ಕೊಲೆ ಆರೋಪಿಗೆ ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ನಟ ದರ್ಶನ್‌ಗೆ ಯಾವುದೇ ರೀತಿಯ ಆತಿಥ್ಯ ನೀಡಲಾಗಿಲ್ಲ. ಎಲ್ಲಾ ಅಪರಾಧಿಗಳ ರೀತಿಯಲ್ಲೇ ಅವರನ್ನೂ ನಡೆಸಿಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಜೂ.15): ಕೊಲೆ ಆರೋಪಿಗೆ ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ನಟ ದರ್ಶನ್‌ಗೆ ಯಾವುದೇ ರೀತಿಯ ಆತಿಥ್ಯ ನೀಡಲಾಗಿಲ್ಲ. ಎಲ್ಲಾ ಅಪರಾಧಿಗಳ ರೀತಿಯಲ್ಲೇ ಅವರನ್ನೂ ನಡೆಸಿಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ವಾಕಿಂಗ್ ಮಾಡಲು ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಲಾಗಿದೆ ಎಂಬ ಆರೋಪಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರಲ್ಲಿ ಈ ಬಗ್ಗೆ ವಿಚಾರಣೆ ಮಾಡಿದ್ದೇನೆ. ಆ ರೀತಿಯ ರಾಜಾತಿಥ್ಯವನ್ನು ದರ್ಶನ್‌ಗೆ ನೀಡಿಲ್ಲ.
ಯಾರೂ ಆರೋಪಿಗಳಿಗೆ ರಾಜಾತಿಥ್ಯ ಕೊಡುವುದಿಲ್ಲ, ಕೊಡಬಾರದು ಎಂದರು. ಯಾವುದೇ ರಾಜಾತಿಥ್ಯ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಗರ ಪೊಲೀಸ್ ಕಮಿಷನರ್ ಬಳಿ ಕೂಡ ಮಾತನಾಡಿದ್ದೇನೆ. ಅವರು ಕೂಡ ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು ತಿಳಿಸಿದರು. ದರ್ಶನ್ ಇರುವ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಸಮೀಪ ರಸ್ತೆ ತಡೆ ಹಿಡಿಯಲಾಗಿದ್ದು, ಇದರಿಂದ ಶಾಲಾ ವಾಹನಗಳು, ಆಂಬ್ಯುಲೆನ್ಸ್‌ಗಳು ಹಾಗೂ ಅಕ್ಕಪಕ್ಕದ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದರು.
ನಟ ದರ್ಶನ್ ಬಚಾವ್ ಮಾಡಲು ಯಾರೂ ಯತ್ನಿಸಿಲ್ಲ: ಗೃಹ ಸಚಿವ ಪರಮೇಶ್ವರ್
ವೀರಶೈವ ಮಠಾಧೀಶರ ಪ್ರತಿಭಟನೆ: ಯಾವುದೇ ಒತ್ತಡಕ್ಕೂ ಮಣಿಯದೆ ಚಲನಚಿತ್ರ ನಟ ಮತ್ತು ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ತಕ್ಷಣವೇ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕು. ಪತ್ನಿಗೆ ಉದ್ಯೋಗ ಕೊಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ, ವಿವಿಧ ಮಠದ ಸ್ವಾಮೀಜಿಗಳು ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ‘ಇದೇ ವೇಳೆ ಕನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಮತ್ತು ಈತನ ಸ್ನೇಹಿತೆ ಪವಿತ್ರಾಗೌಡ ಹಾಗೂ ೧೫ ಮಂದಿ ಸೇರಿ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಸಿನಿಮಾ ಶೈಲಿಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಖಂಡನೀಯವಾಗಿದೆ. ನಾಗರಿಕ ಸಮಾಜವು ಇದನ್ನು ಒಪ್ಪಲು ಸಾಧ್ಯವಿಲ್ಲ. ರೇಣುಕಾಸ್ವಾಮಿ ವೀರಶೈವ ಸಮುದಾಯಕ್ಕೆ ಸೇರಿದವರು. ಅವರು ವಯೋವೃದ್ಧ ತಂದೆ ತಾಯಿ ಹಾಗೂ ಗರ್ಭಿಣಿ ಪತ್ನಿ ಇದ್ದು, ಈ ವಿಚಾರ ಕೇಳಿ ಇವರ ಕುಟುಂಬವು ಈಗ ದಿಗ್ಬ್ರಮೆಗೆ ಒಳಗಾಗಿದ್ದಾರೆ’ ಎಂದು ಹೇಳಿದರು.
ಪೋಕ್ಸೋ ಕೇಸ್‌ನಲ್ಲಿ ಅಗತ್ಯ ಬಿದ್ದರೆ ಬಿಎಸ್‌ವೈ ಬಂಧನ: ಗೃಹ ಸಚಿವ ಪರಮೇಶ್ವರ್
‘ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಚಿತ್ರನಟ ದರ್ಶನ್ ಹಾಗೂ ಆತನ ಸಹಚರರು ಬ್ಯಾಟ್, ಕಬ್ಬಿಣದ ರಾಡು ಇನ್ನಿತರೆ ಆಯುಧಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಕ್ರೂರವಾಗಿ ಕೊಲೆಗೈದಿದ್ದಾರೆ. ಪೊಲೀಸರು ಈಗಾಗಲೇ ೧೩ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದವರ ಶೋಧಕಾರ್ಯ ಮುಂದುವರೆಸಿದ್ದಾರೆ. ದರ್ಶನ್ ತೂಗುದೀಪ ಈ ಹಿಂದೆ ಕೂಡ ಕ್ರಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, ರೇಣುಕಾಸ್ವಾಮಿ ಕೊಲೆ ಮಾಡಿದ್ದರಿಂದ ಅವರ ಕುಟುಂಬ ಅನಾಥವಾಗಿದೆ. ದರ್ಶನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ’ ಎಂದು ಹೇಳಿದರು.