ಸಿದ್ದು ದಾವಣಗೆರೆ ಕಾರ‍್ಯಕ್ರಮಕ್ಕೆ ಜನ ಸೇರಿಸಿದ್ದರು: ಸಚಿವ ಮಾಧುಸ್ವಾಮಿ

By Govindaraj SFirst Published Sep 5, 2022, 5:00 AM IST
Highlights

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ದಾವಣಗೆರೆ ಕಾರ್ಯಕ್ರಮಕ್ಕೆ ಜನರನ್ನು ಹೇಗೆ ಸೇರಿಸಿದ್ದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.

ತುಮಕೂರು (ಸೆ.05): ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ದಾವಣಗೆರೆ ಕಾರ್ಯಕ್ರಮಕ್ಕೆ ಜನರನ್ನು ಹೇಗೆ ಸೇರಿಸಿದ್ದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟು ಜನ ಸೇರಿಸಿದ್ದಾರೆ ಎಂದು ಆರೋಪ ಮಾಡಿದ್ದ ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ್‌ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. 

ಮೋದಿ ಅವರು 3800 ಕೋಟಿ ರು.ಕಾಮಗಾರಿ ಅನುಷ್ಟಾನ ಮಾಡುವುದಕ್ಕೆ, ಅಧಿಕೃತವಾಗಿ, ಈ ದೇಶದ ಪ್ರಧಾನಿಯಾಗಿ ಬಂದಿದ್ದರು. ಎಂ.ಬಿ. ಪಾಟೀಲ್‌ಗೆ ಸೌಜನ್ಯ ಇದ್ದಿದ್ದರೆ ಕಾಮೆಂಚ್‌ ಮಾಡಬಾರದಿತ್ತು. ಅದು ಬಿಜೆಪಿ ಪಕ್ಷದ ಕಾರ್ಯಕ್ರಮ ಅಲ್ಲ ಸರ್ಕಾರಿ ಕಾರ್ಯಕ್ರಮ. ಸರ್ಕಾರಿ ಕಾರ್ಯಕ್ರಮದಲ್ಲಿ ಯಾವ, ಯಾವ ರೀತಿ ಜನ ಕರೆಸಿಕೊಳ್ಳಬೇಕು ಅನ್ನುವುದು ಅಲ್ಲಿನ ಸ್ಥಳೀಯರಿಗೆ ಬಿಟ್ಟಿದ್ದು. ಅದೇ ರೀತಿ ಜನರನ್ನ ಕರೆಸಿಕೊಂಡಿದ್ದಾರೆ. ಅದೊಂದು ಅಧಿಕೃತ ಸರ್ಕಾರಿ ಕಾರ್ಯಕ್ರಮ ಎಂದರು.

ನೀರಾವರಿ ಇಲಾಖೆಯ ಎಲ್ಲಾ ಕೆರೆಗಳು ಸುಭದ್ರ: ಸಚಿವ ಮಾಧುಸ್ವಾಮಿ

ಪೊಲೀಸರಿಗೆ ತಡೆ ಇರಲಿಲ್ಲ: ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ತಡವಾಗಿ ಪೋಲಿಸರು ಶ್ರೀಗಳನ್ನ ಬಂಧಿಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾನೂನು ಸಚಿವರು, ಪೊಲೀಸರಿಗೆ ಯಾವುದೇ ರೀತಿಯಲ್ಲಿ ಅಭ್ಯಂತರಗಳು, ತಡೆಗಳು ಇರಲಿಲ್ಲ. ಅವರು ಆಲೋಚನೆ ಮಾಡಿ ಕ್ರಮ ಜರುಗಿಸಿದ್ದಾರೆ. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಪೊಲೀಸರ ಮೇಲೆ ಟೀಕೆ ಮಾಡೊದು ಸರಿಯಲ್ಲ. ಯಾವುದೇ ಹಂತದಲ್ಲೂ ಅವರ ಮೇಲೆ ಒತ್ತಡ ಇರಲಿಲ್ಲ. ಪೊಲೀಸರು ವಿವೇಚನೆ ಬಳಸಿ ಬಂಧಿಸುವುದು ಸಹಜ. ಬಂಧನ ಕಡ್ಡಾಯವಲ್ಲ. ಎಲ್ಲ ಕೇಸ್‌ಗಳಲ್ಲೂ ಬಂಧಿಸಬೇಕು ಅಂತ ಇಲ್ಲ. 

ಆದರೆ ಆರೋಪಿ ಸಹಕರಿಸದೇ ಇದ್ದರೆ ಟ್ಯಾಂಪರ್‌ ಆಗುತ್ತದೆ. ಸಾಕ್ಷಿ ವಿಚಾರಣೆಗಾದರೆ ತಕ್ಷಣ ಪೊಲೀಸರು ತಮ್ಮ ಸುಪರ್ಧಿಗೆ ತೆಗೆದುಕೊಳ್ಳುತ್ತಾರೆ. ಅವರು 3-4 ಹಂತಗಳಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅದಕ್ಕೆಲ್ಲಾ ನ್ಯಾಯಾಲಯ 2-3 ದಿನ ಕಾಲಾವಧಿ ತೆಗೆದುಕೊಂಡಿದೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಏಕಾಏಕಿ ಹೋಗಿ ಮುರುಘಾಶರಣರನ್ನು ಬಂಧಿಸಲು ಆಗುತ್ತಿರಲಿಲ್ಲ. ಸಂತ್ರಸ್ತರ ಹೇಳಿಕೆ ತೆಗೆದುಕೊಂಡು, ನ್ಯಾಯಾಧೀಶರು ಸೂಚನೆ ಕೊಟ್ಟಮೇಲೆ ಶ್ರೀಗಳನ್ನು ಬಂಧಿಸಿದ್ದಾರೆ. ನಾವು ಯಾರೂ ಕಾನೂನು ಪಾಲನೆಯಲ್ಲಿ ಪೊಲೀಸರು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಧ್ಯೆ ಬಾಯಿ ಹಾಕೋದಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಬಿಜೆಪಿ ಸಚಿವ ಸೇರಿ ಇಬ್ಬರು ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ: ಕೆ.ಎನ್.ರಾಜಣ್ಣ

ಎಸ್‌ಪಿಎಂ ಬಂದರೆ ಸ್ವಾಗತ: ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ ಎಸ್‌.ಪಿ.ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ವಿಷಯವನ್ನು ನಾನು ಮಾಧ್ಯಮಗಳಲ್ಲಿ ಓದಿದ್ದೇನೆ. ಕಾಂಗ್ರೆಸ್‌ ಬಿಡುತ್ತೇನೆ ಅಂದಿದ್ದರು. ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದಾರೆ. ನಮಗೆ ಮುಂದಿನ ಬೆಳವಣಿಗೆಗಳು ಗೊತ್ತಿಲ್ಲ. ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ ಎಂದು ಸಚಿವ ಮಾಧುಸ್ವಾಮಿ ಪ್ರಶ್ನೆಯೊದಕ್ಕೆ ಉತ್ತರಿಸಿದರು.

click me!