
ವಿಜಯಪುರ(ಅ.09): ಕಾಂಗ್ರೆಸ್, ಬಿಜೆಪಿ ಮಧ್ಯೆ ಹೊಂದಾಣಿಕೆ ರಾಜಕಾರಣವಿದೆ. ಹಾಗಾಗಿ ವಿಜಯಪುರ ನಗರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಚಿತ್ರ ನಟ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜನಹಿತಕ್ಕಾಗಿ ಆಡಳಿತ ನಡೆಸದೇ ಸ್ವಹಿತಕ್ಕಾಗಿ ಆಡಳಿತ ನಡೆಸುತ್ತ ಬಂದಿವೆ. ಕಾಂಗ್ರೆಸ್ ಕಳೆದ 70 ವರ್ಷ ಆಡಳಿತ ನಡೆಸಿದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ದೇಶದ ಎಲ್ಲ ಜನತೆಗೆ ಇನ್ನೂ ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ. ಶೇ.10ರಷ್ಟು ಮಂದಿಗೆ ಮಾತ್ರ ಸ್ವಾತಂತ್ರ್ಯ ದೊರೆತಿದೆ ಎಂದು ಲೇವಡಿ ಮಾಡಿದರು.
ಆಮ್ ಆದ್ಮಿ ಪಕ್ಷ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆರೋಗ್ಯ ಹಾಗೂ ಜನರ ರಕ್ಷಣೆ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪಕ್ಷದ ಈ ಧ್ಯೇಯದಿಂದಾಗಿ ದೆಹಲಿಯಲ್ಲಿ ರಾಜ್ಯಭಾರ ಮಾಡುತ್ತಿದೆ. ಅದೀಗ ಪಂಜಾಬ್ ರಾಜ್ಯಕ್ಕೂ ವಿಸ್ತರಣೆಯಾಗಿದೆ. ಗುಜರಾತ್ ರಾಜ್ಯದಲ್ಲಿಯೂ ಆಮ್ ಆದ್ಮಿ ಪಕ್ಷ ಗೆಲ್ಲುವ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿದೆ. 40 ಪರ್ಸೆಂಟೇಜ್ ಕಮಿಷನ್ ಕೇಳುತ್ತಿರುವ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಧಾನಿ ಕ್ಯಾರೆ ಎನ್ನಲಿಲ್ಲ. ಭ್ರಷ್ಟಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಸಣ್ಣ ಹುಡುಗ(ರಾಹುಲ್ ಗಾಂಧಿ) ಕರ್ಕೊಂಡು ಕಾಂಗ್ರೆಸ್ ಯಾತ್ರೆ: ಸಂಸದ ಜಿಗಜಿಣಗಿ ವ್ಯಂಗ್ಯ
ಆಮ್ ಆದ್ಮಿ ಪಕ್ಷ ಪ್ರಾಮಾಣಿಕ, ಜನಪರ ಹಾಗೂ ಸ್ವಚ್ಛ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅದೇ ತತ್ವದ ಆಧಾರದಿಂದ ತಮ್ಮ ಪಕ್ಷ ವಿಜಯಪುರ ಮಹಾನಗರ ಪಾಲಿಕೆಯ ಎಲ್ಲ 35 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಅರ್ಹ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡುವುದಿಲ್ಲ. ಪಕ್ಷದ ಧುರೀಣರು ಆಯಾ ವಾರ್ಡ್‌ಗಳಲ್ಲಿ ಸಂಚರಿಸಿ ಜನರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಜಯಪುರದಲ್ಲಿ ಸರಿಯಾದ ರಸ್ತೆಯಿಲ್ಲ. ಚರಂಡಿ ಇಲ್ಲ. ಬರೀ ಮಹಾನಗರಪಾಲಿಕೆ ಎಂದು ನಾಮಫಲಕ ಮಾತ್ರ ಬದಲಾಗಿದೆ. ಜನರಿಗೆ ಈ ನಾಮಫಲಕ ಬದಲಾವಣೆಯಿಂದ ಏನೂ ಪ್ರಯೋಜನವಿಲ್ಲ. ಜನರಿಗೆ ಉತ್ತಮ ಆಡಳಿತ ನೀಡಬೇಕು. ಆಗ ಜನರು ನೆಮ್ಮದಿಯಿಂದ ಇರಲು ಸಾಧ್ಯ. ವಿಜಯಪುರ ಜನತೆ ಎರಡು ರಾಷ್ಟ್ರೀಯ ಪಕ್ಷಗಳ ದೊಂಬರಾಟದಿಂದ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಬದಲಾವಣೆಗೆ ಈಗ ಆಮ್ ಆದ್ಮಿ ಪಕ್ಷ ಪರ್ಯಾಯ ಶಕ್ತಿಯಾಗಿ ಬಂದಿದೆ. ಅರವಿಂದ ಕೇಜ್ರಿವಾಲ್ ಅವರ ಜನಪರ ಆಡಳಿತದ ಮಾಡೆಲ್, ಪಕ್ಷಕ್ಕೆ ಜನ ಸಾಮಾನ್ಯರ ಬಗ್ಗೆ ಇರುವ ಕಾಳಜಿ ಹಾಗೂ ಅವರ ಏಳ್ಗೆ ಬಗ್ಗೆ ಇರುವ ಬದ್ಧತೆಯನ್ನು ಮನೆ ಮನೆಗೆ ತಿಳಿಸಿ ಪ್ರಚಾರ ಮಾಡುತ್ತಿದ್ದೇವೆ ಅಂತ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.