ಬಿಜೆಪಿ-ಜೆಡಿಎಸ್ ಮೈತ್ರಿ: ಕಾರ್ಯಕರ್ತರು ಒಂದಾಗ್ತಾರಾ?, ವರಿಷ್ಠರ ನಡೆಯಿಂದ ಭಾರೀ ಗೊಂದಲ..!

By Girish Goudar  |  First Published Sep 22, 2023, 10:30 PM IST

ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ಗೆ ಬೀಳುತ್ತಿದ್ದ ಮುಸ್ಲಿಂ ಮತಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಇಷ್ಟು ದಿನಗಳ ಕಾಲ ಜಾತ್ಯಾತೀತ ಪಕ್ಷವೆಂದು ಹೇಳಿಕೊಂಡಿದ್ದ ಜೆಡಿಎಸ್‌ಗೆ ಈ ಮೈತ್ರಿ. ಜೆಡಿಎಸ್ ಗೆ ಭವಿಷ್ಯದಲ್ಲಿ ಹಿನ್ನಡೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ರಾಯಚೂರು(ಸೆ.22): ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಅಧಿಕೃತವಾಗಿದೆ. ರಾಜ್ಯದ ಆರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠಿರು ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅದರಂತೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಸಹ ಜೆಡಿಎಸ್ ಗೆ ಬಿಟ್ಟು ಜೆಡಿಎಸ್‌ಗೆ ಸಿಗುತ್ತೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ. 

Latest Videos

undefined

ಸದ್ಯ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಇದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಿಂದ ದೂರ ಇರುವುದಾಗಿ ಅವರು ಹೇಳುತ್ತಿದ್ದಾರೆ ಎಂಬ ಮಾತುಗಳ ಸಹ ಕೇಳಿಬರುತ್ತಿದೆ. ಹೀಗಾಗಿ ಹೈಕಮಾಂಡ್ ಹಂತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಈಗ ಮೈತ್ರಿ ಆಗಿದ್ದರಿಂದ ರಾಯಚೂರು ರಾಜಕೀಯದಲ್ಲಿ ಹೊಸ ಚರ್ಚೆ ಶುರುವಾಗಿದೆ.  2024ರ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದ ಟಿಕೆಟ್ ಜೆಡಿಎಸ್ ಅಭ್ಯರ್ಥಿಗೆ ಸಿಗುತ್ತೆ ಎಂಬ ಚರ್ಚೆ ಜೋರಾಗಿದೆ. ಈ ಒಂದು ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಯಾವ ಪಕ್ಷಕ್ಕೆ ಲಾಭ ಮತ್ತು ಯಾರಿಗೆ ನಷ್ಠವಾಗಲಿದೆ ಎಂಬ ಲೆಕ್ಕಾಚಾರ ರಾಯಚೂರು ಜಿಲ್ಲೆಯಾದ್ಯಂತ ಶುರುವಾಗಿದೆ.

ಎನ್‌ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್‌: ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಸ್ಪರ್ಧೆ ಫಿಕ್ಸ್‌

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಯ ಲಾಭಗಳು:

1. ಬಿಜೆಪಿಗಿಂತ ಜೆಡಿಎಸ್‌ಗೆ ಹೆಚ್ಚು ಲಾಭ!

ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯಿಂದ ಬಿಜೆಪಿಗಿಂತ ಜೆಡಿಎಸ್ ಗೆ ಹೆಚ್ಚು ಲಾಭ ಎಂಬ ಮಾತುಗಳು ಕೇಳಿಬರುತ್ತಿವೆ. ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ, ಲಿಂಗಸೂಗೂರು, ದೇವದುರ್ಗ ಹಾಗೂ ಯಾದಗಿರಿ, ಶಹಾಪೂರ ಮತ್ತು ಸುರಪುರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಸದ್ಯ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರದ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಮೂರು ಬಾರಿ ಸತತವಾಗಿ ಗೆಲುವು ಸಾಧಿಸಿದ್ದಾರೆ. ಡಾ.ಶಿವರಾಜ್ ಪಾಟೀಲ್ ಮೊದಲ ಬಾರಿಗೆ ಜೆಡಿಎಸ್ನಿಂದ ಗೆದ್ದು ಶಾಸಕರು ಆಗಿದ್ರು. ಆದ್ರೆ ಕಳೆದ 2023ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕುಮಾರಸ್ವಾಮಿ ಹಾಲಿ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದಾರೆ. ಆದ್ರೆ ನಾಯಕರ ಕೊರತೆಯಿಂದಾಗಿ ಜೆಡಿಎಸ್ ನಾಯಕರು ಮೌನವಹಿಸಿದರಿಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಾಗಿತ್ತು. ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ದಂಡು ಇದೆ. ಆದ್ರೆ ಬಿಜೆಪಿ ಕಾರ್ಯಕರ್ತರು ಇದ್ದು ಇಲ್ಲದಂತೆ ಇದ್ದಾರೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾಗಿತ್ತು. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮಬಲವಾಗಿವೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಬದ್ಧವೈರಿಗಳಂತೆ ಕಾದಾಟ ಮಾಡಿ ಜೆಡಿಎಸ್ ಅಭ್ಯರ್ಥಿಗೆ ಆಯ್ಕೆ ಮಾಡಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ ವರಿಷ್ಠರು ಹೇಳಿದ್ರೂ ಮುಖಂಡರು ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಓಡಾಟ ಮಾಡುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತ ಯಾದಗಿರಿ ಮೊದಲಿನಿಂದಲ್ಲೂ ಕಾಂಗ್ರೆಸ್ನ ಭದ್ರಕೋಟೆ ಕ್ಷೇತ್ರ. ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೆಲಸ ಸುಲಭವಾಗಬಹುದು. ಇತ್ತ ಶಹಾಪೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ದಂಡು ಇದೆ. ಬಿಜೆಪಿ ಪಕ್ಷ ಪ್ರಬಲವಾಗಿದೆ, ಆದ್ರೆ ಜೆಡಿಎಸ್ ನಾಯಕರ  ಕೊರತೆ ಎದು ಕಾಣುತ್ತಿದೆ. ಸುರಪೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಪ್ರಬಲವಾಗಿದೆ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಇಡೀ ಲೋಕಸಭಾ ಕ್ಷೇತ್ರದ ತುಂಬಾ ಜೆಡಿಎಸ್ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ.

2) ಆಡಳಿತ ಪಕ್ಷ ಕಾಂಗ್ರೆಸ್ ಗೆ ಕಟ್ಟಿಹಾಕಲು ಮೈತ್ರಿಯಿಂದ ಅನುಕೂಲ!

ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲು ಅನುಭವಿಸಿದೆ. 135 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಬೀಗುತ್ತಿದೆ. ಗ್ಯಾರಂಟಿ ಘೋಷಣೆಗಳ ಜಾರಿ ಮೂಲಕ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವ ನಿರೀಕ್ಷೆ ಇಟ್ಟಿಕೊಂಡಿದೆ. ರಾಯಚೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ  5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 2 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಇದೆ. ದೇವದುರ್ಗ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಅಧಿಕಾರದಲ್ಲಿ ಇದೆ. 8 ಕ್ಷೇತ್ರದಲ್ಲಿಯೂ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಪೆಟ್ಟುಕೊಡಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್ ನಾಯಕರದಾಗಿದೆ. ಅಷ್ಟೇ ಅಲ್ಲದೇ ರಾಷ್ಟ್ರೀಯ ಪಕ್ಷದ ಬೆಂಬಲ ಸಿಕ್ಕಿದಕ್ಕೆ ಜೆಡಿಎಸ್ಗೆ ಆನೆಬಲ ಬಂದಂತೆ ಆಗಿದೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಿದರೆ ಅದು ಆಡಳಿತ ಕಾಂಗ್ರೆಸ್ಗೆ ಹೊಡೆತ ಬೀಳುವ ಸಾಧ್ಯತೆಯೂ ಇದೆ.

3) ಮೈತ್ರಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ಗೆ ಬರಲಿದೆ ಮತ್ತಷ್ಟು ಬಲ!

ಈಗಾಗಲೇ ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಇದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಇಡೀ ಕಲ್ಯಾಣ ಕರ್ನಾಟಕದ ತುಂಬಾ ಜೆಡಿಎಸ್ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಲು ಸಿದ್ಧತೆ ನಡೆಸಲು ಈ ಮೈತ್ರಿ ಅನುಕೂಲವಾಗಲಿದೆ. ಎಲ್ಲಿಯೂ ಒಂದು ಕಡೆ ಈ ಮೈತ್ರಿ ಜೆಡಿಎಸ್ ಗೆ ಮತ್ತಷ್ಟು ಬಲ ತಂದಿದೆ ಎನ್ನುತ್ತಿದ್ದಾರೆ ರಾಜಕೀಯ ಚಿಂತಕರು..

4) ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾರ್ಯಕರ್ತರು ಹೈರಾಣು!

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬರುವ 8 ವಿಧಾನಸಭಾ ಕ್ಷೇತ್ರದಲ್ಲಿ  ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಬದ್ಧವೈರಿಗಳಂತೆ ಓಡಾಟ ಮಾಡಿ ಚುನಾವಣೆ ಮಾಡಿದ್ದಾರೆ. ಈಗ ಏಕಾಏಕಿ ಹೈಕಮಾಂಡ್ ನಾಯಕರ ಮೈತ್ರಿಯಿಂದ ಕಾರ್ಯಕರ್ತರು ಹೈರಾಣು ಆಗುವ ಪರಿಸ್ಥಿತಿ ಕ್ಷೇತ್ರದಲ್ಲಿದೆ. ಅದರಲ್ಲೂ ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಲು ಬಿಜೆಪಿ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಹತ್ತಾರು ಪ್ರಕರಣಗಳು ಇವೆ. ಎರಡು ಪಕ್ಷದ ಕಾರ್ಯಕರ್ತರು ವೇದಿಕೆಯಲ್ಲಿ ಹಿಗ್ಗಾಮುಗ್ಗಾ ತರಾಟೆ, ವೈಯಕ್ತಿಕ ನಿಂದನೆ ಪ್ರಕರಣಗಳು ಇವೆ.  ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕೆಳಹಂತದ ಕಾರ್ಯಕರ್ತರು ಹೊಂದಾಣಿಕೆ ಆಗುವುದು ಕಷ್ಟವಾಗಲಿದೆ. ಇದು ಚುನಾವಣೆಯ ಮೇಲೆಯೂ ಪರಿಣಾಮ ಬೀರಬಹುದು.

5) ಮೈತ್ರಿಯಿಂದ ಮುಸ್ಲಿಂ ಮತಬ್ಯಾಂಕ್ ಕಾಂಗ್ರೆಸ್ ಪಾಲಾಗಬಹುದು!

ರಾಯಚೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿವೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರ ಮುಸ್ಲಿಂ ಮತಗಳು ಇದ್ರೆ, ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರ, ಮಾನ್ವಿ ಕ್ಷೇತ್ರದಲ್ಲಿ 55 ಸಾವಿರ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ, ಶಹಾಪೂರ ಕ್ಷೇತ್ರದಲ್ಲಿ 55 ಸಾವಿರ ಹಾಗೂ ಸುರಪೂರ ಕ್ಷೇತ್ರದಲ್ಲಿ 20 ಸಾವಿರ ಮುಸ್ಲಿಂ ಮತಗಳಿವೆ. 

ದಳಪತಿಗಳ ಮೈತ್ರಿ ಮಾತು: ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಲಿದೆ ಜೆಡಿಎಸ್‌..?

ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ಗೆ ಬೀಳುತ್ತಿದ್ದ ಮುಸ್ಲಿಂ ಮತಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಇಷ್ಟು ದಿನಗಳ ಕಾಲ ಜಾತ್ಯಾತೀತ ಪಕ್ಷವೆಂದು ಹೇಳಿಕೊಂಡಿದ್ದ ಜೆಡಿಎಸ್‌ಗೆ ಈ ಮೈತ್ರಿ. ಜೆಡಿಎಸ್ ಗೆ ಭವಿಷ್ಯದಲ್ಲಿ ಹಿನ್ನಡೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಟ್ಟಾರೆ ಜೆಡಿಎಸ್-ಬಿಜೆಪಿ ಮೈತ್ರಿಗೆ ಜೆಡಿಎಸ್ ನಾಯಕರು ಸ್ವಾಗತಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಆದ್ರೆ ಬಿಜೆಪಿ ನಾಯಕರು ಮೈತ್ರಿ ಬಗ್ಗೆ ಎಲ್ಲಿಯೂ ತುಟ್ಟಿಬಿಚ್ಚದೇ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಗಳು ಮಾಡುತ್ತಾ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಜಿಲ್ಲಾಧ್ಯಕ್ಷ ಇಲ್ಲದೆ ಇದ್ರೂ, ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಜನರು ನಮಗೆ ಲೋಕಸಭೆಯೂ ಕಳುಹಿಸುತ್ತಾರೆ ಅಂತ ಗ್ಯಾರೆಂಟಿ ಬಗ್ಗೆ ಹೇಳುತ್ತಾ ಇದ್ದಾರೆ.

click me!