ಜೆಡಿಎಸ್‌ಗೆ 80 ರಿಂದ 90 ಸ್ಥಾನದಲ್ಲಿ ಗೆಲುವು: ಎಚ್‌.ಡಿ.ಕುಮಾರಸ್ವಾಮಿ

Published : Sep 05, 2022, 05:16 AM IST
ಜೆಡಿಎಸ್‌ಗೆ 80 ರಿಂದ 90 ಸ್ಥಾನದಲ್ಲಿ ಗೆಲುವು: ಎಚ್‌.ಡಿ.ಕುಮಾರಸ್ವಾಮಿ

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯದಲ್ಲಿ 80 ರಿಂದ 90 ಸ್ಥಾನಗಳನ್ನು ಗೆಲ್ಲಲು ಯಾವುದೇ ಸಮಸ್ಯೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಾಗಮಂಗಲ (ಸೆ.05): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯದಲ್ಲಿ 80 ರಿಂದ 90 ಸ್ಥಾನಗಳನ್ನು ಗೆಲ್ಲಲು ಯಾವುದೇ ಸಮಸ್ಯೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ದೊಡ್ಡಚಿಕ್ಕನಹಳ್ಳಿಯಲ್ಲಿ ಭಾನುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಶಕ್ತಿ ಕುಂದಿಲ್ಲ. ಕಾರ್ಯಕರ್ತರು, ಮುಖಂಡರು ಹಾಗೂ ಜನ ಸಾಮಾನ್ಯರ ಆಶೀರ್ವಾದವಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಶಕ್ತಿ ಏನೆಂಬುದು ವಿರೋಧಿಗಳಿಗೆ ಗೊತ್ತಾಗಲಿದೆ ಎಂದರು.

ಜೆಡಿಎಸ್‌ ಪಕ್ಷ ನಾಡಿನ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ, ರೈತರು ಸಾಲ ಮಾಡದ ಹಾಗೆ ಚೈತನ್ಯ, ಪ್ರತಿ ಕುಟುಂಬಕ್ಕೆ ಒಂದು ಮನೆ, ಯುವಕರಿಗೆ ಉದ್ಯೋಗ ಕಲ್ಪಿಸುವ ಪಂಚರತ್ನ ಕಾರ್ಯಕ್ರಮ ಜಾರಿಗೆ ತರಲು ಮುಂದಾಗಿದೆ. ಇದಕ್ಕಾಗಿ ನನ್ನ ಆರೋಗ್ಯ ಲೆಕ್ಕಿಸದೇ ರಾಜ್ಯಾದ್ಯಂತ ಓಡಾಟ ನಡೆಸುತ್ತಿದ್ದೇನೆ ಎಂದರು. ಈಗಾಗಲೇ ರಾಜ್ಯದ ಜನರು ನಮ್ಮ ಪರವಾಗಿ ಕೆಲಸ ಮಾಡುವ ಜೆಡಿಎಸ್‌ ಪಕ್ಷಕ್ಕೆ ಮತ ಕೊಡಬೇಕು ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಜನರ ಕಷ್ಟ, ಸುಖಗಳಿಗೆ ಸ್ಪಂದಿಸುವುದು ಜೆಡಿಎಸ್‌ನಿಂದ ಮಾತ್ರ ಎಂಬುದನ್ನು ಅರಿತಿದ್ದಾರೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. 

ಮಳೆಗೆ ಎಚ್‌ಡಿಕೆ ಕಾರಣರಾದರೆ ಮಳೆಹಾನಿಗೂ ಅವರೇ ಕಾರಣರೆ?: ಸಿ.ಪಿ.ಯೋಗೇಶ್ವರ್‌

ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುತ್ತಿಲ್ಲ. ನಾಡಿನ ಜನತೆ ಕಟ್ಟುವ ತೆರಿಗೆ ಹಣದಲ್ಲಿ ಸ್ವೇಚ್ಛಾಚಾರ ನಡೆದು ಲೂಟಿ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳು ಸಾಕಷ್ಟಿದ್ದರೂ ಇವುಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಇಂದಿನ ದೇಶ ಮತ್ತು ರಾಜ್ಯದ ರಾಜಕಾರಣ ನೋಡುತ್ತಿದ್ದರೆ ಬೇಸರವಾಗುತ್ತಿದೆ. ರೈತರ ಸಮಸ್ಯೆ ಬಗೆಹರಿಸಲು, ರೈತ ಪರ ಹೋರಾಟ ಮಾಡುವ ಜೆಡಿಎಸ್‌ ಪಕ್ಷಕ್ಕೆ ಜನರು ಆಶೀರ್ವಾದ ಮಾಡಬೇಕು ಎಂದು ಕೋರಿದರು. ತಾಲೂಕಿನ ಜನರು ದೇವೇಗೌಡರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ನಿಮ್ಮ ಪಕ್ಷವನ್ನು ನೀವೇ ಬೆಳೆಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸುರೇಶ್‌ಗೌಡರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆರೋಗ್ಯ ದೇವರ ಅನುಗ್ರಹದಿಂದ ಚೇತರಿಕೆ ಕಾಣುತ್ತಿದೆಯ ಮೊನ್ನೆ ಅವರೇ ಗಣಪತಿ ಪೂಜೆ ಮಾಡಿದ್ದಾರೆ. ಭಗವಂತನ ದಯೆಯಿಂದ ಆರೋಗ್ಯ ಸುಧಾರಣೆ ಆಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಈ ವೇಳೆ ಶಾಸಕ ಸುರೇಶ್‌ಗೌಡ, ಮನ್ಮುಲ್‌ ನಿರ್ದೇಶಕ ಕೋಟಿ ರವಿ, ಮುಖಡರಾದ ರಾಮಚಂದ್ರು, ಡೈಮಂಡ್‌ ನರಸಿಂಹಮೂರ್ತಿ, ರವಿ, ಚನ್ನಪ್ಪ, ಶಂಕರಲಿಂಗೇಗೌಡ, ಮುದ್ದನಘಟ್ಟ ಮಹಾಲಿಂಗೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ಮುರುಘಾ ಮಠದ ಶ್ರೀಗಳ ಬಂಧನ ಬಗ್ಗೆ ಚರ್ಚಿಸಲ್ಲ: ಎಚ್‌ಡಿಕೆ

ಪ್ರಧಾನಿ ಮೋದಿ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ: ರಾಜ್ಯಕ್ಕೆ ತಿಂಗಳಿಗೊಮ್ಮೆ ಬರುವ ಪ್ರಧಾನಿ ನರೇಂದ್ರ ಮೋದಿ ಏನು ಕೊಡುಗೆ ನೀಡಿದ್ದಾರೆ. ಏನು ಕೊಟ್ಟಿದ್ದೇವೆ ಅಂತ ಬರ್ತಾರೆ. ಇಲ್ಲೇನು ಗೊಂಬೆ ಕುಣಿಸೋಕೆ ಬರ್ತಾರಾ?. ರಾಜ್ಯದಲ್ಲಿ ಮಳೆಯಿಂದಾಗಿ 30 ರಿಂದ 40 ಸಾವಿರ ಕೋಟಿ ರು.ಗಳಷ್ಟುರೈತರ ಬೆಳೆ ಸೇರಿದಂತೆ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟಉಂಟಾಗಿದೆ. ಈ ಬಗ್ಗೆ ಮಾತನಾಡದ ಪ್ರಧಾನಿಗಳು ರಾಜ್ಯಕ್ಕೆ ಸುಮ್ಮನೇ ಭೇಟಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ರಾಮನಗರ ಎಸ್ಪಿ ಮತ್ತು ಜಿಲ್ಲಾಡಳಿತ ಬೆಂಗಳೂರಿನಿಂದ ಮೈಸೂರಿಗೆ ಸಂಚಾರ ಮಾಡುವವರು ಬೇರೆ ಮಾರ್ಗವಾಗಿ ಹೋಗಿ ಎಂದು ಹೇಳಿಕೆ ನೀಡಿದ್ದಾರೆ. ಇದರ ಅರ್ಥವೇನು ಕಾಮಗಾರಿ ಸರಿ ಎಂದಲವೇ ಎಂದು ಪತ್ರಕರ್ತರನ್ನೇ ಪ್ರಶ್ನೆ ಮಾಡಿದರು. ಮೈಸೂರು ಸಂಸದ ಪ್ರತಾಪ್‌ ಸಿಂಹ ಈ ವಿಚಾರವಾಗಿ ಯಾಕೆ ವಹಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?