ನೀರಿನ ಸಮಸ್ಯೆ ಪರಿಹರಿಸಲು ತಾಲೂಕಿಗೊಂದು ಹೆಲ್ಪ್‌ಲೈನ್‌: ಸಿಎಂ ಸಿದ್ದರಾಮಯ್ಯ

Published : Mar 06, 2024, 05:48 AM IST
ನೀರಿನ ಸಮಸ್ಯೆ ಪರಿಹರಿಸಲು ತಾಲೂಕಿಗೊಂದು ಹೆಲ್ಪ್‌ಲೈನ್‌: ಸಿಎಂ ಸಿದ್ದರಾಮಯ್ಯ

ಸಾರಾಂಶ

ರಾಜ್ಯದಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಾಲೂಕು ಮಟ್ಟದಲ್ಲಿ ನಿಯಂತ್ರಣಾ ಕೊಠಡಿ ಮತ್ತು ಸಹಾಯವಾಣಿ ಕೇಂದ್ರ ಸ್ಥಾಪಿಸಿ ದೂರು ಬಂದ ಕೂಡಲೆ ನೀರು ಪೂರೈಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಬೆಂಗಳೂರು (ಮಾ.06): ರಾಜ್ಯದಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಾಲೂಕು ಮಟ್ಟದಲ್ಲಿ ನಿಯಂತ್ರಣಾ ಕೊಠಡಿ ಮತ್ತು ಸಹಾಯವಾಣಿ ಕೇಂದ್ರ ಸ್ಥಾಪಿಸಿ ದೂರು ಬಂದ ಕೂಡಲೆ ನೀರು ಪೂರೈಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸದ್ಯ ರಾಜ್ಯದಲ್ಲಿ ಅಷ್ಟಾಗಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚುವ ಅಂದಾಜಿದೆ. ಹೀಗಾಗಿ ಗ್ರಾಮ ಮಟ್ಟದಲ್ಲಿ ಕಾಣಿಸಿಕೊಳ್ಳುವ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದೂರುಗಳನ್ನು ಸ್ವೀಕರಿಸಿ, ಕೂಡಲೇ ನೀರು ಪೂರೈಕೆಗೆ ನೆರವಾಗುವಂತೆ ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಕೇಂದ್ರ ಸ್ಥಾಪಿಸಲು ಹೇಳಲಾಗಿದೆ. ಅದರ ಜತೆಗೆ ಪ್ರತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ನೈಜ ಸಮಸ್ಯೆಯನ್ನು ಗುರುತಿಸಿ ಪರಿಹರಿಸುವಂತೆ ಸೂಚಿಸಲಾಗಿದೆ ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ನಿಜ: ಸಚಿವ ಪರಮೇಶ್ವರ್‌

ಹೊಸ ಕೊಳವೆಬಾವಿ: ರಾಜ್ಯದಲ್ಲಿರುವ ಸರ್ಕಾರಿ ಕೊಳವೆ ಬಾವಿಗಳ ದುರಸ್ತಿಗೆ ಸೂಚಿಸಲಾಗಿದೆ. ಕೊಳವೆಬಾವಿಗಳ ಆಳವನ್ನು ಮತ್ತಷ್ಟು ಹೆಚ್ಚಿಸುವುದು, ಮೋಟಾರು ಸರಿಯಿಲ್ಲದೆ ದುರಸ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ, ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ ದೊರೆಯದಿದ್ದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯುವಂತೆ ಸೂಚಿಸಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರದಿಂದಲೇ ಅನುದಾನ ನೀಡಲಾಗುತ್ತಿದ್ದು, ಅದಕ್ಕಾಗಿ 210 ಕೋಟಿ ರು. ಪೂರೈಸಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.

ರಾಜ್ಯದ 220 ತಾಲೂಕುಗಳಲ್ಲಿ ಬರ ಘೋಷಿಸಲಾಗಿದ್ದು, ಅದರಲ್ಲಿ 194 ತಾಲೂಕುಗಳಲ್ಲಿ ತೀವ್ರ ಬರದ ಛಾಯೆಯಿದೆ. ಸದ್ಯ 98 ತಾಲೂಕುಗಳ 412 ಗ್ರಾಮ ಪಂಚಾಯತಿ ವ್ಯಾಪ್ತಿಯ 175 ಗ್ರಾಮಗಳಲ್ಲಿ ಹಾಗೂ 20 ನಗರ ಪ್ರದೇಶಗಳ 96 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಿದೆ. ಅಲ್ಲಿಗೆ ಖಾಸಗಿ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 7,408 ಗ್ರಾಮಗಳಲ್ಲಿ, 1,115 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಅಂದಾಜಿದ್ದು, ಅಲ್ಲಿ ನೀರು ಪೂರೈಸಲು ಈಗಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುವುದಕ್ಕಾಗಿ ಜಿಲ್ಲಾಡಳಿತಗಳಲ್ಲಿ 854 ಕೋಟಿ ರು. ಮೀಸಲಿಡಲಾಗಿದೆ. ಹಾಗೆಯೇ, ಜಾನುವಾರುಗಳಿಗೆ ಎದುರಾಗುವ ಮೇವಿನ ಸಮಸ್ಯೆ ನಿವಾರಿಸಲು ಮೇವು ಪೂರೈಕೆಗಾಗಿ ಪಶುಸಂಗೋಪನಾ ಇಲಾಖೆಗೆ 40 ಕೋಟಿ ರು. ನೀಡಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ಪೂರೈಸಲಾಗುವುದು ಎಂದು ತಿಳಿಸಿದರು.

631 ಕೋಟಿ ರು. ಬರ ಪರಿಹಾರ ವಿತರಣೆ: ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸುಮ್ಮನೇ ಟೀಕೆ ಮಾಡುತ್ತಿವೆ. ಆದರೆ, ಈವರೆಗೆ ಗರಿಷ್ಠ 2 ಸಾವಿರ ರು.ನಂತೆ 33.25 ಲಕ್ಷ ರೈತರಿಗೆ 631 ಕೋಟಿ ರು. ತಾತ್ಕಾಲಿಕ ಪರಿಹಾರ ನೀಡಲಾಗಿದೆ. 600 ಕೋಟಿರು ಬೆಳೆ ವಿಮೆ ನೀಡಲಾಗಿದ್ದು, ಇನ್ನೂ 800 ಕೋಟಿ ರು. ಪಾವತಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು. ಅಲ್ಲದೆ, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ 1.20 ಲಕ್ಷ ಕುಟುಂಬಗಳಿಗೆ ಮಾಸಿಕ ತಲಾ 4ರಿಂದ 5 ಸಾವಿರ ರು. ಹಣ ಸಂದಾಯವಾಗುತ್ತಿದೆ. ಅದರಿಂದ ಒಟ್ಟು 4.50 ಕೋಟಿ ಜನರಿಗೆ ಲಾಭವಾಗುತ್ತಿದೆ. ಹೀಗಾಗಿ ಬರಗಾಲವಿದ್ದರೂ ಜನರು ಗುಳೆ ಹೋಗುತ್ತಿಲ್ಲ ಎಂದರು. ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಎನ್‌.ಎಸ್‌. ಬೋಸರಾಜ್‌, ಎಂ.ಬಿ. ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಇತರರಿದ್ದರು.

ಜಪ್ಪಯ್ಯ ಎಂದರೂ ಬಿಡಿಗಾಸು ನೀಡುತ್ತಿಲ್ಲ: ಕೇಂದ್ರ ಸರ್ಕಾರ ಜಪ್ಪಯ್ಯ ಎಂದರೂ ಕರ್ನಾಟಕಕ್ಕೆ ಬರ ಪರಿಹಾರ ಹಣ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ಬರಗಾಲ ಬಂದಾಗ ನರೇಗಾ ಅಡಿಯಲ್ಲಿ 100 ಮಾನವ ದಿನಗಳ ಉದ್ಯೋಗವನ್ನು 150 ಮಾನವ ದಿನಕ್ಕೆ ಹೆಚ್ಚಿಸಬೇಕು. ಅದಕ್ಕಾಗಿ ಕಳೆದ ಸೆ. 20ರಂದೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಾನೂ ಸೇರಿದಂತೆ ರಾಜ್ಯದ ಹಲವು ಸಚಿವರು ಕೇಂದ್ರ ಸರ್ಕಾರದ ಸಚಿವರುಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ. ಅಲ್ಲದೆ, 18,172 ಕೋಟಿ ರು. ಬರ ಪರಿಹಾರಕ್ಕಾಗಿ ಕಳೆದ ಅಕ್ಟೋಬರ್‌ನಲ್ಲಿಯೇ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. 

ದೇಶದ್ರೋಹಿಗಳ ಪರ ಸಚಿವರೇ ನಿಂತಿದ್ದು ದುರ್ದೈವ: ಮಾಜಿ ಸಿಎಂ ಬೊಮ್ಮಾಯಿ

ಆದರೂ, ಕೇಂದ್ರ ಸರ್ಕಾರ ಜಪ್ಪಯ್ಯ ಎಂದರೂ ಬಿಡಿಗಾಸನ್ನೂ ನೀಡುತ್ತಿಲ್ಲ ಎಂದರು. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕೋಣ ಬನ್ನಿ ಎಂದು ವಿರೋಧ ಪಕ್ಷಗಳನ್ನು ಕರೆದರೆ, ನಮ್ಮ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ. ನಮಗೆ ಬರಬೇಕಾದ ಬರ ಪರಿಹಾರ ಬರಲಿಲ್ಲ ಎಂದು ಹೇಳುವುದಕ್ಕೂ ನಮಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಅದನ್ನು ಹೇಳಿದರೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ. ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರು ಎನ್ನುವಂತೆ ಬಿಜೆಪಿ ಮತ್ತು ಜೆಡಿಎಸ್‌ನವರು ವರ್ತಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ