರ ಬಿಜೆಪಿ ಬಸವಕಲ್ಯಾಣ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಬಸವಕಲ್ಯಾಣ ಕ್ಷೇತ್ರ ರಚನೆಯಾದ ಬಳಿಕ ಬಿಜೆಪಿಗೆ ಸಿಕ್ಕ 2ನೇ ಗೆಲುವು.
2008ರಲ್ಲಿ ಬಸವರಾಜ ಪಾಟೀಲ್ ಅಟ್ಟೂರ್ ಅವರು ಆಯ್ಕೆಯಾಗಿದ್ದರು. ಆ ನಂತರ ಬಿಜೆಪಿ ಇಲ್ಲಿ ಗೆದ್ದೇ ಇರಲಿಲ್ಲ. ಬಸವಕಲ್ಯಾಣ ಕ್ಷೇತ್ರ ರಚನೆಯಾದಂದಿನಿಂದ ಅಂದರೆ 1957ರಿಂದ 2018ರವರೆಗೆ ನಡೆದ ಚುನಾವಣೆಗಳಲ್ಲಿ ಜೆಡಿಎಸ್ ಅತೀ ಹೆಚ್ಚು ಬಾರಿ ಅಂದರೆ 5 ಬಾರಿ ಗೆಲುವು ಸಾಧಿಸಿತ್ತಲ್ಲದೆ, ಜನತಾ ಪಕ್ಷ 2 ಬಾರಿ ಮತ್ತು ಬಿಜೆಪಿ, ಸ್ವತಂತ್ರ ಹಾಗೂ ಇಂದಿರಾ ಕಾಂಗ್ರೆಸ್ ತಲಾ ಒಂದು ಬಾರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ನಾಲ್ಕು ಬಾರಿ ಜಯ ಸಾಧಿಸಿದೆ.
ಇದೀಗ ಶರಣು ಸಲಗರ ಅವರು 13 ವರ್ಷಗಳ ಬಳಿಕ ಈ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ, ಸಚಿವ ಪ್ರಭು ಚವ್ಹಾಣ ಜೊತೆ ಇದೀಗ ಬಸವಕಲ್ಯಾಣದಿಂದ ಶರಣು ಸಲಗರ ಆಯ್ಕೆಯಾಗಿರುವುದು ಪಕ್ಷಕ್ಕೆ ಜಿಲ್ಲೆಯಲ್ಲಿ ಮತ್ತಷ್ಟುಭದ್ರ ಬುನಾದಿ ಹಾಕಲು ಅವಕಾಶ ಸಿಕ್ಕಂತಾಗಿದೆ.
ಬಸವಕಲ್ಯಾಣ ಬೈಎಲೆಕ್ಷನ್: ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಪ್ರಚಂಡ ಗೆಲುವು ...
ನಡೆಯದ ಖೂಬಾ ಮ್ಯಾಜಿಕ್: ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದು ಬಂಡೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ ಅವರ ಮ್ಯಾಜಿಕ್ ಈ ಉಪಚುನಾವಣೆಯಲ್ಲಿ ನಡೆಯಲೇ ಇಲ್ಲ. ಕೇವಲ 9457 ಮತ ಪಡೆದಖೂಬಾ ಠೇವಣಿ ಕಳೆದುಕೊಂಡಿದ್ದಾರೆ.
1989ರಿಂದ ಪ್ರಥಮ ಬಾರಿಗೆ ಜೇಡಿಎಸ್ ಠೇವಣಿ ನಷ್ಟ
ಬಸವಕಲ್ಯಾಣದಲ್ಲಿ 1989ರಿಂದ ಇದೇ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿಯೊಬ್ಬರು ಠೇವಣಿ ಕಳೆದುಕೊಂಡಿದ್ದಾರೆ. ಐದು ಬಾರಿ ದಳದ ಶಾಸಕರನ್ನು ನೀಡಿದ ಕ್ಷೇತ್ರದಲ್ಲಿ ಈ ಬಾರಿ ಪಕ್ಷದಿಂದ ಕಣಕ್ಕಿಳಿದಿದ್ದ ಸೈಯದ್ ಖಾದ್ರಿ ಅವರು 11,402 ಮತಗಳನ್ನಷ್ಟೇ ಪಡೆದಿದ್ದು, ಠೇವಣಿಯನ್ನೂ ನಷ್ಟಮಾಡಿಕೊಂಡಿದ್ದಾರೆ. ಜೆಡಿಎಸ್ ವರಿಷ್ಠ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಭರ್ಜರಿ ಪ್ರಚಾರ ನಡೆಸಿದರೂ ಪ್ರಯೋಜನವಾಗಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.