ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ 8 ಮಂದಿ ಕಾಂಗ್ರೆಸಿಗರು ಅವಿರೋಧ ಆಯ್ಕೆ

Kannadaprabha News   | Kannada Prabha
Published : Oct 28, 2025, 04:46 AM IST
Mandya Congress

ಸಾರಾಂಶ

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುವ ಮುನ್ನವೇ 8 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಮಂಡ್ಯ : ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ೧೨ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುವ ಮುನ್ನವೇ ೮ ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಇದರೊಂದಿಗೆ ಕಾಂಗ್ರೆಸ್‌ಗೆ ಅಧಿಕಾರ ಸುಲಭ ತುತ್ತಾಗಿ ಪರಿಣಮಿಸಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಉಭಯ ಪಕ್ಷಗಳು ಕಾಂಗ್ರೆಸ್‌ಗೆ ಸಮರ್ಥ ಪೈಪೋಟಿ ನೀಡುವುದಕ್ಕೆ ಸಾಧ್ಯವಾಗದೆ ಹೋದದ್ದು ದೊಡ್ಡ ದುರಂತ. ಅಭ್ಯರ್ಥಿಗಳನ್ನು ಹುರಿದುಂಬಿಸಿ ಕಣಕ್ಕಿಳಿಸುವ ಮೂಲಕ ನಾಯಕತ್ವ ವಹಿಸಿಕೊಂಡು ಚುನಾವಣೆ ಎದುರಿಸುವುದಕ್ಕೆ ದಳಪತಿಗಳು-ಕಮಲಪಡೆ ನಾಯಕರು ಹಿಂಜರಿದ ಪರಿಣಾಮ ಚುನಾವಣೆಗೂ ಮುಂಚಿತವಾಗಿಯೇ ಮುಖಭಂಗಕ್ಕೆ ಒಳಗಾಗುವಂತಾಗಿದೆ.

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಶಾಸಕ ಪಿ.ರವಿಕುಮಾರ್ ಅವರು ಬ್ಯಾಂಕ್ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದಲೂ ಅವಿರತವಾಗಿ ಶ್ರಮಿಸುತ್ತಾ ಎದುರಾಳಿ ಅಭ್ಯರ್ಥಿಗಳನ್ನು ಕರೆದು ಸಂಧಾನ ಸೂತ್ರಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನ್‌ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಕೂಡ ಈ ಅವಿರೋಧ ಆಯ್ಕೆಯ ಕಾರ್ಯಾಚರಣೆ ಸಫಲವಾಗುವುದಕ್ಕೂ ಕಾರಣೀಭೂತರಾಗಿದ್ದಾರೆ.

ಸಮರ್ಥರನ್ನು ಕಣಕ್ಕಿಳಿಸುವಲ್ಲಿ ವಿಫಲ:

ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಉಭಯ ಪಕ್ಷಗಳ ನಾಯಕರು ವಿಫಲರಾಗಿರುವುದು ಎದ್ದು ಕಾಣುತ್ತಿದೆ. ಮೈತ್ರಿಯಾದರೂ ಶಕ್ತಿ ಪ್ರದರ್ಶನ ಪ್ರದರ್ಶಿಸುವ ಗೋಜಿಗೆ ಹೋಗದೆ ಶಸ್ತ್ರ ಕೆಳಗಿಳಿಸಿದಂತೆ ಕಂಡುಬರುತ್ತಿದ್ದಾರೆ. ಜಿಲ್ಲೆಯೊಳಗೆ ಜೆಡಿಎಸ್ ತನ್ನ ಅಸ್ತಿತ್ವ, ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದಕ್ಕೂ ಪ್ರಬಲರನ್ನು ಕಣಕ್ಕಿಳಿಸುವುದಕ್ಕೆ ಆಸಕ್ತಿಯನ್ನು ಪ್ರದರ್ಶಿಸಲಿಲ್ಲ. ಇದು ಜಿಲ್ಲೆಯೊಳಗೆ ಕುಗ್ಗಿಹೋಗಿರುವ ಜೆಡಿಎಸ್ ಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಏಳು ತಾಲೂಕುಗಳಲ್ಲಿರುವ ಜೆಡಿಎಸ್-ಬಿಜೆಪಿ ನಾಯಕರು ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದೇ ಹೋಗಿದ್ದರಿಂದ ಕಾಂಗ್ರೆಸ್ ಅಧಿಕಾರವನ್ನು ಸುಲಭವಾಗಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅವಿರೋಧ ಆಯ್ಕೆಯಾದವರು:

ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಎಂ.ನರೇಂದ್ರಸ್ವಾಮಿ, ನಾಗಮಂಗಲ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸಚಿನ್ ಚಲುವರಾಯಸ್ವಾಮಿ, ಮದ್ದೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಸಂದರ್ಶ, ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಬಿ.ಗಿರೀಶ, ಜಿಲ್ಲೆಯ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ವಿ.ದಿನೇಶ್, ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಹೆಚ್.ಅಶೋಕ, ಪಾಂಡವಪುರ ಉಪ ಇಭಾಗದ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಎ.ವಿಜೇಂದ್ರಮೂರ್ತಿ, ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಸಿ.ಜೋಗಿಗೌಡ ಅವಿರೋಧ ಆಯ್ಕೆಯಾಗಿದ್ದಾರೆ.

ನಾಲ್ಕು ಸ್ಥಾನಗಳಿಗೆ ಚುನಾವಣೆ:

ಮಂಡ್ಯ ತಾಲೂಕು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್, ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ವಾಮಿ, ಪಾಂಡವಪುರ ತಾಲೂಕು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎ.ಆರ್.ಅಶೋಕ, ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೆಚ್.ಸಿ.ಪುಟ್ಟಸ್ವಾಮಿಗೌಡ, ಕೆ.ಆರ್.ಪೇಟೆ ತಾಲೂಕು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಸ್.ಎಸ್.ಅಂಬರೀಶ್, ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಧರಣೇಶ್‌ಕುಮಾರ್ ಹಾಗೂ ಮಂಡ್ಯ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಕಾಮಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಚಲುವರಾಜು, ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿ.ಎಂ.ವಿಶ್ವನಾಥ್ ಕಣದಲ್ಲಿ ಉಳಿದುಕೊಂಡಿದ್ದಾರೆ. ವಿಶ್ವನಾಥ್ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಾಗಿರುವ ನಾಮಪತ್ರ ಸಿಂಧುತ್ವ ಪ್ರಕರಣ ಮುಂದಿನ ಆದೇಶಕ್ಕೆ ಒಳಪಟ್ಟಿದೆ ಎಂದು ಚುನಾವಣಾಧಿಕಾರಿ ಎಂ.ಶಿವಮೂರ್ತಿ ತಿಳಿಸಿದ್ದಾರೆ. ಕಾಂಗ್ರೆಸ್ ಕೈಗೆ ಅಧಿಕಾರಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ೧೨ ನಿರ್ದೇಶಕ ಸ್ಥಾನಗಳ ಪೈಕಿ ೮ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವುದರಿಂದ ಅಧಿಕಾರ ಪಕ್ಷದ ಕೈಗೆ ಬಂದಾಗಿದೆ. ಉಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಸಚಿವರ ಮಾರ್ಗದರ್ಶನದಲ್ಲಿ ಯು.ಸಿ.ಶಿವಕುಮಾರ್, ಜೋಗಿಗೌಡರು ಸಾಕಷ್ಟು ಶ್ರಮಿಸಿ ಅವಿರೋಧ ಆಯ್ಕೆಗೆ ನೆರವಾಗಿದ್ದಾರೆ.

-ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ