ವರುಣಾ ಕ್ಷೇತ್ರದಲ್ಲಿ ಸಚಿವ ಸೋಮಣ್ಣ ಪರ ಚುನಾವಣಾ ಪ್ರಚಾರಕ್ಕಿಳಿದ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ.
ಮೈಸೂರು (ಏ.29): ವರುಣಾ ಕ್ಷೇತ್ರದಲ್ಲಿ ಸಚಿವ ಸೋಮಣ್ಣ ಪರ ಚುನಾವಣಾ ಪ್ರಚಾರಕ್ಕಿಳಿದ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಕ್ಷೇತ್ರದ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಮತಯಾಚನೆ ವೇಳೆ, ನನ್ ಫ್ರೆಂಡ್ ಡಿಕೆ.ಶಿವಕುಮಾರ್ ಸಿಎಂ ಆಗೋದು ಬೇಡ್ವಾ? ಇಲ್ಲಿ ಯಾರೂ ನಾನೇ ಮುಖ್ಯಮಂತ್ರಿ ಅಂತ ನಿರ್ಧಾರ ಮಾಡಲಾಗದು. ಎಲ್ಲವೂ ಮೇಲೆ ಇದ್ದವನ ನಿರ್ಧಾರ (ದೇವರು) ಗೆದ್ದ ಮೇಲೆ ಅವರು ನೋಡಿಕೊಳ್ಳಲಿ. ಏನೇ ಆದ್ರೂ ಬಿಜೆಪಿ ಸೋಲಿಸಲು ಅಗಲ್ಲ ಎಂದಿದ್ದಾರೆ.
ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನಟ ಜಗ್ಗೇಶ್ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ ನಡೆಸಿದರು. ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗ ಮಾತನಾಡಿದ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅದ್ಭುತವಾದ ನಾಯಕ ವಿ.ಸೋಮಣ್ಣ ಅವರನ್ನು ವರಿಷ್ಠರು ಆಯ್ಕೆ ಮಾಡಿ ನಿಲ್ಲಿಸಿದ್ದಾರೆ. ಅವರ ಸಾಧನೆ, ವರ್ಚಸ್ಸು ಆಧಾರದಲ್ಲಿ ಗೆಲ್ಲುತ್ತಾರೆ. ವರುಣಾದಲ್ಲಿ ಈ ವರೆಗೆ ಸರಿಯಾದ ವಿರೋಧಿ ಇರಲಿಲ್ಲ. ಆಗ ಒಂದು ಲೆಕ್ಕ, ಈಗ ಚುನಾವಣೆ ಬಿರುಸಾಗಿದೆ. ಸಿದ್ದರಾಮಯ್ಯ ವಯಕ್ತಿವಾಗಿ ನನ್ನ ಸ್ನೇಹಿತ. ಒಳ್ಳೆ ನಾಯಕ ಕೂಡ. ಅದನ್ನ ಪಕ್ಕಕ್ಕೆ ಇಡೋಣ. ಚುನಾವಣಾ ರಾಜಕೀಯ ಅಂತ ಬಂದಾಗ ನಾವು ಗೆಲ್ಲಲೇ ಬೇಕು.
ರಾಜ್ಯದಲ್ಲಿ ಯಾವುದೂ ಇಂತಹವರ ಕ್ಷೇತ್ರ ಅಂತ ಹೇಳಲಾಗದು. ಹಾಗಿದ್ದಾಗ ಸಿದ್ದರಾಮಯ್ಯ ಬಾದಾಮಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಇಲ್ಲೇ ನಿಂತು ಸಾಬೀತು ಮಾಡುತ್ತಿದ್ರು. ಇಲ್ಲಿ ಮತದಾರ ಏನು ತೀರ್ಮಾನ ಮಾಡ್ತಾನೆ, ಅವನೇ ಗೆಲ್ತಾನೆ. ಇಲ್ಲಿ ಬೇಕಿರೋದು ಅಭಿವೃದ್ಧಿ. ವಿ.ಸೋಮಣ್ಣ ಅದ್ಭುತವಾಗಿ ಅಭಿವೃದ್ಧಿ ಮಾಡಿದ್ದಾರೆ. 10 ಕಾರ್ಯಕ್ರಮ ನಾನು ಉದ್ಘಾಟನೆ ಮಾಡಿದ್ದೇನೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹೈಟೆಕ್ ಆಸ್ಪತ್ರೆಯಂತಿದೆ. ರಸ್ತೆ, ಪಾರ್ಕ್ ನೋಡಿದ್ರೆ ನೀವು ಶಾಕ್ ಆಗ್ತಿರಾ. ಅಭಿವೃದ್ಧಿ ನೋಡಿ ವರಿಷ್ಠರು ಸೋಮಣ್ಣ ನಿಲ್ಲಿಸಿದ್ದಾರೆ.
ಇನ್ನು ಖರ್ಗೆ ಹೇಳಿಕೆ ವಿಚಾರ ಬಹಳ ನೋವಾಯ್ತು. ಬಹಳ ನೋವಾಯ್ತು, ಅವರ ಬಾಯಿಂದ ಇಂತಹದ್ದು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷರನ್ನ ರಾಷ್ಟ್ರದಲ್ಲಿ ಯಾರೂ ಒಪ್ಪುತ್ತಿಲ್ಲ. ಹಾಗಾಗಿ ಖರ್ಗೆಯನ್ನು ನಾಮಕಾವಸ್ಥೆಗೆ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಇವರು ಒಂದು ದಿನ ಸದನಕ್ಕೆ ಬಂದು ರಾಜ್ಯದ ವಿಚಾರ ಮಾತನಾಡಿಲ್ಲ. ದೀನ ದಲಿತರು, ಬಡವರ ಬಗ್ಗೆ ಮಾತನಾಡಿಲ್ಲ. ವಿರೋಧ ಪಕ್ಷದವರೆಲ್ಲ ಒಟ್ಟಾಗಿ ಕಪ್ಪು ಬಟ್ಟೆ ಹಾಕೊಂಡು ಸದನ ಹಾಳು ಮಾಡುತ್ತಿದ್ರಿ. ನಿಮಗೆ ಇದ್ದ ಅವಕಾಶ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು.
ಮೋದಿಯನ್ನ ತೆಗಳಿದಷ್ಟು ಅವರು ಆಯಸ್ಸು ಹೆಚ್ಚಾಗುತ್ತೆ. ಜನರ ಪ್ರೀತಿಯೂ ಹೆಚ್ಚಾಗುತ್ತೆ. ಮೋದಿ ವಿರುದ್ಧದ ಹೇಳಿಕೆಯಿಂದ ಜನ ನೊಂದಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಖರ್ಗೆಗೆ ಅದೇನ್ ಬಂತಪ್ಪ ಅಂತ ಕೇಳುತ್ತಿದ್ದಾರೆ. ಹಳ್ಳಿ ಜನ ಪ್ರಜ್ಞಾವಂತರಾಗಿದ್ದಾರೆ. ಎಲ್ಲವನ್ನು ಗಮನಿಸುತ್ತಿದ್ದಾರೆ. ಈ ಹೇಳಿಕೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ.
ವರುಣಾ ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಗೇಟ್ ಪಾಸ್ ಕೊಟ್ಟ ಗ್ರಾಮಸ್ಥರು!
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಯ ಕನಸನ್ನ ಹೊತ್ತು ಬಂದಿದ್ದಾರೆ. ನಗರ ಪ್ರದೇಶದಲ್ಲಿ ಸಿಗುವ ಸೌಕರ್ಯಗಳು ಗ್ರಾಮೀಣ ಭಾಗಕ್ಕೂ ತಲುಪಿಸುವ ಕೆಲಸದಲ್ಲಿ ನಿರತರಗಿದ್ದಾರೆ. ನಾನು ಸಹ ಗ್ರಾಮೀಣ ಭಾಗದಿಂದ ಬಂದವನು. ಸ್ವತಂತ್ರ ಬಂದು 75ವರ್ಷಗಳು ಕಳೆದಿವೆ. ನಾವು ಬದಲಾವಣೆ ಹೊಂದಬೇಕು. ಮೊದಲು ದೇಶ ನಂತರ ನಾನು ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಸೋಮಣ್ಣನವರು 6 ಭಾರಿ ಶಾಸಕರಾಗಿದ್ದವರು. ಇದೀಗ ವರುಣ ಕ್ಷೇತ್ರಕ್ಕೆ ಬಂದಿದ್ದಾರೆ. ನೀವೆಲ್ಲರೂ ಸೋಮಣ್ಣನವರಿಗೆ ಮತ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲು ಎಸೆತ ಡ್ರಾಮಾ: ಕುಮಾರಸ್ವಾಮಿ ವ್ಯಂಗ್ಯ!
ಇನ್ನು ತಿ.ನರಸೀಪುರ ಕ್ಷೇತ್ರದಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಡಾ ರೇವಣ್ಣ ಪರ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಭರ್ಜರಿ ರೋಡ್ ಶೋ ನಡೆಸಿದರು. ಬನ್ನೂರಿನ ಕಾವೇರಿ ಸರ್ಕಲ್ ನಿಂದ ರೋಡ್ ಶೋ ನಡೆಸಲಾಯ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಜಗ್ಗೇಶ್ ಗೆ ಹೂವಿನ ಸುರಿಮಳೆಗೈದರು. ನರಸೀಪುರ ಕ್ಷೇತ್ರದಲ್ಲಿ ರೇವಣ್ಣನವರ ಹೆಸರು ಚಿರಪರಿಚಿತ. ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇದೀಗ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನ ರೇವಣ್ಣನವರು ಹೊಂದಿದ್ದಾರೆ. ನಾವು ಯಾರಿಗೆ ಮತ ಕೊಟ್ಟರು ರಾಷ್ಟ್ರಕ್ಕೆ ಮತ ಕೊಡಿ ಎಂದು ಕೇಳುತ್ತೇನೆ. ನಮ್ಮ ಅಭ್ಯರ್ಥಿ ರೇವಣ್ಣ ಪ್ರಬಲವಾಗಿದ್ದಾರೆ. ಈ ಬಾರಿ ನರಸೀಪುರ ಕ್ಷೇತ್ರದ ಜನತೆ ಬಿಜೆಪಿ ಪಕ್ಷವನ್ನ ಬೆಂಬಲಿಸಲಿದ್ದಾರೆ ಎಂದು ಜಗ್ಗೇಶ್ ಹೇಳಿದರು.